Asianet Suvarna News Asianet Suvarna News

ರಾಬರ್ಟ್‌ ‘ದರ್ಶನ’ಕ್ಕೆ ಸಿನಿಪ್ರಿಯರ ದಂಡು!

ರಾಬರ್ಟ್‌ ‘ದರ್ಶನ’ಕ್ಕೆ ಸಿನಿಪ್ರಿಯರ ದಂಡು! ಎಲ್ಲ ಜಿಲ್ಲೆಗಳ ಚಿತ್ರಮಂದಿರದಲ್ಲೂ ಹೌಸ್‌ಫುಲ್‌ ಪ್ರದರ್ಶನ, ಹಬ್ಬದ ವಾತಾವರಣ | ಕನ್ನಡ ಚಿತ್ರರಂಗದಲ್ಲಿ ಹೊಸ ಉತ್ಸಾಹ | ಮೊದಲ ದಿನವೇ 15 ಕೋಟಿ ರು. ಗಳಿಕೆ?

Roberrt movie gets huge response in sandalwood and Tollywood dpl
Author
Bangalore, First Published Mar 12, 2021, 9:55 AM IST

ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಗುರುವಾರ ಬಿಡುಗಡೆಯಾದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರಕ್ಕೆ ನಿರೀಕ್ಷೆಯಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು, ಪ್ರೇಕ್ಷಕರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬರಮಾಡಿಕೊಂಡಿದ್ದಾರೆ.

"

ಕೋವಿಡ್‌ ಅನ್‌ಲಾಕ್‌ ಬಳಿಕ ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಅದ್ಧೂರಿ ಬಜೆಟ್‌ ಸಿನಿಮಾ ‘ಪೊಗರು’ ಭಾರೀ ಯಶಸ್ಸು ಕಂಡಿತ್ತು. ಇದೀಗ ‘ರಾಬರ್ಟ್‌’ಗೂ ಅಭೂತಪೂರ್ವ ಬೆಂಬಲ ದೊರಕಿರುವುದು ಕೊರೋನಾ ಹೊಡೆತಕ್ಕೆ ಕಮರಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಗೆ ಕಾರಣವಾಗಿದೆ.

qpu6ppರಾಬರ್ಟ್ ಚಿತ್ರ ವಿಮರ್ಶೆ: ಹೀರೋಗಿಲ್ಲ ಶಾದಿಭಾಗ್ಯ, ರೊಮ್ಯಾನ್ಸ್‌ಗೆ ಅಡ್ಡಿ ಇಲ್ಲ

‘ರಾಬರ್ಟ್‌’ ಸಿನಿಮಾ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ, ಕಲಬುರಗಿ, ರಾಯಚೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಿದ್ದು, ಏಕಪರದೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿರುವುದು ಪ್ರೇಕ್ಷರಲ್ಲಿ ನಿರಾಸೆ ಮೂಡಿಸಿದೆ.

ಸಿನಿಮಾ ತೆರೆಕಂಡ ಎಲ್ಲ ಚಿತ್ರಮಂದಿರಗಳಲ್ಲೂ ನಟ ದರ್ಶನ್‌ ಅವರ ಬಹು ಎತ್ತರದ ಕಟೌಟ್‌ ಅಳವಡಿಸಿ, ಹೂವಿನ ಹಾರಗಳ ಅಲಂಕಾರ, ಹಾಲಿನ ಅಭಿಷೇಕ, ಪಟಾಕಿ ಸಿಡಿಸುವ ಹಾಗೂ ಡೊಳ್ಳು ಕುಣಿತ ಆಯೋಜಿಸುವ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ಮೆರೆದರು. ಕಟೌಟ್‌ ಹಾಗೂ ಹೂವಿನ ಹಾರಗಳಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇಂದಿನಿಂದ ರಾಬರ್ಟ್‌ ಹವಾ: ಕನ್ನಡ ಚಿತ್ರರಂಗದಲ್ಲಿ ನವೋತ್ಸಾಹ!

ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ದರ್ಶನ್‌ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದರು. ಅಭಿಮಾನಿ ಸಂಘಗಳ ವತಿಯಿಂದ ಚಿತ್ರಮಂದಿರಗಳ ಅಲಂಕಾರ ಸೇರಿದಂತೆ ವಿವಿಧ ರೀತಿ ಕಾರ್ಯಕ್ರಮಗಳ ಮೂಲಕ ‘ರಾಬರ್ಟ್‌’ ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಣೆ ಮಾಡಿದರು. ಪರದೆ ಮುಂದೆ ಆರತಿ ಎತ್ತಿ, ಕುಂಬಳಕಾಯಿ, ಈಡುಗಾಯಿ ಒಡೆದು ಶುಭ ಕೋರಿದ ಘಟನೆಗಳೂ ಅನೇಕ ಕಡೆ ನಡೆದಿವೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ 180 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಮಾಡಲಾಯಿತು. ಕೋಲಾರ ಮತ್ತು ಗಂಗಾವತಿಯಲ್ಲಿ ಬೆಳಗ್ಗೆ ಶೋ ಪ್ರಾರಂಭಿಸಲು ತಡವಾಗಿದ್ದಕ್ಕೆ ಪ್ರೇಕ್ಷಕರು ಗದ್ದಲ ಮಾಡಿರುವ ಘಟನೆಗಳು ವರದಿಯಾಗಿವೆ.

ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಗುರುವಾರ ಬೆಳಗ್ಗೆ 5.42ಕ್ಕೆ ಚಿತ್ರತಂಡದಿಂದ ಪೂಜೆ ಮಾಡಲಾಯಿತು. ಇದೇ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ನಿರ್ದೇಶಕ ನಂದಕಿಶೋರ್‌ ಪುತ್ರ ಶೌರ್ಯನಿಗೆ ಚಿತ್ರದ ಮೊದಲ ಟಿಕೆಟ್‌ ಕೊಡುವ ಮೂಲಕ ‘ರಾಬರ್ಟ್‌’ ಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಗಾಂಧೀನಗರದಲ್ಲಿ ರಾಬರ್ಟ್ ಗ್ರ್ಯಾಂಡ್ ಕಟೌಟ್..!

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಲ್ಟಿಪ್ಲೆಕ್ಸ್‌ ಮತ್ತು ಏಕಪರದೆಯ 276 ಚಿತ್ರಮಂದಿರಗಳಲ್ಲಿ ರಾಬರ್ಟ್‌ ಸಿನಿಮಾ ತೆರೆಗೆ ಬಂದಿದ್ದು, ಒಂದು ಚಿತ್ರಮಂದಿರದಲ್ಲಿ 5 ರಿಂದ 6 ಶೋ ಲೆಕ್ಕದಲ್ಲಿ ಮೊದಲ ದಿನವೇ 1300 ಶೋಗಳನ್ನು ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 750 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರುವ ರಾಬರ್ಟ್‌ ಚಿತ್ರದ ಮೊದಲ ದಿನದ ಥಿಯೇಟರ್‌ ಕಲೆಕ್ಷನ್‌ 15 ಕೋಟಿ ರು. ಆಗಿದೆ ಎನ್ನಲಾಗುತ್ತಿದೆ. ಈ ಪೈಕಿ ನಿರ್ಮಾಪಕರ ಶೇರಿಂಗ್‌ 11.5 ಕೋಟಿ ರು. ಬರುವ ಸಾಧ್ಯತೆಗಳಿವೆ.

ಗವಿಗಂಗಾಧರೇಶ್ವರನ ದರ್ಶನ:

ಮಾಸ್‌, ಕ್ಲಾಸ್‌ ಹೀಗೆ ಎಲ್ಲ ವರ್ಗದ ಪ್ರೇಕ್ಷಕರಿಗೂ ‘ರಾಬರ್ಟ್‌’ ಸಿನಿಮಾ ಮೆಚ್ಚುಗೆ ಆಗುತ್ತಿದೆ. ಇತ್ತ ತಮ್ಮ ಸಿನಿಮಾ ಬಿಡುಗಡೆಯ ಸಂಭ್ರಮವನ್ನು ಅಭಿಮಾನಿಗಳು ಸವಿಯುತ್ತಿದ್ದರೆ, ನಟ ದರ್ಶನ್‌ ಅವರು ಶಿವರಾತ್ರಿ ಹಬ್ಬ ಹಾಗೂ ‘ರಾಬರ್ಟ್‌’ ಬಿಡುಗಡೆಯ ಪ್ರಯುಕ್ತ ಬೆಂಗಳೂರಿನ ಶ್ರೀಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಟಾಲಿವುಡ್‌ನಲ್ಲೂ ದರ್ಶನ್‌ ಹವಾ

ಈಗಾಗಲೇ ‘ಕುರುಕ್ಷೇತ್ರ’ ಚಿತ್ರದ ಮೂಲಕ ಟಾಲಿವುಡ್‌ ಬಾಗಿಲು ತಟ್ಟಿಬಂದಿದ್ದ ದರ್ಶನ್‌ ಅವರು ಈಗ ‘ರಾಬರ್ಟ್‌’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಟಾಲಿವುಡ್‌ ಅಂಗಳಕ್ಕೆ ಪ್ರವೇಶಿಸಿದ್ದಾರೆ ಎಂಬುದು ಚಿತ್ರದ ಯಶಸ್ಸಿಗೆ ಸಾಕ್ಷಿ. ಆಂಧ್ರ, ತೆಲಂಗಾಣದಲ್ಲೂ ಬೆಳಗ್ಗೆ 9 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿರುವುದು, ಕನ್ನಡ ಚಿತ್ರವೊಂದಕ್ಕೆ ಸಿಗುತ್ತಿರುವ ಬಹು ದೊಡ್ಡ ರಾಜಮರ್ಯಾದೆ ಎನ್ನಲಾಗುತ್ತಿದೆ. ತೆಲುಗಿನ ಹಲವು ನಟ, ನಟಿಯರು, ತಂತ್ರಜ್ಞರು ಹಾಗೂ ನಿರ್ಮಾಪಕರು ಕೂಡ ‘ರಾಬರ್ಟ್‌’ ಮೇಕಿಂಗ್‌ ಹಾಗೂ ದರ್ಶನ್‌ ಅವರ ಸ್ಕ್ರೀನ್‌ ಅಪೀಯರೆನ್ಸ್‌ಗೆ ಮನಸೋತಿದ್ದಾರೆ.

Follow Us:
Download App:
  • android
  • ios