‘ಪುಕ್ಸಟ್ಟೆಲೈಫು’ ಚಿತ್ರದ ಟ್ರೇಲರ್‌ ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಸಂಚಾರಿ ವಿಜಯ್‌ ಎಂಬ ಹೆಸರಿದ್ದ ಕುರ್ಚಿ ಮಧ್ಯಭಾಗದಲ್ಲಿತ್ತು. ತೆರೆಯ ಮೇಲೆ ಮೂಡಿದ ಟ್ರೇಲರ್‌ನಲ್ಲಿ ವಿಜಯ್‌ ನಟನೆ ವಿಜೃಂಭಿಸಿತ್ತು. ಕಾರ್ಯಕ್ರಮದುದ್ದಕ್ಕೂ ಆ ಖಾಲಿಯ ಕುರ್ಚಿ ಸೃಷ್ಟಿಸಿದ ಶೂನ್ಯ ಒಂದೆಡೆ, ಅವರೊಂದಿಗಿನ ನೆನಪಿನ ಫಲಕು ಮತ್ತೊಂದೆಡೆ.

ಪದ್ಮಶ್ರೀ ಪುರಸ್ಕೃತ ಕಲಾವಿದೆ ಬಿ ಜಯಶ್ರೀ, ‘ವಿಜಯ್‌ ಚೇತನ ಆಗಿದ್ದಾರೆ ಅಂದುಕೊಂಡು, ಅವರ ಹೆಸರಲ್ಲಿ ಒಳ್ಳೊಳ್ಳೆ ಕೆಲಸ ಮಾಡೋಣ’ ಎಂದರು.

ರಂಗಾಯಣ ರಘು, ‘ಸಂಚಾರಿ ವಿಜಯ್‌ ಯಾವ ರೀತಿ ಪಾತ್ರದೊಳಗೆ ಪಾತ್ರವಾಗುತ್ತಿದ್ದ ಅಂದರೆ ಆತನ ನಟನೆಯ ‘ಅವನಲ್ಲ, ಅವಳು’ ಚಿತ್ರ ನೋಡಿ ದೆಹಲಿಯ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರೊಬ್ಬರು ತೃತೀಯ ಲಿಂಗಿಯೊಬ್ಬರಿಂದಲೇ ಈ ನಟನೆ ಮಾಡಿಸಲಾಗಿದೆ ಅಂತ ವಾದಕ್ಕೆ ನಿಂತಿದ್ದರು. ಕೊನೆಗೆ ಆ ಹುಡುಗ ನಮ್ಮ ಸಂಚಾರಿ ತಂಡದವನು, ತೃತೀಯ ಲಿಂಗಿಯಲ್ಲ ಅಂತ ಮನದಟ್ಟು ಮಾಡಲು ಸಾಕಾಗಿ ಹೋಯ್ತು’ ಎಂದರು.

ನಾಯಕಿ ಮಾತಂಗಿ, ‘ಹೀರೋಯಿನ್‌ ಅಂದ ಮಾತ್ರಕ್ಕೆ ಗೊಂಬೆ ಥರ ಸಿನಿಮಾದಲ್ಲಿ ಬಂದು ಹೋಗೋದು ನನಗಿಷ್ಟವಿಲ್ಲ. ಆದರೂ ರಂಗಭೂಮಿಯವರೇ ತುಂಬಿದ್ದ ಈ ಚಿತ್ರದ ಶೂಟಿಂಗ್‌ನಲ್ಲಿ ನೀರಿಂದ ತೆಗೆದ ಮೀನಿನಂತಾಗಿದ್ದೆ. ಆಗ ಧೈರ್ಯ ತುಂಬಿದ್ದು ವಿಜಯ್‌’ ಎಂದು ನೆನೆದರು.

ಸಂಚಾರಿ ವಿಜಯ್‌ ನಟನೆಯ ಪುಕ್ಸಟ್ಟೆಲೈಫು ಟ್ರೈಲರ್‌ ಬಿಡುಗಡೆ

    ನಿರ್ದೇಶಕ ಅರವಿಂದ ಕುಪ್ಳೀಕರ್‌, ‘ಈಗ ಅವನೊಬ್ಬ ಇರ್ಬೇಕಿತ್ತು, ಇದ್ದಾನೆ. ಉಳಿದಂತೆ ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದೀವಿ. ಹೊಸ ಬಗೆಯ ಈ ಚಿತ್ರ ಜನರಿಗೆ ಇಷ್ಟವಾಗುವ ಧೈರ್ಯ ಇದೆ’ ಎಂದು ಹೇಳಿದರು.

    ನಿರ್ಮಾಪಕ ನಾಗರಾಜ ಸೋಮಯಾಜಿ, ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಅಚ್ಯುತ ಕುಮಾರ್‌, ಶ್ರೀನಿವಾಸ ಮೇಷ್ಟು್ರ, ಸಿನಿಮಾಟೋಗ್ರಾಫರ್‌ ಅದ್ವೈತ್‌ ಉಪಸ್ಥಿತರಿದ್ದರು. ರಂಗಗೀತೆಗಳು, ರಂಗಭೂಮಿ ಮೆಲುಕುಗಳೂ ಸಿನಿಮಾದೊಂದಿಗೆ ಸೇರಿ ಸಿನಿ-ರಂಗದ ವಾತಾವರಣವಿತ್ತು.

    YouTube video player