'ನೀವು ಒಂಥರಾ ನಮ್ಮ ಕುಂದಾಪ್ರದವ್ರು.' ಕನ್ನಡದಲ್ಲಿ ಮಾತನಾಡಿದ ಜೂನಿಯರ್ NTR ಹಾಗೂ ರಿಷಬ್ ಶೆಟ್ಟಿ!
ಆರ್‌ಆರ್‌ಆರ್ ಸಿನಿಮಾದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿರುವ ಜೂನಿಯರ್ ಎನ್‌ಟಿಆರ್ ಹಾಗೂ ಕಾಂತಾರ ಚಿತ್ರದ ಮೂಲಕ ದೇಶದೆಲ್ಲೆಡೆ ಜನಪ್ರಿಯರಾಗಿರುವ ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ.
ಬೆಂಗಳೂರು (ಸೆ.16): ಜೂನಿಯರ್ ಎನ್‌ಟಿಆರ್ ಈಗ ಪ್ರಖ್ಯಾತಿಯ ಉತ್ತುಂಗದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ನಟನೆಯ ಆರ್‌ಆರ್‌ಆರ್ ಚಿತ್ರಕ್ಕೆ ಸಿಕ್ಕಿರುವ ಜಾಗತಿಕ ಜನಪ್ರಿಯತೆ. ಇತ್ತೀಚೆಗೆ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ ಅವರ ಜೊತೆಗೂಡಿ ಆಗಮಿಸಿದ್ದರು. ಈ ವೇಳೆ ಕಾಂತಾರ ಸಿನಿಮಾದ ಮೂಲಕ ದೇಶದೆಲ್ಲೆಡೆ ಹೆಸರು ಸಂಪಾದಿಸಿರುವ ಕನ್ನಡದ ನಿರ್ದೇಶಕ ರಿಷಭ್ ಶೆಟ್ಟಿ ಅವರೊಂದಿಗೆ ಕನ್ನಡದಲ್ಲಿಯೇ ಸಂಭಾಷಣೆ ನಡೆಸಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇಬ್ಬರೂ ಪ್ರಖ್ಯಾತ ಸಿನಿಮಾ ತಾರೆಗಳು ಕನ್ನಡದಲ್ಲಿ ಮಾತನಾಡಿರುವ ವಿಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಸೈಮಾ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇದಿಕೆಯಲ್ಲಿ ರಿಷಭ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ ಬಳಿಕ, ನಿರೂಪಕ ಅಕುಲ್ ಬಾಲಾಜಿ ಅವರು ಜೂನಿಯರ್ ಎನ್‌ಟಿಆರ್ ಅವರನ್ನು ಮಾತನಾಡಿಸುತ್ತಾರೆ. 'ಹೇಗಿದ್ದೀರಿ ಸರ್..' ಎಂದು ಜೂನಿಯರ್ ಎನ್‌ಟಿಆರ್ ಕೇಳುವ ಪ್ರಶ್ನೆಗೆ, ರಿಷಭ್ ಶೆಟ್ಟಿ, 'ತುಂಬಾ ಚೆನ್ನಾಗಿದ್ದೀನಿ ಸರ್..' ಎನ್ನುತ್ತಾರೆ. ಥ್ಯಾಂಕ್ ಯು ಸೋ ಮಚ್, ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಎಂದು ಎನ್‌ಟಿಆರ್ ಹೇಳುವ ಹೊತ್ತಿಗೆ, ನಿರೂಪಕ ಅಕುಲ್ ಬಾಲಾಜಿ, ಸರ್ ನೀವು ಕುಂದಾಪುರ ಭಾಷೆಯಲ್ಲಿ ಹೀಗೆ ಮಾತನಾಡ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ.
ಅದಕ್ಕೆ ಉತ್ತರಿಸುವ ಎನ್‌ಟಿಆರ್, 'ನಾನು ನನ್ನ ತಾಯಿಯ ಜೊತೆ ಹೀಗೆ ಮಾತನಾಡುತ್ತೇನೆ..' ಎಂದು ಕನ್ನಡದಲ್ಲಿಯೇ ಹೇಳುತ್ತಾರೆ. ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳುವ ಮಾತಿಗೆ, ರಿಷಭ್ ಶೆಟ್ಟಿ ಅವರತ್ತ ಬೆರಳು ತೋರುವ ಜೂ.ಎನ್‌ಟಿಆರ್ ಅವರು ಮಾತನಾಡುವ ಮುಂದೆ ನನ್ನದೇನೂ ಇಲ್ಲ. ನನ್ನ ಬಿಟ್ಬಿಡಿ ಎನ್ನುತ್ತಾರೆ.
ಆ ಬಳಿಕ ವೇದಿಕೆಯಿಂದಲೇ ಮಾತನಾಡುವ ರಿಷಭ್ ಶೆಟ್ಟಿ, ಸರ್ ನಾನು ನಿಮಗೆ ನೇರವಾಗಿ ಸಿಕ್ಕಿ ಥ್ಯಾಂಕ್ಸ್ ಹೇಳಲು ಪ್ರಯತ್ನ ಮಾಡಿದೆ. ಅದಕ್ಕೆ ಅವಕಾಶವೇ ಸಿಗಲಿಲ್ಲ. ಕೊನೆಯ ಬಾರಿಗೆ ಕಿರಿಕ್ ಪಾರ್ಟಿಗೆ ಇಲ್ಲಿಗೆ ಬಂದಾಗ ಕೂಡ, ಇದೇ ವೇದಿಕೆಯಲ್ಲಿ ಅಂದು ನೀವೇ ಪ್ರಶಸ್ತಿ ನೀಡಿದ್ದೀರಿ. ಅವತ್ತಿನಿಂದ ನಮಗೊಂದು ಎಮೋಷನ್ಸ್ ಏನೆಂದರೆ, ನಿಮ್ಮ ತಾಯಿ ಮತ್ತು ನಮ್ಮೂರು ಎಲ್ಲಾ ಒಂದೇ ಊರಾಗಿರುವ ಕಾರಣ, ನೀವು ಒಂಥರಾ ನಮ್ಮ ಕುಂದಾಪ್ರದವ್ರು.. ನೀವು ಆಂಧ್ರದವರು ಎನ್ನು ಯೋಚನೆಯೇ ನಮ್ಮಲ್ಲಿಲ್ಲ.' ಎಂದು ಹೇಳುತ್ತಾರೆ. ರಿಷಭ್ ಮಾತನಾಡುವವರೆಗೂ ಜೂನಿಯರ್ ಎನ್‌ಟಿಆರ್ ನಗುತ್ತಲೇ ಇದ್ದರು.
ಈ ವಿಡಿಯೋಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೈಮಾ ಪ್ರಶಸ್ತಿಯಲ್ಲಿಕಾಂತಾರ ಹಾಗೂ ಆರ್‌ಆರ್‌ಆರ್ ಚಿತ್ರವು ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ದುಬೈನಲ್ಲಿ ಸೈಮಾ ಸಂಭ್ರಮ: ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಡಾಲಿ, ಶ್ರುತಿ ಹಾಸನ್ ಭಾಗಿ..!
ರಾರಾ ರಕ್ಕಮ್ಮ ಎಂದ ಗಾಯಕಿ ಸುನಿಧಿ ಚೌಹಾಣ್ ಗೆ ಮತ್ತು ನೀತಾ ಅಶೋಕ್ ಗೆ ಸೈಮಾ ಪ್ರಶಸ್ತಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗೆ 2 ವಿಭಾಗದಲ್ಲಿ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಒಲಿದು ಬಂದಿದೆ. ಅತ್ಯುತ್ತಮ ಉದಯೋನ್ಮುಖ ನಟಿ ಹಾಗೂ ಅತ್ಯುತ್ತಮ ಗಾಯಕಿ ಪ್ರಶಸ್ತಿ ವಿಕ್ರಾಂತ್ ರೋಣ ಸಿನಿಮಾಗೆ ನೀಡಲಾಗಿದೆ. ದುಬೈನಲ್ಲಿ ನಡೆದ ಸೈಮಾ ಅಂಗಳದಲ್ಲಿ ಗೋಲ್ಡನ್ ಬ್ಯೂಟಿಗೆ ನಾಯಕಿ ನೀತಾ ಅಶೋಕ್, ಗಾಯಕಿ ಸುನಿಧಿ ಚೌಹಾಣ್ ಮುತ್ತಿಟ್ಟಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದ ಅನೂಪ್ ಭಂಡಾರಿ ಪದ ಪೊಣಿಸಿದ್ದ ರಾರಾ ರಕ್ಕಮ್ಮ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಜಬರ್ದಸ್ತ್ ಹಾಡಿನಲ್ಲಿ ಸುದೀಪ್ ಜೊತೆ ಬಾಲಿವುಡ್ ಬ್ಯೂಟಿ ಜಾಕ್ವಾಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದರು. ಇದೇ ರಕ್ಮಮ್ಮನಿಗೆ ಸುನಿಧಿ ಚೌಹಾಣ್ ಕಂಠ ನೀಡಿದ್ದರು. ದುಬಾರಿ ಬಜೆಟ್ ನಲ್ಲಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದರು. ನೀತಾ ಆಶೋಕ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು, ಚೊಚ್ಚಲ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನೀತಾ ಸೈಮಾ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಸೈಮಾ ಅತ್ಯುತ್ತಮ ನಾಯಕಿ ಪ್ರಶಸ್ತಿ ಅಂತಿಮ ಸುತ್ತು; ಪಟ್ಟಿಯಲ್ಲಿ ಕನ್ನಡತಿ ನೇಹಾ ಶೆಟ್ಟಿ