ಒಂದನೇ ಕ್ಲಾಸ್‌ನಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಸಿಬಿಎಸ್‌ಸಿ ಹಾಗೂ ಸ್ಟೇಟ್‌ ಬೋರ್ಡ್‌ ಸಿಲೆಬಸ್‌ ಪಾಠ ಹೇಳುವ ಆ್ಯಪ್‌ ವಿಸ್ತಾ’ಸ್‌ಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ರಾಯಭಾರಿಯಾಗಿದ್ದಾರೆ. 

ಒಂದನೇ ಕ್ಲಾಸ್‌ನಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಸಿಬಿಎಸ್‌ಸಿ ಹಾಗೂ ಸ್ಟೇಟ್‌ ಬೋರ್ಡ್‌ ಸಿಲೆಬಸ್‌ ಪಾಠ ಹೇಳುವ ಆ್ಯಪ್‌ ವಿಸ್ತಾ’ಸ್‌ಗೆ (Vistas Learning App) ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ (Bharathi Vishnuvardhan) ರಾಯಭಾರಿಯಾಗಿದ್ದಾರೆ. ಈ ಆ್ಯಪ್‌ನ ಲೋಗೋ ಅನಾವರಣ ಮಾಡಿ ಮಾತನಾಡಿದ ಅವರು, ‘ವಿಷ್ಣುವರ್ಧನ್‌ (Vishnuvardhan) ಅವರು ಎಷ್ಟೋ ಮಂದಿ ಬಡ ಮಕ್ಕಳ ಫೀಸ್‌ ಕಟ್ಟಲು ಸಹಾಯ ಮಾಡಿದ್ದರು. 

ಆ ಮಕ್ಕಳು ಓದಿ ಉದ್ಯೋಗ ಹಿಡಿದು ಆ ವಿಷಯವನ್ನು ಬಂದು ತಿಳಿಸಿದಾಗ ಆಗುವ ಖುಷಿ ದೊಡ್ಡದು. ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ಅರ್ಜುನ್‌ ಸಾಮ್ರಾಟ್‌ (Arjun Samrat) ಅವರ ‘ವಿಸ್ತಾ’ಸ್‌’ ಆ್ಯಪ್‌ ಸಹಕಾರಿ. ಕಡಿಮೆ ದರದಲ್ಲಿ ಮಗುವಿನ ಮಾತೃಭಾಷೆಯೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಆ್ಯಪ್‌ನ ಮೂಲಕ ಶಿಕ್ಷಣ ನೀಡುತ್ತಿರುವುದು ಪ್ರೇರಣಾದಾಯಕ ಕೆಲಸ’ ಎಂದರು. ಈ ಆ್ಯಪ್‌ 99 ರು. ಹಾಗೂ 222 ರು.ಗಳಿಗೆ ಲಭ್ಯವಿದ್ದು, ಆನಿಮೇಷನ್‌ ವೀಡಿಯೋ ಸಹಿತ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುತ್ತದೆ. 

ಚಿಕ್ಕಮಗಳೂರು ‌ಮೂಲದ ಅರ್ಜುನ್ ಸಾಮ್ರಾಟ್ ಅವರು ಕನಿಷ್ಠ ಬೆಲೆಗೆ ಈ ಆ್ಯಪನ್ನು ರೂಪಿಸಿದ್ದಾರೆ. 2018ರಿಂದ 1,800 ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. 1ರಿಂದ 12ನೇ ತರಗತಿವರೆಗೆ ಅನಿಮೇಷನ್ ವೀಡಿಯೋ ಸಹಿತ ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿ ದಕ್ಷಿಣ ಭಾರತದ ಪ್ರಮುಖ ಬಾಷೆಗಳಲ್ಲಿ ಈ ಆ್ಯಪ್‌ ಲಭ್ಯವಿದೆ. ಕಾರ್ಯಕ್ರಮದಲ್ಲಿ ಸಿ.ಎಸ್.ಅರವಿಂದ್, ಅಶೋಕ್ ಜೈನ್, ಭಾರ್ಗವಿ ಗೋಪಿನಾಥ್ ಹಾಜರಿದ್ದರು.

ಭಾರತಿಯೇ ಭಾರತ ಮಾತೆ ಅಂತಿದ್ರು : ಭಾರತಿ ವಿಷ್ಣುವರ್ಧನ್

'ಯಜಮಾನ'ನ ಕತೆ ತೆರೆದಿಟ್ಟ ಭಾರತಿ: ‘ವಿಷ್ಣುವರ್ಧನ್‌ ಮತ್ತು ನಾನು ಸ್ಟಾರ್‌ಗಳಾಗಿದ್ದೆವು. ಆದರೆ ಒಂದು ಹಂತದಲ್ಲಿ ನಾವಿಬ್ಬರು ಮತ್ತು ನಮ್ಮಿಬ್ಬರು ಮಕ್ಕಳು ಆರು ತಿಂಗಳು ಗಂಜಿ ಕುಡಿದು ಬದುಕಿದ್ದೆವು. ದೇವರ ಆಶೀರ್ವಾದದಿಂದ ಮತ್ತೆ ಆ ಕಷ್ಟದಿಂದ ಎದ್ದುಬಂದೆವು.’ ಹೀಗಂತ ಹೇಳಿಕೊಂಡಿದ್ದಾರೆ ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್‌. ಖ್ಯಾತ ನಟ ಅನಿರುದ್ಧ ನಿರ್ದೇಶಿಸಿರುವ, ಕೀರ್ತಿ ಅನಿರುದ್ಧ ನಿರ್ಮಾಣದ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್‌ ತಮ್ಮ ಮತ್ತು ವಿಷ್ಣುವರ್ಧನ್‌ ಕುರಿತಾದ ಅನೇಕ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ.

ವಿಷ್ಣುವರ್ಧನ್‌ ಅವರು ಅವಕಾಶಗಳಿಲ್ಲದಾಗ ಡ್ರೈವಿಂಗ್‌ ಕೆಲಸಕ್ಕೆ ಮುಂದಾಗಿದ್ದರು ಎಂಬುದನ್ನು ತಿಳಿಸಿದ ಅವರು, ‘ಒಂದು ಹಂತದಲ್ಲಿ ಅವರಿಗೆ ಕೆಲಸ ಇರಲಿಲ್ಲ. ನಮ್ಮ ಬಳಿ ಇದ್ದ ಬೆಂಜ್‌ ಕಾರನ್ನು ಟ್ರಾವೆಲ್ಸ್‌ಗೆ ಜೋಡಿಸಿ ಕಾರು ಓಡಿಸುತ್ತೇನೆ ಎಂದಿದ್ದರು. ನಾನು ಸರಿ ಎಂದಿದ್ದೆ. ಮಾರನೇ ದಿನವೇ ಒಬ್ಬರು ನಿರ್ಮಾಪಕರು ಬಂದು ‘ಹೊಂಬಿಸಿಲು’ ಸಿನಿಮಾ ನೀವೇ ಮಾಡಬೇಕು ಅಂತ ಅಡ್ವಾನ್ಸ್‌ ಕೊಟ್ಟರು. ದೇವರು ಕೈಬಿಡಲಿಲ್ಲ’ ಎಂದರು. 

ಮದುವೆಗೂ ಮೊದಲಿನ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾನು ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದೆ. ಕೆಲವೊಮ್ಮೆ 24 ಗಂಟೆ ಕೆಲಸ ಮಾಡುತ್ತಿದ್ದೆ. ಮಧ್ಯಾಹ್ನದ ಬ್ರೇಕ್‌ ಸಮಯದಲ್ಲಿ ಮಾತ್ರ ನಿದ್ದೆ ಮಾಡುತ್ತಿದ್ದೆ. ಯಜಮಾನರ ಮೊದಲ ಸಿನಿಮಾ ಬಂದಾಗ ನಾನು ಆಗಲೇ ಸುಮಾರು 100 ಸಿನಿಮಾಗಳಲ್ಲಿ ನಟಿಸಿದ್ದೆ. ಆಗ ಒಂದ್ಸಲ ಅವರು ನನ್ನ ಭೇಟಿ ಮಾಡಲು ಬಂದಿದ್ದರು. ಆಮೇಲೆ ನಾಗರಹಾವು ಸಿನಿಮಾ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಹೋಗಿದ್ದೆ. 

ಭಾರತಿ ವಿಷ್ಣುವರ್ಧನ್ ಜೀವನದ ಬಗ್ಗೆ ಯಾರಿಗೂ ತಿಳಿಯದ ಘಟನೆಗಳಿವು!

ಆಮೇಲೆ ಅವರ ಜೊತೆ ನಟಿಸುವ ಅವಕಾಶ ಬಂತು. ನಾನು ಮತ್ತು ಅವರು ನಟಿಸಿದ ಮೊದಲ ಸಿನಿಮಾ ‘ಮನೆ ಬೆಳಗಿದ ಸೊಸೆ’. ಆ ಸಂದರ್ಭದಲ್ಲಿ ನಮ್ಮ ನಂಟು ಹೆಚ್ಚಾಯಿತು. ಅವರು ನನ್ನನ್ನು ಇಷ್ಟಪಟ್ಟಂತೆ ವರ್ತಿಸುತ್ತಿದ್ದರು. ಆಮೇಲೊಂದು ದಿನ ಅವರೇ ನನ್ನ ಬಳಿ ಮದುವೆ ಪ್ರಪೋಸಲ್‌ ಇಟ್ಟಾಗ ನಾನು ಮನೆಯವರು ಒಪ್ಪಿದ ಹುಡುಗನನ್ನು ಮದುವೆಯಾಗುತ್ತೇನೆ ಎಂದಿದ್ದೆ. ಆಗ ಅವರು ನಮ್ಮ ಮನೆಯವರಿಗೆ ಕ್ಲೋಸ್‌ ಆದರು’ ಎಂದರು.