Asianet Suvarna News Asianet Suvarna News

ನೂರೆಂಟು ವಿಘ್ನಗಳನ್ನು ದಾಟಿ ತೆರೆಗೆ ಬಂದಿತ್ತು ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ'..!

'ನಾವಿಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂಬುದು ಇಡೀ ಕರುನಾಡಿಗೇ ಗೊತ್ತು. ಸಿನಿಮಾದಲ್ಲಿ ಕೂಡ ನಾನು ಹಾಗು ವಿಷ್ಣು ಹೊಡೆದಾಡಿಕೊಂಡರೆ, ಒಬ್ಬರದ್ದನ್ನು ಇನ್ನೊಬ್ಬರು ಕಸಿದುಕೊಂಡರೆ ಜನರು ಒಪ್ಪಲಾರರು. ಹೀಗಾಗಿ, ಈ ಸಿನಿಮಾದಲ್ಲಿ..

SV Rajendra Singh Babu faces many problems to shoot vishnuvardhan lead bandhana movie srb
Author
First Published Aug 30, 2024, 5:59 PM IST | Last Updated Aug 30, 2024, 5:59 PM IST

ಉಷಾ ನವರತ್ನರಾಂ ಕಾದಂಬರಿ ಆಧಾರಿತವಾದ ಸಿನಿಮಾ ಬಂಧನ. ಸಾಹಸಸಿಂಹ ವಿಷ್ಣುವರ್ಧನ್ ಹಾಗು ಸುಹಾಸಿನಿ ಜೋಡಿಯ ಬಂಧನ (Bandhana) ಚಿತ್ರವು 1984ರಲ್ಲಿ ತೆರೆಗೆ ಬಂದು ಆ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲೆ ಸ್ಥಾಪಿಸಿತ್ತು. ಆದರೆ, ಈ ಚಿತ್ರವನ್ನು ತೆರೆಗೆ ತರಬೇಕೆಂದು ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಅವರು 1977ರಲ್ಲೇ ನಿರ್ಧರಿಸಿದ್ದರು ಎನ್ನಲಾಗಿದೆ. ಈ ಕಾದಂಬರಿಯನ್ನು ಆಧರಿಸಿ ಕಥೆ-ಚಿತ್ರಕಥೆ ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದ ಬಾಬು ಅವರಿಗೆ ಈ ಕಾದಂಬರಿ ಹಕ್ಕು ನಟಿ ಕಲ್ಪನಾ ಬಳಿ ಇದೆ ಎಂದು ತಿಳಿದುಬಂತು. 

ನಟಿ ಕಲ್ಪನಾ ಬಳಿ ಈ ಬಗ್ಗೆ ಮಾತನಾಡಿ ಅವರನ್ನು ಒಪ್ಪಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅದಾಗಿ ಸ್ವಲ್ಪ ದಿನದಲ್ಲೇ ನಟಿ ಕಲ್ಪನಾ ಅವರು ಇಹಲೋಕ ತ್ಯಜಿಸಿ ಬಿಟ್ಟರು. ಕೊನೆಗೆ ಹೇಗೋ ಪ್ರಯತ್ನಪಟ್ಟು ಆ ಕಾದಂಬರಿ ರೈಟ್ಸ್ ಪಡೆದ ರಾಜೇಂದ್ರಸಿಂಗ್ ಬಾಬು ಅವರು 1980ರಲ್ಲಿ ಸಿನಿಮಾ ಶುರು ಮಾಡುತ್ತಾರೆ. ಆದರೆ, ಮತ್ತೆ ಈ ಚಿತ್ರದ ನಾಯಕ-ನಾಯಕಿ ಆಯ್ಕೆ ವಿಚಾರದಲ್ಲಿ ಸಮಸ್ಯೆ ಉಂಟಾಗುತ್ತದೆ. 

ವಿಷ್ಣುವರ್ಧನ್ ಚಿತ್ರದ ಮುಹೂರ್ತಕ್ಕೆ ಬಂದಿದ್ರು ಪಾರ್ವತಮ್ಮ ರಾಜ್‌ಕುಮಾರ್; ಆದ್ರೆ ಸುಹಾಸಿನಿ ಗೈರು!

ಸಿನಿಮಾ ಕಥೆ-ಚಿತ್ರಕಥೆ ಸಿದ್ಧವಾಗಿದ್ದರೂ ನಾಯಕ ಪಾತ್ರಕ್ಕೆ ನಟ ವಿಷ್ಣುವರ್ಧನ್ ಕಾಲ್‌ಶೀಟ್ ಸಿಗಲು ಸ್ವಲ್ಪ ತಡವಾಗುತ್ತದೆ. ಬಳಿಕ ನಾಯಕಿಯಾಗಿ ಆರತಿಯವರೇ ಬೇಕೆಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ನಿರ್ಧರಿಸಿರುತ್ತಾರೆ. ಆದರೆ, ಆರು ತಿಂಗಳು ಕಾದರೂ ಆರತಿಯವರ ಡೇಟ್ಸ್ ಸಿಗುವುದಿಲ್ಲ. ಬಳಿಕ, ವಿಜಯಲಕ್ಷ್ಮಿ ಸಿಂಗ್ ಅವರ ಮಾತಿಗೆ ಒಪ್ಪಿ ರಾಜೇಂದ್ರಸಿಂಗ್ ಬಾಬು ಅವರು ಸುಹಾಸಿನಿಯವರನ್ನು ಒಪ್ಪಿಸುತ್ತಾರೆ. ಈ ಚಿತ್ರಕ್ಕೆ ನಿರ್ಮಾಪಕರು ಹಾಗು ನಿರ್ದೇಶಕರು ಎರಡೂ ಆಗಿದ್ದರು ಎಸ್‌ವಿ ರಾಜೇಂದ್ರಸಿಂಗ್ ಬಾಬು. 

ಆದರೆ, ಬಳಿಕ ಮತ್ತೊಂದು ವಿಘ್ನ ಎದುರಾಗುತ್ತದೆ. ಚಿತ್ರದ ಮುಖ್ಯ ವಿಲನ್ ರೋಲ್‌ಗೆ ಕಥೆ ಮಾಡುವಾಗಲೇ ಬಾಬು ಅವರು ನಟ ಅಂಬರೀಷ್ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಅದರಂತೆ, ಅಂಬರೀಷ್‌ ಕಥೆ ಕೇಳಿದವರು ಸುತಾರಾಂ ತಾವು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದುಬಿಡುತ್ತಾರೆ. ಏಕೆಂದರೆ, ಅದು ನಾಯಕನಿಗೆ ತ್ದವಿರುದ್ಧವಾಗಿ ಇರುವ ವಿಲನ್ ಪಾತ್ರ. ಅಷ್ಟರಲ್ಲಾಗಲೇ ನಟರಾದ ವಿಷ್ಣು ಹಾಗು ಅಂಬಿ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. 

'ನಾವಿಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂಬುದು ಇಡೀ ಕರುನಾಡಿಗೇ ಗೊತ್ತು. ಸಿನಿಮಾದಲ್ಲಿ ಕೂಡ ನಾನು ಹಾಗು ವಿಷ್ಣು ಹೊಡೆದಾಡಿಕೊಂಡರೆ, ಒಬ್ಬರದ್ದನ್ನು ಇನ್ನೊಬ್ಬರು ಕಸಿದುಕೊಂಡರೆ ಜನರು ಒಪ್ಪಲಾರರು. ಹೀಗಾಗಿ, ಈ ಸಿನಿಮಾದಲ್ಲಿ ಕೂಡ ತಾವು ವಿಷ್ಣುವರ್ಧನ್ ವಿರೋಧಿ ಪಾತ್ರದಲ್ಲಿ ನಟಿಸುವುದಿಲ್ಲ' ಎಂದುಬಿಟ್ಟರು ಅಂಬರೀಷ್. ಬಳಿಕ, ಅನಿವಾರ್ಯವಾಗಿ ಅಂಬರೀಷ್ ಮಾಡಬೇಕಿದ್ದ ಪಾತ್ರಕ್ಕೆ ನಟ ಜೈಜಗದೀಶ್ ಅವರನ್ನು ಕರೆತರಲಾಯ್ತು. 

ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

ಇವೆಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಸಿನಿಮಾ ಶೂಟಿಂಗ್ ಮುಗಿಸಿ ಅದನ್ನು ತೆರೆಗೆ ತರುವಷ್ಟರಲ್ಲಿ 1983ನೇ ಇಸ್ವಿ ಕೂಡ ಮುಗಿದಿತ್ತು. ಬಳಿಕ, 1984ರ ಆಗಸ್ಟ್ 24ರಂದು (24 August 1984) ಬಂಧನ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಯ್ತು. ಸಿನಿಮಾ ಪ್ರೇಕ್ಷಕರು ಜೈಜಗದೀಶ್ ಮಾಡಿದ್ದ ಪಾತ್ರವನ್ನು ಅಂಬರೀಷ್ ಮಾಡಿದ್ದರೆ ಸರಿಬರುತ್ತಿರಲಿಲ್ಲ, ಮಾಡದಿರುವುದೇ ಒಳ್ಳೆಯದಾಯ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ, ಹಲವು ವಿಘ್ನಗಳನ್ನು ದಾಟಿ 'ಬಂಧನ' ತೆರೆಗೆ ಬಂದಿತ್ತು.

Latest Videos
Follow Us:
Download App:
  • android
  • ios