ಕೋವಿಡ್‌ ಟೈಮಲ್ಲಿ ಟ್ರಾವೆಲ್‌ ಮಾಡಿದರೆ ಏನಾಗತ್ತೆ?

ಸೋನು ಗೌಡ ಅವರಿಗೆ ಪ್ರವಾಸ ಹೊಸತಲ್ಲ. ಆದರೆ ಈ ನಿಯೊ ನಾರ್ಮಲ್‌ ಲೈಫ್‌ಸ್ಟೈಲ್‌ನಲ್ಲಿ ಕೇರಳದಂಥಾ ರಾಜ್ಯದಲ್ಲಿ ಪ್ರವಾಸ ಮಾಡಿದ್ದು ಹೊಸ ಅನುಭವ. ಆ ಖುಷಿಯನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.

ಕೇರಳ ಪ್ರವೇಶಿಸಿದ ಕೂಡಲೇ ಸೀಲ್‌

ಫ್ಯಾಮಿಲಿ ಜೊತೆಗೆ, ಸ್ನೇಹಿತರ ಜೊತೆಗೆ ಸಾಕಷ್ಟುಟ್ರಾವೆಲ್‌ ಮಾಡಿದ್ದೀನಿ. ಆದರೆ ಇದು ನನ್ನ ತಂಗಿ ನೇಹಾ ಸೀರಿಯಲ್‌ ಟೀಮ್‌ ಜೊತೆಗಿನ ಪಯಣ. ಹೀಗೆ ಕೋ ಆರ್ಟಿಸ್ಟ್‌ ಜೊತೆಗೆ ಟೂರ್‌ ಹೋಗ್ತಿರೋದು ಇದೇ ಫಸ್ಟ್‌. ಆದರೆ ಬೆಸ್ಟ್‌ ಅನುಭವ. ನಮ್ಮದು 13 ಜನರ ಗ್ಯಾಂಗ್‌. ಬೆಂಗಳೂರಿಂದ ಹೊರಟು ಕೇರಳ ಗಡಿಗೆ ತಲುಪುವವರೆಗೆ ಎಲ್ಲಾ ಚೆನ್ನಾಗಿತ್ತು. ಆದರೆ ಕೇರಳದೊಳಗೆ ಬಿಡುವಾಗ ನಮಗೆ ಕೋವಿಡ್‌ ಇದೆಯಾ ಅಂತ ಟೆಸ್ಟ್‌ ಮಾಡಿ ಕೈಗೆ ಕ್ವಾರೈಂಟೇನ್‌ ಸೀಲ್‌ ಹಾಕಿ ಬಿಟ್ರು!

ಪೊಲೀಸ್‌ಗೆ ಕಾಲ್‌ ಮಾಡಿದ ಅಟೋ ಡ್ರೈವರ್‌

ಕೈಗೆ ಕ್ವಾರಂಟೈನ್‌ ಸೀಲ್‌ ಹಾಕ್ಕೊಂಡೇ ನಾವು ಹೊಟೇಲ್‌ ಒಳಹೊಕ್ಕಿದ್ವಿ. ಅದನ್ನೊಬ್ಬ ಅಟೋ ಡ್ರೈವರ್‌ ನೋಡಿದ್ರು. ತಕ್ಷಣ ಪೊಲೀಸ್‌ಗೆ ಫೋನ್‌ ಮಾಡಿ, ಕೈಗೆ ಕ್ವಾರಂಟೇನ್‌ ಸೀಲ್‌ ಹಾಕ್ಕೊಂಡವರು ಹೊಟೇಲ್‌ನೊಳಗೆ ಹೋಗ್ತಿದ್ದಾರೆ ಅಂತ ಮಾಹಿತಿ ಕೊಟ್ಟರು. ಕೂಡಲೇ ಪೊಲೀಸ್‌ನವರು ಬಂದರು. ಇಲ್ಲಿ ಚಿಕ್ಕ ಹೊಟೇಲ್‌ಗೆ ಹೋದರೂ ನಿಮ್ಮ ನಂಬರ್‌ ತಗೋತಾರೆ. ಇಲ್ಲಿ ಯಾರಿಗಾದ್ರೂ ಕೋವಿಡ್‌ ಬಂದ್ರೆ ತಕ್ಷಣ ನಿಮಗೆ ಮಾಹಿತಿ ಕೊಡ್ತೀವಿ ಅನ್ನುವ ಭರವಸೆಯನ್ನೂ ನೀಡುತ್ತಾರೆ.

ವೈತಿರಿಯ ರೆಸಾರ್ಟ್‌ನಲ್ಲಿ ಕಳೆದ ಕ್ಷಣಗಳು

ಪ್ರವಾಸ ಹೋದಾಗ ನಾನ್ಯಾವತ್ತೂ ರೆಸಾರ್ಟ್‌ ಆಯ್ಕೆ ಮಾಡಿಕೊಳ್ಳೋದಿಲ್ಲ. ಆದರೆ ಈ ಬಾರಿ ಕೇರಳದ ಪ್ರವಾಸಿ ತಾಣಗಳನ್ನೆಲ್ಲ ಇನ್ನೂ ತೆರೆದಿಲ್ಲ. ಪ್ರವಾಸಿಗರೂ ಕಾಣ ಸಿಗಲ್ಲ. ನಾವೆಲ್ಲ ವಯನಾಡಿನ ವೈತಿರಿಯಲ್ಲಿ ಒಂದು ರೆಸಾರ್ಟ್‌ನಲ್ಲೇ ಉಳಿದುಕೊಂಡ್ವಿ. ರೆಸಾರ್ಟ್‌ನ ಪರಿಸರ, ಅಲ್ಲಿಂದ ಕಾಣುವ ಮಂಜು ಮುಸುಕಿದ ಬೆಟ್ಟಗಳ ನೋಟ ಎಲ್ಲವೂ ಸೊಗಸಾಗಿದ್ದವು. ಇಲ್ಲಿ ಹತ್ತಿರದಲ್ಲೇ ಒಂದೆರಡು ವ್ಯೂ ಪಾಯಿಂಟ್‌ಗಳಿಗೆ ಭೇಟಿ ನೀಡಿದ್ದಷ್ಟೇ ಬೇರೆಲ್ಲೂ ಹೋಗಿಲ್ಲ.

ಜಲಪಾತಕ್ಕಿಳಿದ ಅನುಭವ

ರೆಸಾರ್ಟ್‌ಗೆ ಹೋಗುವ ದಾರಿಯಲ್ಲಿ ಒಂದು ಬ್ಯೂಟಿಫುಲ್‌ ಜಲಪಾತ ಇತ್ತು. ಆ ಹಸಿರು ಪರಿಸರ ಬಹಳ ಚೆನ್ನಾಗಿತ್ತು. ಆದರೆ ಜಲಪಾತದೊಳಗೆ ಇಳಿಯಲು ಸಣ್ಣ ಕಾಲು ದಾರಿಯೂ ಇರಲಿಲ್ಲ. ನಾವೇ ದಾರಿ ಮಾಡಿಕೊಂಡು ಇಳಿಯತೊಡಗಿದೆವು. ಹತ್ತಿರದಿಂದ ಜಲಪಾತ ನೋಡಿದ್ದು ಅವಿಸ್ಮರಣೀಯ ಅನುಭವ. ಇದಕ್ಕೋಸ್ಕರ ಒಂದು ಗಂಟೆ ಟ್ರೆಕ್ಕಿಂಗ್‌ ಮಾಡಿದ್ವಿ.

ಟ್ರಾವೆಲ್‌ ಮಾಡಿ, ಆದರೆ ಮುನ್ನೆಚ್ಚರಿಕೆ ಇರಲಿ

ಟ್ರಾವೆಲ್‌ ಮಾಡಲು ಭಯ ಪಡಬೇಕಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಟೂರ್‌ ಮಾಡಬಹುದು. ಆದರೆ ಹೈಜಿನ್‌ ಅನ್ನು ಬಹಳ ಹುಷಾರಾಗಿ ಗಮನಿಸಿ. ನೀವು ತಂಗುವ ರೂಮ್‌ ಅನ್ನು ಸ್ಯಾನಿಟೈಸ್‌ ಮಾಡಿಸಿದ ಬಳಿಕವೇ ಬಳಸಿ. ಸ್ಯಾನಿಟೈಸರ್‌ ಜೊತೆಗೇ ಇರಲಿ. ಹೊರಗೆ ಊಟ, ತಿಂಡಿ ಮಾಡುವಾಗಲೂ ಹೈಜಿನ್‌ ಪರೀಕ್ಷಿಸಿ.