ದೇಶದ ಲಕ್ಷಾಂತರ ಪ್ರತಿಭೆಗಳಿಗೆ ಉತ್ತಮ ತರಬೇತಿ ಮತ್ತು ವೇದಿಕೆ ಕಲ್ಪಿಸಲು ಬೃಹತ್ ಸ್ಟುಡಿಯೋ ಕಟ್ಟುವ ಆಸೆ ಇದೆ. ಅದರ ಆರಂಭದ ಬಿಂದುವಾಗಿ ವಿಪಿ ಕಲ್ಚರಲ್‌ ಕ್ಲಬ್‌ ಹಾಗೂ ದ್ವಾರ ಸ್ಟುಡಿಯೋ ಅಸ್ತಿತ್ವಕ್ಕೆ ಬಂದಿದೆ ಇದು ಗಾಯಕ ವಿಜಯ್ ಪ್ರಕಾಶ್ ಮಾತು.

ಕನ್ನಡದ ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕ ವಿಜಯ್ ಪ್ರಕಾಶ್ ತಮ್ಮ ಸಂಗೀತ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ, ಶಾಸ್ತ್ರೀಯ ಹಾಗೂ ವಿವಿಧ ಸಂಗೀತ ಪ್ರಕಾರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಅವರು, ಇದೀಗ ಸಂಗೀತ ಕ್ಷೇತ್ರಕ್ಕೇ ಹೊಸ ಕೊಡುಗೆ ನೀಡುವ ಉದ್ದೇಶದಿಂದ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ (VPCC), ದ್ವಾರ್ ಸ್ಟುಡಿಯೋಸ್ (Dvaar Studios) ಹಾಗೂ ದ್ವಾರ್ ಮ್ಯೂಸಿಕ್ (Dvaar Music) ಎಂಬ ಮೂರು ಹೊಸ ಸಂಸ್ಥೆಗಳನ್ನು ಆರಂಭಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಹೊಸಕೆರೆಹಳ್ಳಿಯ ಸಪ್ತಗಿರಿ ಲೇಔಟ್‌ನಲ್ಲಿ ಈ ಸಂಸ್ಥೆಗಳು ಕಾರ್ಯಾರಂಭ ಮಾಡಿದ್ದು, ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ವಿಜಯ್ ಪ್ರಕಾಶ್ ಹಾಗೂ ಅವರ ಪತ್ನಿ ಮಹತಿ ವಿಜಯ್ ಪ್ರಕಾಶ್ ತಮ್ಮ ಕನಸಿನ ಯೋಜನೆಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಪ್ರಕಾಶ್, "ಭಾರತದಲ್ಲೇ ಅತಿದೊಡ್ಡ ಸಂಗೀತ ಶಾಲೆಯನ್ನು ಆರಂಭಿಸುವ ಕನಸು ನನ್ನದು. ಅದು ಯಾವಾಗ ನನಸಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಆ ಕನಸಿನತ್ತ ಇಟ್ಟಿರುವ ಮೊದಲ ಹೆಜ್ಜೆಯೇ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್. ಸಂಗೀತ ನನಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟಿದೆ. ಆದ್ದರಿಂದ ಅದನ್ನೇ ಮತ್ತೆ ಸಂಗೀತ ಕ್ಷೇತ್ರಕ್ಕೆ ಹಿಂದಿರುಗಿಸಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಆರಂಭಿಸಿದ್ದೇವೆ," ಎಂದು ಹೇಳಿದರು.

ಸಂಗೀತ ಕಲಿಯಲು ಬಯಸುವವರಿಗೆ ಗುಣಮಟ್ಟದ ತರಬೇತಿ ನೀಡುವುದರ ಜೊತೆಗೆ, ತಮ್ಮದೇ ಹಾಡುಗಳನ್ನು ವೃತ್ತಿಪರವಾಗಿ ನಿರ್ಮಿಸಿಕೊಳ್ಳಲು ಅತ್ಯಾಧುನಿಕ ಸ್ಟುಡಿಯೋ ಹಾಗೂ ಅವುಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಡಿಜಿಟಲ್ ವೇದಿಕೆಯ ಅಗತ್ಯವಿತ್ತು. ಈ ಉದ್ದೇಶದಿಂದಲೇ ದ್ವಾರ್ ಸ್ಟುಡಿಯೋಸ್ ಮತ್ತು ದ್ವಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಆರಂಭಿಸಲಾಗಿದೆ ಎಂದು ಅವರು ವಿವರಿಸಿದರು.

ಒಂದೇ ವೇದಿಕೆಯಲ್ಲಿ ಒಂದಾಗಬೇಕು

ಈ ಯೋಜನೆಯ ಹಿಂದಿನ ಉದ್ದೇಶವನ್ನು ವಿವರಿಸಿದ ಮಹತಿ ವಿಜಯ್ ಪ್ರಕಾಶ್, "ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರು ಒಂದೇ ವೇದಿಕೆಯಲ್ಲಿ ಒಂದಾಗಬೇಕು ಎಂಬ ಆಶಯದಿಂದ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ ಹುಟ್ಟಿಕೊಂಡಿದೆ. ಬಾಲ್ಯದಲ್ಲಿ ಇದ್ದ ಸಂಗೀತ ಅಥವಾ ನೃತ್ಯದ ಆಸಕ್ತಿಯನ್ನು ಜೀವನದ ಜವಾಬ್ದಾರಿಗಳ ಕಾರಣದಿಂದ ಹಲವರು ಅರ್ಧದಲ್ಲೇ ಬಿಡುತ್ತಾರೆ. ಅಂತಹವರು ಮತ್ತೆ ತಮ್ಮ ಕನಸುಗಳನ್ನು ಜೀವಂತಗೊಳಿಸಬೇಕು ಎಂಬ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಿದ್ದೇವೆ," ಎಂದರು.

ಈ ಕ್ಲಬ್‌ನಲ್ಲಿ ಮಕ್ಕಳು, ಯುವಕರು, ಗೃಹಿಣಿಯರು, ವೈದ್ಯರು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ವಯೋಮಾನದವರು ಸಂಗೀತ ಕಲಿಯುತ್ತಿದ್ದಾರೆ. ನಾಲ್ಕು ವರ್ಷದ ಮಕ್ಕಳಿಂದ 82 ವರ್ಷದ ಹಿರಿಯರವರೆಗೆ ಇಲ್ಲಿ ತರಬೇತಿ ಪಡೆಯುತ್ತಿರುವುದು ವಿಶೇಷ. ರಂಗಗೀತೆ, ಜಾನಪದ, ಭಾವಗೀತೆ, ಭಕ್ತಿಗೀತೆ ಹಾಗೂ ಸಿನಿಮಾ ಗೀತೆ ಸೇರಿದಂತೆ ಹಲವು ಸಂಗೀತ ಪ್ರಕಾರಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ದ್ವಾರ್ ಸ್ಟುಡಿಯೋಸ್ ಮೂಲಕ ಹೊಸ ಪ್ರತಿಭೆಗಳಿಗೆ ತಮ್ಮ ಹಾಡುಗಳನ್ನು ವೃತ್ತಿಪರವಾಗಿ ಧ್ವನಿಮುದ್ರಿಸುವ ಅವಕಾಶ ಕಲ್ಪಿಸಲಾಗಿದೆ. ಸಂಗೀತ ನಿರ್ದೇಶಕರು ಹಾಗೂ ತಾಂತ್ರಿಕ ತಜ್ಞರ ಮಾರ್ಗದರ್ಶನದಲ್ಲಿ ಯಾವುದೇ ಆಸಕ್ತರು ತಮ್ಮ ಸಂಗೀತವನ್ನು ರೆಕಾರ್ಡ್ ಮಾಡಿ, ಗುಣಮಟ್ಟದ ಆಡಿಯೋ ನಿರ್ಮಿಸಿಕೊಳ್ಳಬಹುದು. ಇನ್ನೊಂದೆಡೆ, ದ್ವಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಹೊಸ ಸಂಗೀತ ಕೃತಿಗಳನ್ನು ಜಗತ್ತಿನಾದ್ಯಂತ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 'ಬೆರೆತು', 'ಬಾನ ಸರದಾರ', 'ಅಹಂ ಸತ್' ಸೇರಿದಂತೆ ಹಲವು ಗೀತೆಗಳು ಬಿಡುಗಡೆಯಾಗಿವೆ. ವಿಶೇಷವಾಗಿ 'ನವರಾತ್ರಿ ಗೀತಮಾಲಾ' ಯೋಜನೆಯಡಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಆಧರಿಸಿದ ಸಂಗೀತ ಸರಣಿಯು ಗಮನ ಸೆಳೆದಿದೆ.

ಈ ಯೋಜನೆಯಲ್ಲಿ ವಿಜಯ್ ಪ್ರಕಾಶ್ ಅವರೊಂದಿಗೆ ಶಂಕರ್ ಮಹಾದೇವನ್, ಅನುರಾಧಾ ಭಟ್, ರಾಜೇಶ್ ಕೃಷ್ಣನ್, ಲಕ್ಷ್ಮೀ ನಾಗರಾಜ್, ಕೀರ್ತನ್ ಹೊಳ್ಳ, ಪ್ರಿಯಾಂಕಾ ಭಾರ್ವೆ, ಅನಿರುದ್ಧ್ ಐತಾಳ್ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಸೇರಿದಂತೆ ಹಲವು ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ತನುಷಾ ಕೆ.ಎಂ ಹಾಡಿರುವ, ಕೀರ್ತನ್ ಹೊಳ್ಳ ಸಂಗೀತ ಸಂಯೋಜಿಸಿರುವ ಹಾಗೂ ರಾಘವೇಂದ್ರ ಕಾಮತ್ ಸಾಹಿತ್ಯ ಬರೆದ 'ಮೋಹ' ಹಾಡನ್ನೂ ಬಿಡುಗಡೆ ಮಾಡಲಾಗಿದೆ. ಸಂಗೀತವನ್ನು ಕೇವಲ ವೃತ್ತಿಯಾಗಿ ಮಾತ್ರವಲ್ಲ, ಸಮಾಜಕ್ಕೆ ಮರಳಿ ನೀಡಬೇಕಾದ ಹೊಣೆಗಾರಿಕೆಯಾಗಿ ಕಂಡಿರುವ ವಿಜಯ್ ಪ್ರಕಾಶ್ ಅವರ ಈ ಹೊಸ ಪ್ರಯತ್ನ, ಉದಯೋನ್ಮುಖ ಕಲಾವಿದರಿಗೆ ಮಹತ್ವದ ವೇದಿಕೆಯಾಗುವ ನಿರೀಕ್ಷೆ ಮೂಡಿಸಿದೆ.