ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್‌ಗೆ ಹೃದಯಾಘಾತ!
ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್‌ಗೆ ಹೃದಯಾಘಾತವಾಗಿದೆ. ಸದ್ಯಕ್ಕೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು (ಸೆ.26): ಕನ್ನಡದ ಹಿರಿಯ ನಟ ಹಾಗೂ ಪೋಷಕ ಕಲಾವಿದ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಣಿಪಾಲ್ ಅಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನದ ಹಿಂದೆ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಭಾನುವಾರ ಸಂಜೆ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಐಸಿಯೂನಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ನಾಳೆ ಜನಾರ್ಧನ್ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ. ಸ್ನೇಹಿತನ ನೋಡಲು ಹಿರಿಯ ಪೋಷಕ ನಟ ಬಿರಾದಾರ್ ಆಸ್ಪತ್ರೆಗೆ ಆಗಮಿಸಿದ್ದರು. ಐಸಿಯೂನಲ್ಲಿ ಇದ್ದ ಕಾರಣ ಜನಾರ್ಧನ್ ಅವರ ನೋಡಲು ಬೀರಾದರ್ ಅವರಿಗೆ ಅನುಮತಿ ನೀಡಿಲ್ಲ. ಆ ಬಳಿಕ ಬ್ಯಾಂಕ್ ಜನಾರ್ಧನ್ ಅವರ ಆರೋಗ್ಯ ವಿಚಾರಿಸಿದ ನಿಟಿ ರೇಣು ಶಿಕಾರಿ, ಶಿವಮೊಗ್ಗ ಬಾಸ್ಕರ್, ಉಮಾ ಶಂಕರ್, ರಾಜು ನಾಯಕ್, ಸುಜಾತ. ರಾಜೇಶ್ವರಿ ಪಾಂಡೆ, ಸತೀಶ್ ಬಡಿಗೇರ್ ಅವರಿಗೆ ಅವಕಾಶ ನೀಡಲಾಗಿದೆ.
1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಬ್ಯಾಂಕ್ ಜನಾರ್ಧನ್ ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲಿಯೇ ಪೂರೈಸಿದ್ದರು. ರಂಗಭೂಮಿ ಕಲಾವಿದರಾಗಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದ ಅವರು, ಕನ್ನಡದ 60ಕ್ಕೂ ಅಧಿಕ ಚಿತ್ರಗಳು ಹಾಗೂ ಟಿವಿ ಸಿರಿಯಲ್‌ಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಅವರ ಸಮಕಾಲೀನರು ಅವರೊಂದಿಗೆ ಮಾತ್ರವಲ್ಲದೆ, ತಮ್ಮ ನಂತರ ಬಂದ ಹಾಸ್ಯನಟರಾದ ಸಾಧುಕೋಕಿಲ, ಬುಲೆಟ್ ಪ್ರಕಾಶ್ ಸೇರಿದಂತೆ ಇನ್ನೂ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು. 2005ರ ನ್ಯೂಸ್, 1993ರ ಶ್ ಹಾಗೂ 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದಲ್ಲಿನ ಇವರ ಪಾತ್ರಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
1991ರಲ್ಲಿ ಕಾಶಿನಾಥ್ ಅವರ ಅಜಗಜಾಂತರ ಚಿತ್ರದ ಮೂಲಕ ಬ್ಯಾಂಕ್ ಜನಾರ್ಧನ್, ಕನ್ನಡ ಚಿತ್ರರಂಗಕ್ಕೆ ಪೋಷಕ ಕಲಾವಿದರಾಗಿ ಕಾಲಿಟ್ಟಿದ್ದರು.