ಸೌತ್‌ ಇಂಡಿಯಾ ಚಿತ್ರ ಜಗತ್ತಿನಲ್ಲಿ ಇದು ಮೊದಲ ‘ಹಾರರ್‌ ಆ್ಯಂಥಾಲಜಿ’ಯ ಚಿತ್ರ ಅಂತಲೂ ಸದ್ದು ಮಾಡಿದೆ. ಕ್ರೌಡ್‌ ಫಂಡಿಂಗ್‌ ಮೂಲಕ 23 ಮಂದಿ ನಿರ್ಮಾಪಕರು ಒಟ್ಟಿಗೆ ಸೇರಿ ನಿರ್ಮಾಣ ಮಾಡಿದ ಚಿತ್ರ ಎನ್ನುವ ವಿಶೇಷತೆಯೂ ಇದಕ್ಕಿದೆ. ಈ ಚಿತ್ರ ಇಂದು ತೆರೆಗೆ ಬರುತ್ತಿದೆ.

‘ಸಿನಿಮಾ ಕ್ಷೇತ್ರಕ್ಕೆ ತುಸು ಡಿಫರೆಂಟ್‌ ಆಗಿ ಬರೋಣ ಅಂತ ಯೋಚಿಸುತ್ತಿದ್ದಾಗ ನಮಗೆ ತಕ್ಷಣಕ್ಕೆ ಹೊಳೆದಿದ್ದು ‘ಹಾರರ್‌ ಆ್ಯಂಥಾಲಜಿ’ ಕತೆ. ಆ್ಯಂಥಾಲಜಿ ಅಂದ್ರೆ ಮೂರಕ್ಕಿಂತ ಹೆಚ್ಚು ಉಪ ಕತೆಗಳ ಮೂಲಕ ಒಂದು ಸಿನಿಮಾ ಮಾಡುವ ಪರಿ. ಆ ಪ್ರಯೋಗಕ್ಕೆ ನಾವಿಲ್ಲಿ ಒಡ್ಡಿಕೊಂಡಿದ್ದೇವೆ. ಸೌತ್‌ ಇಂಡಿಯಾದಲ್ಲೇ ಇದು ಮೊದಲ ಪ್ರಯೋಗ. ಸಾಕಷ್ಟುಯೋಚಿಸಿ, ಚರ್ಚಿಸಿ, ಬರವಣಿಗೆಯನ್ನು ದೃಶ್ಯರೂಪಕ್ಕೆ ತಂದಾಗ ಖುಷಿ ಆಯಿತು. ಅದರ ಜತೆಗೆ ಟ್ರೇಲರ್‌ಗೆ ಸಿಕ್ಕ ಪ್ರತಿಕ್ರಿಯೆ ಭರವಸೆ ಮೂಡಿಸಿತು’ ಎನ್ನುತ್ತಾರೆ ನಿರ್ದೇಶಕ ಗಿರೀಶ್‌.

ಅವರಿಗೆ ಸಾಥ್‌ ನೀಡಿದ್ದು ಪತ್ರಕರ್ತರಾದ ರಮಾಕಾಂತ್‌ ಹಾಗೂ ಸೌಮ್ಯ ರಮಾಕಾಂತ್‌ ದಂಪತಿ. ಇವರು ಈ ಚಿತ್ರಕ್ಕೆ ನಿರ್ಮಾಪಕರು ಹೌದು, ಚಿತ್ರದಲ್ಲಿನ ಒಂದು ಉಪಕತೆಗೆ ಪ್ರಮುಖ ಪಾತ್ರಧಾರಿಗಳು ಹೌದು. ‘ರಿಯಲ್‌ ಲೈಫ್‌ನಲ್ಲಿ ಜೋಡಿಯಾದವರು ನಾವು, ಕಾಕತಾಳೀಯ ಎನ್ನುವ ಹಾಗೆ ರೀಲ್‌ ಮೇಲೂ ದಂಪತಿ ಆಗಿ ಅಭಿನಯಿಸಿದ್ದೇವೆ. ಅದು ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ನಂಬಿಕೆಯಲ್ಲಿದ್ದೇವೆ’ ಎಂದರು ರಮಾಕಾಂತ್‌.

ಉಳಿದ ಮೂರು ಉಪ ಕತೆಗೆ ಶರತ್‌, ಅಭಿ, ಕೀರ್ತಿ, ವಂದನಾ, ಅದಿತಿ, ಪ್ರಿಯಾಂಕ, ಪ್ರಣತಿ ಹಾಗೂ ಕಾರ್ತಿಕ್‌ ರಾವ್‌ ಪ್ರಮುಖ ಪಾತ್ರಧಾರಿಗಳು. ಪ್ರಧಾನ ಕತೆಗೆ ತಾಂಡವ್‌ ರಾವ್‌, ಶಕ್ತಿ ಸೋಮಣ್ಣ ಪ್ರಮುಖ ಪಾತ್ರಧಾರಿಗಳು. ನಿರ್ದೇಶಕ ಗಿರೀಶ್‌ ಪ್ರಕಾರ ಐದು ಉಪ ಕತೆಗಳು ಬೇರೆ ಬೇರೆ ಆಗಿದ್ದರೂ, ಅಷ್ಟುಕತೆಗಳ ಥೀಮ್‌ ಮಾತ್ರ ಒಂದೇ. ಆ್ಯಂಥಾಲಜಿ ಕತೆಗಳಲ್ಲಿ ಕಾಣುವ ವಿಶೇಷತೆಯೇ ಅದು, ಒಂದು ಪ್ರಧಾನ ಕತೆ ಇರುತ್ತೆ, ಅದಕ್ಕೆ ಪೂರಕವಾಗಿ ಉಪಕತೆಗಳು ಸೇರಿಕೊಂಡಿರುತ್ತವೆ. ಪ್ರತಿ ಕತೆಗಳು ಪ್ರಧಾನ ಕತೆಯ ಒಟ್ಟಿಗೆ ಸಾಗುತ್ತವೆ. ಅವುಗಳ ಆಶಯ ಒಂದೇ ಆಗಿದ್ದರೂ ಕಾಣುವ ಸ್ವರೂಪ ಭಿನ್ನವಾಗಿರುತ್ತದೆ. ಇಲ್ಲೂ ಹಾಗೆಯೇ ಸಿನಿಮಾ ಕಾಣುತ್ತದೆ. ಕೊನೆಗೆ ಕ್ಲೈಮ್ಯಾಕ್ಸ್‌ ಒಂದೇ ಆಗಿರುತ್ತದೆ. ಅದೇ ಈ ಚಿತ್ರದ ವಿಶೇಷ ಎನ್ನುತ್ತಾರೆ ನಿರ್ದೇಶಕರು.

ಕೀರ್ತನ್‌ ಪೂಜಾರಿ ಛಾಯಾಗ್ರಹಣ ಮಾಡಿದ್ದರೆ, ರೋಣದ ಬಕ್ಕೇಶ್‌ ಮತ್ತು ಕಾರ್ತಿಕ್‌ ಸಿ. ರಾವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರತೀಕ್‌ ಸಂಕಲನ ಮಾಡಿದ್ದಾರೆ. 23 ಮಂದಿ ನಿರ್ಮಾಪಕರ ಪೈಕಿ ಗಿರೀಶ್‌, ಕಿರಣ್‌, ಯೋಗೇಶ್‌, ವೀರಣ್ಣ ಮುಂಚೂಣಿಯಲ್ಲಿದ್ದು ಚಿತ್ರ ನಿರ್ಮಿಸಿದ್ದಾರೆ. ಮಲ್ಟಿಪ್ಲೆಕ್ಸ್‌ ಸೇರಿ, ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.