ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್
ತಮಿಳು ಸ್ಟಾರ್ ಧನುಷ್ ಕಾಂತಾರ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, ರಿಷಬ್ ಶೆಟ್ಟಿಗೆ ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.
ಈಗ ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದ್ದೇ ಹವಾ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕಾಂತಾರ ಸಿನಿಮಾದೇ ಸದ್ದು. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗು ಸ್ಟಾರ್ ಪ್ರಭಾಸ್, ನಾನಿ, ಮಲಯಾಳಂ ನಟ ಪೃಥ್ವಿರಾಜ್ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ಸ್ಟಾರ್ ಧನುಷ್ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, ರಿಷಬ್ ಶೆಟ್ಟಿಗೆ ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.
ಸೆಪ್ಟಂಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ನೋಡಿ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾದ ಹಾಡು ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ಪ್ರೇಕ್ಷಕರ ಹೃದಯ ಗೆದ್ದಿದೆ. ಇದೀಗ ಕಾಂತಾರ ಧನುಷ್ ಹೃದಯ ಗೆದ್ದಿದೆ. ಈ ಬಗ್ಗೆ ಧನುಷ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, 'ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ' ಎಂದು ಹೇಳಿದ್ದಾರೆ.
ಧನುಷ್ ಟ್ವೀಟ್‌ಗೆ ಕನ್ನಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಧನುಷ್ ಅಭಿಮಾನಿಗಳು ಕಾಮೆಂಟ್ ಮಾಡಿ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಕನ್ನಡದ ಸಿನಿಮಾಗಳು ಗಡಿಗೂ ಮೀರಿ ಸದ್ದು ಮಾಡುತ್ತಿವೆ. ಅದರಲ್ಲೂ ಹೊಂಬಾಳೆ ಫಿಲ್ಮ್ಸ್‌ನಲ್ಲಿ ಬರ್ತಿರುವ ಸಿನಿಮಾಗಳು ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿವೆ.
Kantara; ರಿಷಬ್ ಶೆಟ್ಟಿ ಸಿನಿಮಾಗೆ ಪ್ರಭಾಸ್ ಫಿದಾ, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದೇನು?
ಕರಾವಳಿ ಸಂಸ್ಕೃತಿ, ಆಚಾರ-ವಿಚಾರವನ್ನು ಕಾಂತಾರ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ರಿಷಬ್. ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟದ ಬಗ್ಗೆ ರಿಷಬ್ ಶೆಟ್ಟಿ ಕಾಂತಾರ ಮೂಲಕ ಜನರ ಮುಂದಿಟ್ಟಿದ್ದಾರೆ. ಜೊತೆಗೆ ಕರಾವಳಿ ಮತ್ತು ಮಲೆನಾಡು ಭಾಗದ ದೈವಾರಾಧನೆ, ಭೂತಕೋಲದ ಆಚರಣೆ ಕಾಂತಾರದ ಹೈಲೆಟ್. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದರು. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Kantara 'ಮುಂದೆ ಈ ಥರ ಸಿನಿಮಾ ಮಾಡ್ತೀನೋ ಇಲ್ವೋ ಗೊತ್ತಿಲ್ಲ': ರಿಷಬ್ ಶೆಟ್ಟಿ
ಇನ್ನು ಕಾಂತಾರ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.