Jamuna Death; 'ಒಲವೇ ಜೀವನ ಸಾಕ್ಷಾತ್ಕಾರ' ಖ್ಯಾತಿಯ ನಟಿ ಜಮುನಾ ನಿಧನ
ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು (ಜನವರಿ 27) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು (ಜನವರಿ 27) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನ ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಕಲಾ ಸೇವೆ ಮಾಡಿದ್ದಾರೆ. ಹಿರಿಯ ನಟಿಯ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ತೆಲುಗು ಸಿನಿಮಾರಂಗದ ಅತೀ ಹೆಚ್ಚು ಸಿನಿಮಾಗಳಲ್ಲಿ ಜಮುನಾ ನಟಿಸಿದ್ದಾರೆ. ಕರ್ನಾಟಕದಲ್ಲಿ ಜನಿಸಿದ ಜಮುನಾ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. 1952ರಲ್ಲಿ ಪುಟ್ಟಿಲು ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ 1954ರಲ್ಲಿ ಆದರ್ಶ ಪತಿ ಸಿನಿಮಾ ಮೂಲಕ ಕನ್ನಡ ಸಿನಿ ಪ್ರಿಯರ ಮುಂದೆ ಬಂದರು. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸುವ ಜೊತೆಗೆ ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ಗಾಯಕ ಚಂದ್ರಶೇಖರ ಕೆದಿಲಾಯ ಇನ್ನಿಲ್ಲ
ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಅವರು ಮೃತಪಟ್ಟರು. ಜಮುನಾ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇನ್ನು ಜಮುನಾ ನಟನೆಯ ಜತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆ ಆಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ ಹೊರನಡೆದರು. ನಂತರ ಅವರು ಬಿಜೆಪಿ ಪರ ಆಗಾಗ ಪ್ರಚಾರ ಮಾಡಿದ್ದರು.