ಜೂನ್‌ 2ರಂದು ಯದಾ ಯದಾ ಹಿ  ಸಿನಿಮಾ ತೆರೆಗೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯಾಗಿ ನಟಿಸಿರುವ ‘ಯದಾ ಯದಾ ಹಿ’ ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಅಶೋಕ ತೇಜ ನಿರ್ದೇಶಿಸಿ, ರಾಜೇಶ್‌ ಅಗರವಾಲ್‌ ನಿರ್ಮಿಸಿರುವ ಚಿತ್ರವಿದು.

ಒಂದು ಕೊಲೆಯ ಸುತ್ತಾ ಸಾಗುವ ಸಸ್ಪೆನ್ಸ್‌ ಥ್ರಿಲ್ಲರ್‌ ಕ್ರೈಮ್‌ ಸಿನಿಮಾ. ಜಾಕ್‌ ಮಂಜು ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಜೂನ್‌ 2ರಂದು ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟೈಟಲ… ಸಾಂಗನ್ನು ಸುದೀಪ್‌ ಬಿಡುಗಡೆ ಮಾಡಿದ್ದರು. ಈ ಹಾಡನ್ನು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹಾಡಿದ್ದು ವಿಶೇಷ.

ನಟ ವಸಿಷ್ಠ ಸಿಂಹ ಮಾತನಾಡಿ ‘ನಿರ್ದೇಶಕ ಅಶೋಕ ತೇಜ ಹೇಳಿದ ಕತೆ ಆಸಕ್ತಿಕರವಾಗಿತ್ತು. ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಥ್ರಿಲ್ಲಿಂಗ್‌ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಚಿತ್ರದ ಪ್ರತಿ ಪಾತ್ರವೂ ಅದ್ಭುತವಾಗಿದೆ. ಇದರಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ’ ಎಂದರು. ಹರಿಪ್ರಿಯಾ, ‘ಈ ಚಿತ್ರದ ಕತೆ ಇಷ್ಟವಾಗಿ ನಾನು ನಟಿಸಲು ಒಪ್ಪಿಕೊಂಡೆ. ನಟನೆಗೆ ಸ್ಕೋಪ್‌ ಇರುವಂತಹ ಪಾತ್ರ ಇದು. ತುಂಬಾ ಸವಾಲಿನ ಪಾತ್ರ ಸಿಕ್ಕಿದೆ. ಮಾಸ್‌ ಮತ್ತು ಕ್ಲಾಸ್‌ ಎನ್ನದೆ ಆರಂಭದಿಂದ ಕೊನೆವರೆಗೂ ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ’ ಎಂದರು.

ನಿರ್ಮಾಪಕ ರಾಜೇಶ್‌ ಅಗರವಾಲ್‌ ನಿರ್ಮಾಣದ ಮೊದಲ ಕನ್ನಡ ಸಿನಿಮಾ ಇದು. ಒಂದು ಒಳ್ಳೆಯ ಸಿನಿಮಾ ಮಾಡುವ ಕನಸು ನಿರ್ಮಾಪಕರಿಗೆ ಈ ಚಿತ್ರದ ಮೂಲಕ ಈಡೇರಿದೆಯಂತೆ. ಶ್ರೀಚರಣ್‌ ಪಾಕಾಲ ಸಂಗೀತ ನಿರ್ದೇಶನವಿದೆ. ಯೋಗಿ ಅವರ ಕ್ಯಾಮೆರಾ ಚಿತ್ರಕ್ಕಿದೆ.