Asianet Suvarna News Asianet Suvarna News

ಗೃಹಭಂಗದ ಕಂಟಿ ಜೋಯಿಸ್ ಪಾತ್ರಕ್ಕೆ ಜೀವ ತುಂಬಿದ್ದ ಲೋಹಿತಾಶ್ವ..!

ಎಸ್.ಎಲ್.ಭೈರಪ್ಪ ಕಾದಂಬರಿ ಗೃಹಭಂಗ ಕಥೆಗೆ ಒಂದು ನಿರ್ದಿಷ್ಟವಾದ ಗತಿಯನ್ನು ಕೊಡುವ ಕಂಟಿ ಜೋಯಿಸ್ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದುದು ಲೋಹಿತಾಶ್ವ. 

Sandalwood Senior Actor Lohitashwa Remembered by His Role Kanti Jois of Gruhabhanga grg
Author
First Published Nov 8, 2022, 10:50 PM IST

ವಿನಯ್ ಶಿವಮೊಗ್ಗ

ಶಿವಮೊಗ್ಗ(ನ.08):
““In an Artist’s Life, Death is Perhaps Not The Most Difficult Thing.” ಯಾವುದೇ stardom ಮೆರೆಯದೇ ಕಲಾವಿದನಾಗಿ ಚಿತ್ರರಂಗದಲ್ಲಿ ಬಂದು ಪೋಷಕ ಪಾತ್ರಗಳ ಮೂಲಕವೇ ತಮ್ಮ ಪ್ರತಿಭೆಯನ್ನು ಪದೇ ಪದೇ ಸಾಬೀತು ಪಡಿಸಿ ತಮ್ಮದೇ ಆದ ಒಂದು ವಿಶಿಷ್ಠವಾದ ಛಾಪು ಮೂಡಿಸಿದ ಹಿರಿಯ ಕಲಾವಿದರ ದೊಡ್ಡ ಪಟ್ಚಿ ಕನ್ನಡ ಚಿತ್ರರಂಗದಲ್ಲಿದೆ. ಬಾಲಣ್ಣ, ಅಶ್ವಥ್, ಲೋಕನಾಥ್ ಅಂತಹ ದಿಗ್ಗಜರಿಂದ ಹಿಡಿದು ಇವತ್ತಿನ ಅಚ್ಯುತ್‌ ಕುಮಾರ್ ವರೆಗೆ ಅನೇಕ ಪ್ರತಿಭಾವಂತರು ನಮಗೆ ಕಾಣಸಿಗುತ್ತಾರೆ. ಅವರ ನಡುವೆ ಒಂದು ವಿಶೇಷವಾದ ಹೆಸರೆಂದರೆ ಇಂದು ನಮ್ಮನ್ನಗಲಿದ ಲೋಹಿತಾಶ್ವ ಸರ್. 

ಈ ಪೋಷಕ ನಟರ ಪಾಡು ಬಹಳ ಭಿನ್ನ!  ನೂರಾರು ಚಿತ್ರಗಳಲ್ಲಿ ಹಲವಾರು ಪಾತ್ರಗಳನ್ನು ಅವರು ಮಾಡಿರಬಹುದು ಅದರೆ ಅದಾವುದೋ ಒಂದು ಪಾತ್ರ ಅವರನ್ನು ಮತ್ತಿಲ್ಲದ ಖ್ಯಾತಿ-ಜನಪ್ರಿಯತೆಯನ್ನು ತಂದುಕೊಡುತ್ತದೆ. ನಿಜವಾದ ಕಲಾವಿದ ಬಯಸುವುದು ಕೂಡ ಅಂತಹುದೊಂದು ಪಾತ್ರವನ್ನೇ ಅದು K.S. ಅಶ್ವಥ್ ನಟಿಸಿದ ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರು ಪಾತ್ರವಿರಬಹುದು, ಬಂಗಾರದ ಮನುಷ್ಯ ಚಿತ್ರದಲ್ಲಿ ಬಾಲಣ್ಣ ಮಾಡಿದ ರಾಚೂಟಪ್ಪನ ಪಾತ್ರವಿರಬಹುದು ಅಥವಾ ಒಡಾಲಾಳದ ಸಾಕವ್ವನ ಪಾತ್ರವನ್ನು ನಿಭಾಯಿಸಿದ ಉಮಾಶ್ರೀ ಇರಬಹುದು!

ಫಲಿಸದ ಚಿಕಿತ್ಸೆ; ಹಿರಿಯ ನಟ ಲೋಹಿತಾಶ್ವ ವಿಧಿವಶ

ಅದೆಷ್ಟೇ ಚಿತ್ರಗಳಲ್ಲಿ ಈ ನಟರು ನಟಿಸಿದರೂ ಈ ಪಾತ್ರಗಳು ಚಿತ್ರ ರಸಿಕರ ಎದೆಯಲ್ಲಿ ಶಾಶ್ವತವಾಗಿ ನೆಲೆಯೂರಿ ನಿಲ್ಲುತ್ತವೆ. ಭೈರಪ್ಪನವರ “ ಗೃಹಭಂಗ” ಕನ್ನಡ ಸಾಹಿತ್ಯಲೋಕದ ಅನುಪಮ ಕಾದಂಬರಿ. ಆ ಕಾದಂಬರಿ ಒಂದು ರೀತಿ ಭೈರಪ್ಪನವರ ಆತ್ಮಕಥೆ. ಅದರಲ್ಲಿ ಬರುವ ಪಾತ್ರಗಳ ಆಳ-ಅಗಲ ಬಹಳ ವಿಸ್ತಾರವಾದುದು. ಗೃಹಭಂಗ ಕಾದಂಬರಿ ಬಂದು ಸುಮಾರು ಮೂರು-ನಾಲ್ಕು ದಶಕಗಳ ನಂತರ ಗಿರೀಶ್ ಕಾಸರವಳ್ಳಿ ಅವರು ಅದನ್ನು ಧಾರವಾಹಿಯಾಗಿ ಚಿತ್ರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. 

ಮುಂಚೆಯೇ ಕಥೆ ಗೊತ್ತಿದ್ದ ಕಾರಣ ಯಾವ ಕಲಾವಿದರು. ಯಾವ ಪಾತ್ರವನ್ನು. ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಸಹಜವಾಗಿ ಭೈರಪ್ಪನವರ ಅಭಿಮಾನಿಗಳಲ್ಲಿ  ಇತ್ತು. ಗಂಗಮ್ಮ, ನಂಜವ್ವ, ಅಪ್ಪಣ್ಣ, ಅಯ್ಯ್ನೋರು ಹೀಗೆ ಹಲವು ಈಗಾಗಲೇ ಓದುಗದ ಚಿತ್ತದಲ್ಲಿ ಕೆತ್ತಿದಂತಹ ಪಾತ್ರಗಳು. ಅದರಲ್ಲಿ ಒಂದು ಈ ಕಂಠಿ ಜೋಯ್ಸನೆಂಬ ಅತಿ ವಿಲಕ್ಷಣ ಪಾತ್ರ. ಹತ್ತು ಹಲವು ಛಾಯೆಯ ಈ ಪಾತ್ರವನ್ನು ನಿಭಾಯಿಸುವುದು ಸುಲಭವಲ್ಲ. ತನ್ನ ಮಾತೇ ನಡೆಯಬೇಕೆಂಬ ಪುರುಷ ಪ್ರಜ್ಞೆ ಇರಬಹುದು, ಮಂತ್ರ-ತಂತ್ರ, ನಾಟಿ ವೈದ್ಯ, ಪುರೋಹಿತಿಕೆ, ಜ್ಯೋತಿಷ್ಯ ಹೀಗೆ ಹಲವು ರೀತಿಯ ಭಾವವುಳ್ಳ ವಿರಳಾತಿವಿರಳ ಪಾತ್ರ. ಕಥೆಗೆ ಒಂದು ನಿರ್ದಿಷ್ಟವಾದ ಗತಿಯನ್ನು ಕೊಡುವ ಈ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದುದು ನಮ್ಮ ಲೋಹಿತಾಶ್ವ ಸರ್. 

ಅಷ್ಟು ಚಿತ್ರಗಳಲ್ಲಿ ನಟಿಸಿದರೂ ಸಿಗದ ಜನಮನ್ನಣೆ ಈ ಕಿರುತೆರೆಯ ಧಾರಾವಾಹಿಯ ಪಾತ್ರ ಅವರಿಗೆ ತಂದಿತ್ತು. ಅವರ ಅಗಲವಾದ ಕಣ್ಣು, ಎತ್ತರದ ನಿಲುವು, ಶ್ರೀಮಂತ ಮಂದ್ರಸ್ಥಾಯಿಯ ಧ್ವನಿ, ಸ್ಪಷ್ಟ ಉಚ್ಛಾರ ಆ ಪಾತ್ರಕ್ಕೆ ನೂರಕ್ಕೆ ನೂರು ಜೀವ ತುಂಬಿತ್ತೆಂದರೆ ಸುಳ್ಳಲ್ಲ.

ಬಹುಶಃ ಇಂತಹ ಪಾತ್ರಗಳಿಗೆ ನಿಜವಾದ ಕಲಾವಿದನೊಬ್ಬ ಹಾತೊರೆಯುತ್ತಾನೆ. ಇಂದು ಅವರಿಲ್ಲ. ಆದರೆ ಅವರು ಅವರಾಗಿ ನಟಿಸಿದ ಕಂಠೀಜೋಯ್ಸ ಪಾತ್ರ ಮಾತ್ರದ ಮೋಡಿ ಮಾತ್ರ ನಿರಂತರ. ಕಲಾವಿದರ ಬದುಕಿನಲ್ಲಿ ಸಾವು ಎನ್ನುವುದು ಸುಲಭಕ್ಕೆ ದಕ್ಕದು ಏಕೆಂದರೆ ಅವರು ಅವರ ಪಾತ್ರಗಳ ಮೂಲಕ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತವಾಗಿ ಜೀವಂತವಿರುತ್ತಾರೆ. 
 

Follow Us:
Download App:
  • android
  • ios