'ಗೀತಾ ಪಿಕ್ಚರ್' ಮೂಲಕ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಗೀತಾ ಶಿವರಾಜ್‌ಕುಮಾರ್. ಶಿವಣ್ಣನ 125ನೇ ಚಿತ್ರಕ್ಕೆ ಚಾಲನೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆ ಹಾಗೂ ಎ ಹರ್ಷ ನಿರ್ದೇಶನದ ‘ವೇದ’ ಚಿತ್ರಕ್ಕೆ ಸರಳವಾಗಿ ಪೂಜೆ ಮಾಡಿ ಚಾಲನೆ ನೀಡಲಾಯಿತು. ಇದು ಗೀತಾ ಪಿಕ್ಚರ್ ಮೂಲಕ ಗೀತಾ ಶಿವರಾಜ್ ಕುಮಾರ್ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಚಿತ್ರ. ಚಿತ್ರ ತಂಡದ ಸಮ್ಮುಖದಲ್ಲಿ ಪೂಜೆ ಜತೆಗೆ ಹಾಡುಗಳ ಧ್ವನಿ ಮುದ್ರಣ ಮಾಡುವ ಮೂಲಕ ಅಧಿಕೃತವಾಗಿ ಚಿತ್ರ ಸೆಟ್ಟೇರಿತು.
ಈ ಸಂದರ್ಭದಲ್ಲಿ ಕೆ ಪಿ ಶ್ರೀಕಾಂತ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಗೀತಾ ಶಿವರಾಜ್‌ಕುಮಾರ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಹಾಜರಿದ್ದು, ಚಿತ್ರದ ಸ್ಕ್ರಿಪ್ಟ್ ಪೂಜೆಗೆ ಸಾಕ್ಷಿ ಆದರು.
‘ಮತ್ತೊಮ್ಮೆ ಶಿವಣ್ಣ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿ ವಿಚಾರ. ಈ ಚಿತ್ರದಲ್ಲೂ ಹೊಸ ರೀತಿಯ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ‘ವೇದ’ ಎನ್ನುವ ಹೆಸರು ಈಗಾಗಲೇ ಟ್ರೆಂಡ್ ಆಗಿದೆ. ಕತೆ ಕೂಡ ಇದೇ ರೀತಿ ಕ್ರೇಜ್ ಹುಟ್ಟು ಹಾಕುತ್ತದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಮತ್ತೊಂದು ಕಡೆ ಭಜರಂಗಿ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಮ್ಮಿಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೂ ಸಂಭ್ರಮ ಕೊಡುತ್ತದೆಂಬ ನಂಬಿಕೆ ಇದೆ,’ ಎನ್ನುತ್ತಾರೆ ನಿರ್ದೇಶಕ ಎ ಹರ್ಷ.
ಕೆಲವು ದಿನಗಳ ಹಿಂದೆ ಶಿವರಾಜ್‌ಕುಮಾರ್ ನಟನೆಯ ಭಜರಂಗಿ 2 ಚಿತ್ರ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ರಿಲೀಸ್ ಅದ ಕೆಲವೇ ಕ್ಷಣದಲ್ಲಿ ಯುಟ್ಯೂಬ್ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಸೆಪ್ಟೆಂಬರ್ 10ರಂದು ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
