ಮಾಡೆಲಿಂಗ್ ಮೂಲಕವೇ ಸಿನಿ ಜಗತ್ತಿಗೆ ಕಾಲಿಟ್ಟ ತಾನ್ಯಾ ಹೋಪ್, ನಟಿಯಾಗಿ ಬ್ಯುಸಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅಭಿಷೇಕ್ ಅಂಬರೀಷ್ ಅಭಿನಯದ ‘ಅಮರ್’, ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಹಾಗೂ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುಭಾಷಾ ಚಿತ್ರ ‘ಉದ್ಘರ್ಷ’ದಲ್ಲೂ ನಾಯಕಿ ಆಗಿ ಅಭಿನಯಿಸಿದ್ದು, ಅವು ಇನ್ನಷ್ಟೇ ತೆರೆಗೆ ಬರಬೇಕಿದೆ. ಈಗಾಗಲೇ ತೆರೆ ಕಂಡಿರುವ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲೂ ಅವರ ನಟನೆಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಈ ಮೂಲಕ ತಾನ್ಯ ಹೋಪ್ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹೋಪ್ ಮೂಡಿಸಿದ್ದಾರೆ. ಈ ನಡುವೆಯೇ ಈಗ ‘ಖಾಕಿ’ ತೊಟ್ಟ ಚಿರು ಎದುರು ತಾನ್ಯಾ ನಾಯಕಿ ಆಗಿರುವುದನ್ನು ತರುಣ್ ಶಿವಪ್ಪ ಖಚಿತ ಪಡಿಸಿದ್ದಾರೆ.

‘ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆಯಿದೆ. ಆ ಪಾತ್ರಕ್ಕೆ ಸೂಕ್ತ ನಟಿಯನ್ನು ಹುಡುಕುತ್ತಿದ್ದಾಗ ತಾನ್ಯಾ ಹೋಪ್ ಸೂಕ್ತ ಎನಿಸಿದರು. ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸಿ, ಅವರ ಕಾಲ್ ಶೀಟ್ ಫೈನಲ್ ಮಾಡಿಕೊಂಡಿದ್ದೇವೆ. ಚಿರು ಹಾಗೂ ತಾನ್ಯಾ ಜೋಡಿ ಚಿತ್ರಕ್ಕೆ ಸೂಕ್ತ ಎನಿಸುತ್ತಿದೆ’ ಎನ್ನುತ್ತಾರೆ ತರುಣ್ ಶಿವಪ್ಪ. ಕನ್ನಡದ ಜತೆಗೆ ಈ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ಎರಡು ಭಾಷೆಗೂ ಪೂರಕವಾಗುವಂತೆ ಚಿತ್ರತಂಡ ಕಲಾವಿದರ ಆಯ್ಕೆಗೆ ಆದ್ಯತೆ ನೀಡಿದೆ. ಬಹುಭಾಷಾ ನಟ ದೇವ್‌ಗಿಲ್ ಚಿತ್ರದ ಮತ್ತೊಂದು ಆಕರ್ಷಣೆ. ಚಿರು ಎದುರು ದೇವ್ ಗಿಲ್ ಖಳನಟರಾಗಿ ಅಬ್ಬರಿಸಲಿದ್ದಾರೆ.

'ಯಜಮಾನ'ದ 'ಬಸಣಿ ನಾಚ್' ತಾನ್ಯ ಯಾರು?