ಇಂದು ಮೇ 1. ವಿಶ್ವ ಕಾರ್ಮಿಕರ ದಿನಾಚರಣೆ. ಚಿತ್ರೋದ್ಯಮವನ್ನೇ ನಂಬಿಕೊಂಡ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ಕೂಡ ಮೇ ದಿನದ ಆಚರಣೆಗೆ ಮುಂದಾಗಿದೆ. ಆದರೆ ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಹಿಂದಿನಂತಿಲ್ಲ.

ಹೊಸ ತಂತ್ರಜ್ಞಾನ ಮತ್ತು ಸರ್ಕಾರದ ಹೊಸ ನೀತಿಗಳು ಚಲನಚಿತ್ರೋದ್ಯಮದಲ್ಲೂ ಸಾಕಷ್ಟುಬದಲಾವಣೆಗೆ ನಾಂದಿ ಹಾಡಿವೆ. ಸಿನಿಮಾ ನಿರ್ಮಾಣ ಮೊದಲಿಗಿಂತ ಸುಲಭ ಎನಿಸಿದೆ. ಆದರೆ ಕಾರ್ಮಿಕರಿಗೆ ಉದ್ಯೋಗವೇ ಇಲ್ಲದಂತಾಗಿದೆ. ಡಬ್ಬಿಂಗ್‌ ಕೂಡ ಈಗ ಕನ್ನಡಕ್ಕೆ ಕಾಲಿಟ್ಟಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್‌ ಜತೆಗೆ ಮಾತುಕತೆ.

- ಒಕ್ಕೂಟದಿಂದಲೂ ‘ ಮೇ ಡೇ’ ಆಚರಿಸುವ ಪದ್ಧತಿ ಇದೆಯಾ?

ಅರೆ, ಅದ್ಯಾಕಿಲ್ಲ. ಚಿತ್ರೋದ್ಯಮದಲ್ಲಿನ ಕೆಲಸಗಾರರು ಕೂಡ ಕಾರ್ಮಿಕರು ಅಲ್ವಾ ? ಅವರೆಲ್ಲ ಒಂದು ವ್ಯವಸ್ಥಿತ ಸಂಘಟನೆಯೊಳಗೆ ಬಂದ ದಿನಗಳಿಂದಲೂ ಕಾರ್ಮಿಕರ ಒಕ್ಕೂಟ ಮೇ ದಿನಾಚರಣೆ ಆಚರಿಸುತ್ತಾ ಬರುತ್ತಿದೆ. ಈ ಬಾರಿಯೂ ಒಕ್ಕೂಟದ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಿ, ಸಭೆ ನಡೆಸುತ್ತೇವೆ.

ಕಾರ್ಮಿಕ ಸಂಘಟನೆಗಳು ಈಗ ಮುಂಚಿನಷ್ಟುಶಕ್ತಿ ಹೊಂದಿಲ್ಲದಿರಬಹುದು, ಆದರೆ ಒಕ್ಕೂಟದ ಅಷ್ಟುಸದಸ್ಯರು ಈ ನೆಪದಲ್ಲಾದರೂ ಒಂದೆಡೆ ಸೇರಿಕೊಂಡು ತಮ್ಮ ಕಷ್ಟ-ಸುಖ ಹಂಚಿಕೊಳ್ಳುವುದಕ್ಕೆ ಇದು ವೇದಿಕೆ ಆಗುತ್ತಿದೆ ಎನ್ನುವುದು ಖುಷಿ ವಿಚಾರ.

- ಕಾರ್ಮಿಕರ ಒಕ್ಕೂಟದಲ್ಲೀಗ ಎಷ್ಟುಜನ ಸದಸ್ಯರಿದ್ದಾರೆ, ಅದರ ಸ್ಥಿತಿಗತಿ ಈಗ ಹೇಗಿದೆ?

ಒಕ್ಕೂಟದಲ್ಲೀಗ 22 ವಿಭಾಗಗಳಲ್ಲಿ ಮೂರುವರೆ ಸಾವಿರ ನೋಂದಾಯಿತ ಸದಸ್ಯರಿದ್ದಾರೆ. ಕೆಲವರು ಭಿನ್ನಾಭಿಪ್ರಾಯಗಳ ಮೂಲಕ ಒಕ್ಕೂಟದಿಂದ ಹೊರ ಹೋಗಿದ್ದಾರೆ. ಹಾಗೆ ಹೋದಾಗಲೂ ಅವರನ್ನು ಒಕ್ಕೂಟ ಒಳಗೊಳುವ ಕೆಲಸ ಮಾಡುತ್ತಿದೆ. ಒಂದಷ್ಟುಜನ, ಒಂದೆಡೆ ಸೇರಿಕೊಂಡರೆ ಸಣ್ಣ ಪುಟ್ಟಭಿನ್ನಾಭಿಪ್ರಾಯ ಸಹಜ.

ಆದರೆ, ಎಲ್ಲಾ ಕಾರ್ಮಿಕರ ಹಿತ ಕಾಯುವುದೇ ಒಕ್ಕೂಟದ ಕೆಲಸ. ಅದನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಮುಂದೆಯೂ ಮಾಡುತ್ತದೆ. ಆದರೆ ಈಗ ಸಮಸ್ಯೆಗಳು ಬೇರೆ ರೀತಿಯಲ್ಲಿವೆ. ಅದೇ ನಮ್ಮ ಮುಂದಿರುವ ಸವಾಲು.

- ಡಬ್ಬಿಂಗ್‌ ಬಂತು, ಮತ್ತೊಂದೆಡೆ ಸಿಸಿಐ ಹೊಸ ನೀತಿ ಬಂತು, ಒಕ್ಕೂಟದ ಸದಸ್ಯರಿಗೆ ಈಗಲೂ ಕೆಲಸ ಸಿಗುತ್ತಾ?

ನಮಗೆ ಡಬ್ಬಿಂಗ್‌ ಸಮಸ್ಯೆ ಆಗಿಲ್ಲ, ಹೊಡೆತ ನೀಡಿದ್ದು ಸಿಸಿಐ (ಕಾಂಪಿಟೇಷನ್‌ ಕಮಿಷನ್‌ ಆಫ್‌ ಇಂಡಿಯಾ) ನೀತಿ. ಯಾವುದೇ ಕ್ಷೇತ್ರದಲ್ಲಿ ಯಾರಾದರೂ ಕೆಲಸ ಮಾಡಬಹುದು ಎನ್ನುವುದು ಸಿಸಿಐ ಸೂಚನೆ. ಅದು ಜಾರಿಗೆ ಬಂದ ನಂತರ ಒಕ್ಕೂಟದಲ್ಲಿರುವ ಪರಿಣಿತ ಕಾರ್ಮಿಕರಿಗೆ ಬೇಡಿಕೆ ಕಮ್ಮಿ ಆಗಿದೆ.

ಸಣ್ಣ-ಪುಟ್ಟಸಿನಿಮಾಗಳ ನಿರ್ಮಾಪಕರು ತಮಗೆ ಬೇಕಾದವರನ್ನು ಕರೆ ತಂದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಒಕ್ಕೂಟದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎನ್ನುವುದು ದುರಂತ.

- ಡಬ್ಬಿಂಗ್‌ ಬಂದ್ರೆ ಇಲ್ಲಿನ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತೆ ಅಂತ ಈ ಹಿಂದೆ ಹೇಳಲಾಗುತ್ತಿತ್ತು ಅಲ್ವಾ?

ಹಾಗೊಂದು ಭಯ ಇದಿದ್ದು ನಿಜ. ಆದ್ರೆ ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಡಬ್ಬಿಂಗ್‌ ಸಿನಿಮಾಗಳು ಯಾವು ಗೆದ್ದಿಲ್ಲ. ಅದರರ್ಥ ಇಲ್ಲಿನ ಜನ ಡಬ್ಬಿಂಗ್‌ ಸಿನಿಮಾಕ್ಕೆ ಒಗ್ಗಿಲ್ಲ. ಹಾಗಾಗಿ ಎಷ್ಟೇ ಡಬ್ಬಿಂಗ್‌ ಸಿನಿಮಾ ಬಂದ್ರು, ಕನ್ನಡ ಸಿನಿಮಾಗಳ ನಿರ್ಮಾಣ ಇದ್ದೇ ಇರುತ್ತೆ ಎನ್ನುವುದು ನನ್ನ ನಂಬಿಕೆ. ಇಲ್ಲಿ ಕಾರ್ಮಿಕರಿಗೆ ಸಮಸ್ಯೆ ಅಂತ ಆಗಿದ್ದು ಸಿಸಿಐ ನೀತಿ.

- ಹಾಗಾದ್ರೆ, ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸದಸ್ಯರು ಪರ್ಯಾಯ ದಾರಿ ಕಂಡುಕೊಳ್ಳಬೇಕು ಅಂತಾನಾ?

ಪರಿಸ್ಥಿತಿ ಹಾಗಿಲ್ಲ. ಇಲ್ಲೀಗ ಹಿಂದಿಗಿಂತ ಅತೀ ಹೆಚ್ಚು ಸಿನಿಮಾ ನಿರ್ಮಾಣ ಆಗುತ್ತಿವೆ. ವರ್ಷಕ್ಕೆ ಕನಿಷ್ಟ200 ಸಿನಿಮಾ ಅಂದ್ರೆ ಇಲ್ಲಿರುವ ಅಷ್ಟುಕಾರ್ಮಿಕರಿಗೂ ವರ್ಷವೀಡಿ ಕೆಲಸವಿದೆ. ಅದಕ್ಕೆ ಪೂರಕವಾಗಿ ಉದ್ಯಮದ ಜನರು, ಕೆಲಸಗಳಿಗೆ ಇನ್ನಾರನ್ನೋ ಕರೆದುಕೊಂಡು ಬರುವುದಕ್ಕಿಂತ, ಇಲ್ಲಿರುವ ಪರಿಣಿತ ಕಾರ್ಮಿಕರಿಗೆ ಕೆಲಸ ಕೊಟ್ಟರೆ, ಗುಣಮಟ್ಟದ ಸಿನಿಮಾ ಮಾಡುವುದಕ್ಕೂ ಸಾಧ್ಯವಾಗುತ್ತೆ. ಆ ಕೆಲಸ ಮುಂದೆಯಾದರೂ ಆಗಬೇಕು.

- ಭದ್ರತೆ, ಆರೋಗ್ಯ ದೃಷ್ಟಿಯಿಂದ ಚಲನ ಚಿತ್ರ ಕಾರ್ಮಿಕರ ಒಕ್ಕೂಟ ಕಾರ್ಮಿಕರಿಗೆ ಏನು ಸೌಲಭ್ಯ ನೀಡಿದೆ?

ಕಾರ್ಮಿಕರಿಗೆ 3.5 ಲಕ್ಷದವೆರೆಗೆ ಆರೋಗ್ಯ ವಿಮಾ ಸೌಲಭ್ಯ ಒಕ್ಕೂಟದ ಮೂಲಕವೇ ಸಿಗುತ್ತದೆ. ಮೇಲಾಗಿ ಒಕ್ಕೂಟದ ನೋಂದಾಯಿತ ಸದಸ್ಯರಿಗೆ ಕೆಲಸ ಕಾಯಂ ಸಿಗುತ್ತದೆ. ಇಂತಹ ಹಲವು ಸೌಲಭ್ಯಗಳು ಒಕ್ಕೂಟದ ಮೂಲಕ ಲಭ್ಯವಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಅಸಂಘಟಿತ ವಲಯದಲ್ಲಿದ್ದು ಆಭದ್ರತೆಯಿಂದ ಬಳಲುವ ಕಾರ್ಮಿಕರನ್ನು ಒಕ್ಕೂಟದ ಒಳಗಡೆ ತಂದು ಅವರಿಗೆ ಆತ್ಮಸ್ಥೈರ್ಯ ನೀಡಲಾಗುತ್ತದೆ.