Sudha Murthy Food Controversy: ಸಹಿಷ್ಣುತೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮತಾನಾಡೋರೆಲ್ಲಿ ಎಂದ ಮಾಳವಿಕಾ
ವಿದೇಶಗಳಿಗೆ ಹೋಗುವಾಗ ತಮ್ಮ ಆಹಾರವನ್ನು ಖುದ್ದು ತೆಗೆದುಕೊಂಡು ಹೋಗುವುದಾಗಿ ಹೇಳಿ ಟ್ರೋಲ್‌ಗೆ ಒಳಗಾಗಿರುವ ಸುಧಾಮೂರ್ತಿಯವರ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಹೇಳಿದ್ದೇನು?
ಕಳೆದ ಕೆಲ ದಿನಗಳಿಂದ ಇನ್ಫೋಸಿಸ್ ಸುಧಾಮೂರ್ತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಾಗುತ್ತಿದೆ. ಆಹಾರದ ವಿಷಯದ ಕುರಿತು ಸುಧಾಮೂರ್ತಿಯವರು (Sudha Murthy) ನೀಡಿದ್ದ ಹೇಳಿಕೆಯನ್ನೇ ದೊಡ್ಡದು ಮಾಡಿ ಒಂದು ವರ್ಗ ಅವರನ್ನು ಟ್ರೋಲ್ ಮಾಡುತ್ತಿದ್ದರೆ, ಸುಧಾಮೂರ್ತಿಯವರ ಪರವಾಗಿ ಇನ್ನೊಂದಿಷ್ಟು ಮಂದಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಅಷ್ಟಕ್ಕೂ ಈ ವಿವಾದ ಏನೆಂದರೆ, ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಬಹುತೇಕ ಮಾಂಸಹಾರವೇ ಹೆಚ್ಚು ಎಲ್ಲೂ ಸಸ್ಯಹಾರಕ್ಕೆ ಅವಕಾಶ ಇಲ್ಲ, ಸಸ್ಯಾಹಾರದ ಆಯ್ಕೆಗಳು ವಿದೇಶದಲ್ಲಿ ತೀರಾ ಕಡಿಮೆ ಹೀಗಾಗಿ ಸುಧಾಮೂರ್ತಿಯವರಿಗೆ ವಿದೇಶಕ್ಕೆ ಭೇಟಿ ನೀಡಿದಾಗ ಆಹಾರದ ಶೈಲಿ ಯಾವ ರೀತಿಯದ್ದು ಎಂದು ಫುಡ್ ಬ್ಲಾಗರ್ ಕೇಳಿದ್ದಾರೆ., ಈ ವೇಳೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ತಾನು ಶುದ್ಧ ಸಸ್ಯಾಹಾರಿಯಾಗಿರುವುದರಿಂದ ವಿದೇಶಕ್ಕೆ ತೆರಳುವಾಗ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುತ್ತೇನೆ. ನಾನು ಆಹಾರದ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ, ಮಾಂಸಹಾರಕ್ಕೆ ಬಳಸಿದ ಸೌಟ್(Spoon) ಗಳನ್ನೇ ಸಸ್ಯಾಹಾರಿ ತಿನಿಸುಗಳ ತಯಾರಿಗೆ ಅಥವಾ ಬಡಿಸಲು ಬಳಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ತಾನು ಈ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಅವರ ಈ ಮಾತಿಗೆ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಸುಧಾಮೂರ್ತಿಯವ ಜಾತಿಯನ್ನು ಈ ಮಾತಿಗೆ ಎಳೆದು ತಂದಿದ್ದು, ಜಾತಿ ನಿಂದನೆಯೂ ಶುರುವಾಗಿದೆ. ತಾವೇ ಖುದ್ದು ಆಹಾರವನ್ನು ತೆಗೆದುಕೊಂಡು ಹೋಗುವುದು ಮಹಾ ಅಪರಾಧ ಎಂಬಂತೆ ಬಿಂಬಿಸಿ ಮೀಮ್ಸ್ಗಳು ಶುರುವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಇನ್ನು ಕೆಲವರು ಟ್ರೋಲಿಗರಿಗೆ ತಿರುಗೇಟು ನೀಡುತ್ತಿದ್ದಾರೆ. ಇದೀಗ ನಟಿ ಮಾಳವಿಕಾ ಅವಿನಾಶ್ ಕೂಡ ಸುಧಾ ಮೂರ್ತಿಯವರ ಪರವಾಗಿ ಮಾತನಾಡಿದ್ದು, ಅದರ ಬಗ್ಗೆ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಮಾಳವಿಕಾ ಹೇಳಿದ್ದೇನೆಂದರೆ, ಶೂಟಿಂಗಿಗೆ ಕಲಾವಿದರು ನಮ್ಮನುಕೂಲಕ್ಕೆ ನಮ್ಮದೇ ಕಾಫೀ ಮಗ್, ತಟ್ಟೆ, ಲೋಟ, ಸ್ಪೂನ್ ಇತ್ಯಾದಿಗಳನ್ನು ಕೊಂಡೊಯ್ಯುತ್ತೇವೆ. ಹಾಗೆ ನೋಡಿದರೆ ಯಾವ ದೊಡ್ಡ ಸ್ಟಾರ್ ಯಾವ ವಿಶೇಷ ಮಗ್ (ಅರ್ಥಾತ್ ಭಾರತದ್ದೊ ಅಥವಾ ವಿದೇಶದ್ದೊ) ಇಟ್ಟುಕೊಂಡಿದ್ದಾರೆ ಅಂತ ಕಣ್ಣುಗಳು ಹರಿದಾಡುತ್ತವೆ.
ಸುಧಾಮೂರ್ತಿಗೆ ಸಂಕಷ್ಟ ತಂದಿಟ್ಟ ಸೌಟು: ಟ್ರೋಲ್‌ಗೆ ಕಾರಣವಾಯ್ತು ಮಾಂಸಾಹಾರದ ಸ್ಟೇಟ್‌ಮೆಂಟು
ಸ್ಕೂಲ್/ಕಾಲೇಜು ಹಾಸ್ಟೆಲ್ಲಲ್ಲಿ ತಮ್ಮದೇ ತಟ್ಟೆ ಲೋಟ ಸ್ಪೂನುಗಳನ್ನು ಕೊಂಡೊಯ್ಯುವುದು ಸರ್ವೇ ಸಾಮಾನ್ಯ! ನಾನು ಪ್ಲಾಸ್ಟಿಕ್, ಡಿಸ್ಪೋಸಬಲ್ ಪ್ಯಾಕಿಂಗಿನಲ್ಲಿ (Packing) ಊಟ ಕಳುಹಿಸಿ ಎಂದಾಗ, ತೇಜಸ್ವಿನಿ ಅನಂತಕುಮಾರರು ಸುತರಾಮ್ ಒಪ್ಪಲಿಲ್ಲ. ನಾನು ಅದಮ್ಯ ಚೇತನದ್ದೇ ತಟ್ಟೆ ಲೋಟಗಳನ್ನು ಕಳುಹಿಸುತ್ತೇನೆ. ಅವರಿಗೆ ಹೆಚ್ಚು ಬೇಕಿದ್ದರೆ ತಮ್ಮದೇ ಬಾಕ್ಸಿನಲ್ಲಿ ತುಂಬಿಸಿಕೊಳ್ಳಲಿ ಎಂದಿದ್ದರು. ಅಯ್ಯೋ ಕೊರೊನಾ ಪರಿಸ್ಥಿತಿ ಮೇಡಂ, ಸ್ವಲ್ಪ ಕಾಂಪ್ರೊಮೈಸಾಗಿ ಅಂತ ಕೇಳಿಕೊಂಡಿದ್ದು ನೆನಪಾಗುತ್ತದೆ. ನಾವು ಒಮ್ಮೆ ಉಂಡೊ ಅಥವಾ ಅರ್ಧಕ್ಕೆ ಬಿಸಾಡಿ ಬರುವ ಕಪ್ಪು, ಲೋಟ, ಬಾಟ್ಲಿ, ತಟ್ಟೆ ಸೋ ಕಾಲ್ಡ್ ಡಿಸ್ಪೋಸಬಲ್ ವಸ್ತುಗಳು, ಯಾವುದೊ ಹಸುವಿನ ಅಥವಾ ಕಡಲ್ಮೀನಿನ ಹೊಟ್ಟೆಯನ್ನು ತಲುಪುತ್ತವೆ. ಮಕ್ಕಳಿಗೆ ಅವರದ್ದೇ ಬಾಟ್ಲಿ, ಬಟ್ಟಲು, ಸ್ಪೂನು ಬ್ಯಾಗಲ್ಲಿ ತಾಯಂದರು ತುಂಬಿಕೊಂಡು ಹೋಗಲ್ವೇ ಎಂದಿದ್ದಾರೆ ಮಾಳವಿಕಾ. ಆಗರ್ಭ ಶ್ರೀಮಂತರೊಬ್ಬರು ತಮ್ಮದೇ ಸ್ಪೂನು ಉಪಯೋಗಿಸುತ್ತೇನೆ ಅನ್ನೋದು ವಿವಾದವಾಗಿರುವ ಈ ಸೊಷಿಯಲ್ ಮೀಡಿಯಾ ಕಾಲಕ್ಕೆ ಜೈ! ಮೊಸರಲ್ಲೂ ಕಲ್ಲು ಹುಡುಕುವವರಿಗೆ ಜೈ… ಸಹಿಷ್ಣುತೆಯ ಬಗ್ಗೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೊಬ್ಬೆಹೊಡೆಯುವವರು ಎಲ್ಲಿ ಕಾಣೆಯಾದರು, ಮಂಕುತಿಮ್ಮ? ಅಲ್ಲಾ, ವೆಜಿಟೇರಿಯನ್ನಿಗೆ ಇಷ್ಟು ಹೀಯಾಳಿಸುವವರು ವೀಗನ್ನರನ್ನು ಏನೇನನ್ನಬಹುದು ಎಂದು ಅವರು ಪ್ರಶ್ನಿಸಿದ್ದಾರೆ.
ಅದೇ ಇನ್ನೊಂದೆಡೆ, ಸುಭಾಷ್ ಬಂಗಾರಪೇಟೆ ಎನ್ನುವವರೂ ಬ್ರಾಹ್ಮಣ ದ್ವೇಷದ ಅಕ್ಷರವಾಂತಿ ಎಂದು ಎಫ್ಬಿನಲ್ಲಿ ಬರೆದುಕೊಂಡಿದ್ದು, ಇದು ಕೂಡ ಸಕತ್ ವೈರಲ್ ಆಗುತ್ತಿದೆ. ಥಹರೇವಾರಿ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಇದರಲ್ಲಿ ಸುಭಾಷ್ ಅವರು, ಸಾಮಾನ್ಯವಾಗಿ ಅನೇಕ ಸಸ್ಯಾಹಾರಿಗಳು Non Veg ಆಹಾರ Serve ಮಾಡುವ Restaurant ಗಳಲ್ಲಿ Veg ಆಹಾರ ಕೂಡ Order ಮಾಡೋದಿಲ್ಲ... ಅವರನ್ನು ಕಾಡೋದೂ ಇದೇ ಭಯ... ಎರಡೂ ಆಹಾರವನ್ನು ಒಂದೇ ಪಾತ್ರೆ ಅಥವಾ ಸೌಟಿನಲ್ಲಿ ತಯಾರಿಸಿ ತಮಗಿಷ್ಟವಿಲ್ಲದ Non Veg ಆಹಾರದ ಅಂಶ ತಮ್ಮ ಹೊಟ್ಟೆ ಸೇರಿದರೆ ಎಂಬ ಆತಂಕ.. ಅದೇ ಆತಂಕ ಸುಧಾಮೂರ್ತಿ ಅವರಿಗೂ ಇದೆ. ವಿದೇಶಿಗರು ಭಾರತೀಯ ಶಾಖಾಹಾರಿಗಳು ತಿನ್ನದ ಅನೇಕ ಪ್ರಾಣಿ ಪಕ್ಷಿಗಳನ್ನೂ ತಿನ್ನುತ್ತಾರೆ ಹಾಗಾಗಿ ಎಲ್ಲ Vegetarian ಗಳಿಗೂ ವಿದೇಶಗಳಲ್ಲಿ ತಮ್ಮ ಊಟದ ಬಗ್ಗೆ ಒಂದು Extra care ಮತ್ತು Extra ಭಯ ಇದ್ದೇ ಇರುತ್ತದೆ...ಅದೇ ಸಹಜ ಭಯ ಮತ್ತು Care ಸುಧಾಮೂರ್ತಿ ಅವರಿಗೂ ಇದೆ... ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಹೀಗೆ ಪರ-ವಿರೋಧ ಚರ್ಚೆಗಳಿಂದ ಸಾಮಾಜಿಕ ಜಾಲತಾಣದ ತುಂಬಿ ತುಳುಕಾಡುತ್ತಿದೆ.