ಜಿಎಸ್‌ಟಿ ಎಂದರೆ ಘೋಸ್ಟ್ ಇನ್ ಟ್ರಬಲ್ ಅಂತ. ಆದರೆ ಈಗ ಸಿನಿಮಾ ಬಿಡುಗಡೆ ಸಮಯದಲ್ಲಿ ಇದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ ‘ಗೋ ಸೀ ಇನ್ ಥಿಯೇಟರ್’ ಎಂದು ನಟ ಸೃಜನ್ ಲೋಕೇಶ್ ಹೇಳಿದರು.
ಸೃಜನ್ ಲೋಕೇಶ್ ನಿರ್ದೇಶಿಸಿ, ನಟಿಸಿರುವ ‘ಜಿಎಸ್‌ಟಿ’ ಚಿತ್ರದ ಟ್ರೇಲರನ್ನು ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. ಸಂದೇಶ್ ಎನ್ ನಿರ್ಮಾಣದ ಈ ಚಿತ್ರವು ನ. 28 ತೆರೆಗೆ ಬರುತ್ತಿದೆ. ಸಿನಿಮಾದ ಬಗ್ಗೆ ಸೃಜನ್ ಲೋಕೇಶ್, ಜಿಎಸ್‌ಟಿ ಎಂದರೆ ಘೋಸ್ಟ್ ಇನ್ ಟ್ರಬಲ್ ಅಂತ. ಆದರೆ ಈಗ ಸಿನಿಮಾ ಬಿಡುಗಡೆ ಸಮಯದಲ್ಲಿ ಇದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ ‘ಗೋ ಸೀ ಇನ್ ಥಿಯೇಟರ್’ ಎಂದು ಹೇಳಬಹುದು.
ಈ ಸಿನಿಮಾ ನಾನು ಕಂಡ ಕನಸು. ಅದನ್ನು ನನಸು ಮಾಡಿದವರು ನಿರ್ಮಾಪಕ ಸಂದೇಶ್. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಅಡಿ ಇಟ್ಟಿದ್ದೇನೆ. ನಮ್ಮ ತಾತ ಸುಬ್ಬಯ್ಯ ನಾಯ್ಡು ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಮ್ಮ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ಆ ನಂತರ ನಮ್ಮ ತಂದೆ ನಿರ್ದೇಶನದ ಭುಜಂಗಯ್ಯನ ದಶಾವತಾರದ ಮೂಲಕ ಬಾಲನಟನಾಗಿ ನಾನು ಚಿತ್ರರಂಗಕ್ಕೆ ಬಂದೆ.
ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ. ಇದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎನ್ನಬಹುದು. ನಮ್ಮ ತಾಯಿಯೂ ನಟಿಸಿದ್ದಾರೆ. ಇದು ಹಾರರ್ ಚಿತ್ರವಾಗಿದ್ದರೂ, ಹಾಸ್ಯವೇ ಪ್ರಧಾನ. ಯಾವುದೇ ಸಂದೇಶ ನೀಡದೆ ನಗುವಿನ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತೇವೆ. ಲೋಕೇಶ್ ಮ್ಯೂಸಿಕ್ ಎಂಬ ಮ್ಯೂಸಿಕ್ ಸಂಸ್ಥೆ ಕೂಡ ಆರಂಭಿಸಿದ್ದೇನೆ. ಅದರಲ್ಲಿ ನಮ್ಮ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ. ಈ ಚಿತ್ರದಲ್ಲಿ ಯಾರು ಊಹಿಸಲಾಗದ 40 ನಿಮಿಷಗಳ ಕ್ಲೈಮ್ಯಾಕ್ಸ್ ಇದೆ.
ಬ್ಯಾಟ್ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ನಮ್ಮ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ತಾನು ರುಜು ಹಾಕಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದರು. ನಿರ್ಮಾಪಕ ಸಂದೇಶ್, ಇದು ನಮ್ಮ ಸಂಸ್ಥೆ ನಿರ್ಮಾಣದ 34ನೇ ಚಿತ್ರ. ನಾನು ಈ ಚಿತ್ರದ ಕಥೆ ಕೇಳಿಲ್ಲ. ಸೃಜನ್ ನನ್ನ ಆತ್ಮೀಯ ಸ್ನೇಹಿತ. ಅವರು ಒಳ್ಳೆಯ ಚಿತ್ರ ಮಾಡಿರುತ್ತಾರೆ ಎಂಬ ನಂಬಿಕೆ ಇದೆ ಎಂದರು. ಹಿರಿಯ ನಟಿ ಗಿರಿಜಾ ಲೋಕೇಶ್, ನಾಯಕಿ ರಜನಿ ಭಾರದ್ವಾಜ್, ಹಿರಿಯ ನಟ ಅಶೋಕ್ ಇದ್ದರು.
