ಛೇ....! ಆ ವಿಧಿ ತುಂಬಾ ಕ್ರೂರಿ ಕಣ್ರಿ, ಸಾಯೋ ವಯಸ್ಸಾ ಆತನದು!?

ಹಾಗೆ ವೇದಿಕೆ ಮೇಲೆ ಸಿನಿಮ್ಯಾಟಿಕ್‌ ಆಗಿ ಎಂಟ್ರಿ ಕೊಟ್ಟು, ತಮ್ಮ ಡ್ಯಾನ್ಸ್‌ ಮೂಲಕವೇ ಗಮನ ಸೆಳೆದಿದ್ದು ನಟ ಚಿರಂಜೀವಿ ಸರ್ಜಾ. ಅದು ಕಿಶೋರ್‌ ಸರ್ಜಾ ನಿರ್ದೇಶನದ ‘ವಾಯುಪುತ್ರ’ ಚಿತ್ರದ ಮುಹೂರ್ತ ಸಮಾರಂಭ. ನಟ ಚಿರಂಜೀವಿ ಸರ್ಜಾ ಅವರನ್ನು ಕನ್ನಡಿಗರ ಮುಂದೆ ಪರಿಚಯಿಸಲು ಅವರ ಸೋದರ ಮಾವ ಅರ್ಜುನ್‌ ಸರ್ಜಾ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ರಂಗುರಂಗಿನ ಕಾರ್ಯಕ್ರಮ.

ಚಿರು ಇನ್ನಿಲ್ಲ ಅನ್ನೋದನ್ನು ನನಗೆ ನಂಬಲು ಆಗುತ್ತಿಲ್ಲ. ಇಷ್ಟುಚಿಕ್ಕ ವಯಸ್ಸಿನಲ್ಲಿ ಹೀಗೆ ಆಗಿದ್ದು ದುರ್ದೈವ. ತುಂಬಾ ಫಿಟ್‌ ಆಗಿದ್ದರು. ಎಲ್ಲಿ ಸಿಕ್ಕರೂ ನಗುತ್ತಾ ಮಾತನಾಡುತ್ತಿದ್ದರು. ಸಿನಿಮಾ ಬಗ್ಗೆ ತುಂಬಾ ಫ್ಯಾಷನ್‌ ಇತ್ತು. ಎಲ್ಲರೂ ಗೆಲ್ಲಬೇಕು, ಸಿನಿಮಾ ರಂಗ ಗೆಲ್ಲಬೇಕು ಎನ್ನುತ್ತಿದ್ದರು. ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕು ಎನ್ನುತ್ತಿದ್ದರು. - ಲಹರಿ ವೇಲು

ಆ ಮೊದಲ ಎಂಟ್ರಿಯಲ್ಲೇ ಯುವ ಸಾಮ್ರಾಟ್‌ ಅನಿಸಿಕೊಂಡರು ಚಿರು. ಆ ನಂತರ ವೇದಿಕೆ ಮೇಲೆ ಒಬ್ಬೊಬ್ಬರಾಗಿ ಬಂದ ಗಣ್ಯರು ಮಾತನಾಡುತ್ತಿದ್ದರೆ ಎಲ್ಲರ ಮಾತು ಮುಗಿಸುವ ತನಕ ಕೈ ಕಟ್ಟಿಕೊಂಡೇ ನಿಂತಿದ್ದ ಚಿರಂಜೀವಿ ಸರ್ಜಾ ಅಂದಿನ ವಿನಯ, ಈ ಕ್ಷಣದವರೆಗೂ ಮುಂದುವರೆಯುತ್ತ ಬಂದಿದೆ. 25ಕ್ಕೂ ಹೆಚ್ಚು ಚಿತ್ರಗಳಲ್ಲೂ ನಟಿಸಿದರೂ ತಮ್ಮ ಸೋದರ ಮಾವ ಅರ್ಜುನ್‌ ಸರ್ಜಾ ಮೇಲಿನ ಗೌರವ, ಭಯ, ಪ್ರೀತಿ ಮತ್ತು ಅಭಿಮಾನವನ್ನು ಎಂದೂ ಕಳೆದುಕೊಂಡವರಲ್ಲ. ಮಾವ ಅಂದ್ರೆ ಭಯ ತುಂಬಿದ ಪ್ರೀತಿ, ಸೋದರ ಧ್ರುವ ಸರ್ಜಾ ಅಂದರೆ ಪಂಚ ಪ್ರಾಣ. ಸಿನಿಮಾದಷ್ಟೇ ಕುಟುಂಬವನ್ನು ಪ್ರೀತಿಸುತ್ತಿದ್ದ ಚಿರು, ಆ ಕಾರಣಕ್ಕೆ ಸಿನಿಮಾ ಕುಟುಂಬದ ಜತೆಗೇ ತಮ್ಮ ಹೊಸ ಜೀವನದ ನಂಟು ಬೆಳೆಸಿಕೊಂಡರು. ಮೂರು ವರ್ಷಗಳ ಹಿಂದೆ ಸುಂದರ್‌ ರಾಜ್‌ ಕುಟುಂಬದ ಕುಡಿ ನಟಿ ಮೇಘನಾ ರಾಜ್‌ ಅವರ ಕೈ ಹಿಡಿದು ವಿವಾಹ ಆದರು. ಮದುವೆಯ ನಂತರವೂ ಇಬ್ಬರು ಸಿನಿಮಾಗಳಲ್ಲಿ ಮುಂದುವರೆದಿದ್ದರು.

ಅವರೊಂದಿಗೆ ಇದ್ದಾಗೆಲ್ಲಾ ಖುಷಿ ಖುಷಿಯಾಗಿ ಇರುತ್ತಿದ್ದೆ. ಎಂತಹ ಸಂದರ್ಭ ಬಂದರೂ ನಗುತ್ತಲೇ ಇದ್ದರೂ, ನಾನು ಏನ್‌ ಸರ್‌ ನಿಮಗೆ ಟೆನ್ಶನ್‌ ಆಗುವುದಿಲ್ಲವೇ ಎಂದರೆ, ಬದುಕಲ್ಲಿ ಯಾವಾಗಲೂ ನಗುತ್ತಿರಬೇಕು, ಇದೇ ನಮ್ಮ ಆಸ್ತಿ ಎನ್ನುತ್ತಿದ್ದರು. ಚಿತ್ರರಂಗಕ್ಕೆ ದೊಡ್ಡ ಲಾಸ್‌ ಆಗಿದೆ. ಅವರ ಮನಸ್ಸಲ್ಲಿ ಯಾವುದೇ ಸೀಕ್ರೆಟ್‌ ಇರುತ್ತಿರಲಿಲ್ಲ. ಒಪನ್‌ ಆಗಿ ಎಲ್ಲರೊಂದಿಗೂ ಮಾತಾಡುತ್ತಿದ್ದರು. ಮಡದಿ ಮೇಘನ ಜೊತೆಗೆ ಸಾಕಷ್ಟುಲವಲವಿಕೆಯಿಂದ ಇದ್ದರು. ಅವರೊಂದು ಒಪನ್‌ ಬುಕ್‌. ಮೂರು ತಿಂಗಳು ಅವರೊಂದಿಗೆ ಕೆಲಸ ಮಾಡಿದ್ದೇನೆ. ಈ ವೇಳೆ ಯಾರೇ ಸಪ್ಪಗೆ ಇದ್ದರೂ ಖುಷಿ ಪಡಿಸುತ್ತಿದ್ದರು. ನನಗೆ ಚಿರು ಎಂದ ತಕ್ಷಣ ನೆನಪಾಗುವುದೇ ನಗು.- ಅದಿತಿ ಪ್ರಭುದೇವ್

 

ಹುಟ್ಟಿದ್ದು- 1980 ಅಕ್ಟೋಬರ್‌ 17

ನಿಧನ- 2020 ಜೂನ್‌ 7

ವಯಸ್ಸು- 39

ಸರ್ಜಾ ಕುಟುಂಬದ ಬಹು ದೊಡ್ಡ ನಂಬಿಕೆ ಅಂಜನೇಯ. ಈ ಕಾರಣಕ್ಕೆ ಏನೋ ಚಿರಂಜೀವಿ ಸರ್ಜಾ ಅವರ ಮೊದಲ ಚಿತ್ರಕ್ಕೆ ‘ವಾಯುಪುತ್ರ’ ಎಂದು ಹೆಸರಿಟ್ಟಿದ್ದು ಅವರ ಮಾವ. ಹಾಗೆ ನೋಡಿದರೆ ಮೊದಲ ಚಿತ್ರದಲ್ಲೇ ಅಂಬರೀಶ್‌ ಅವರಂತಹ ದಿಗ್ಗಜ ಕಲಾವಿದರ ಜತೆ ತೆರೆ ಹಂಚಿಕೊಂಡ ಅದೃಷ್ಟವಂತ ನಟ. ಆ ಚಿತ್ರದ ನಂತರ ಒಂದರ ಹಿಂದೆ ಒಂದರಂತೆ ಸಾಹಸ ಪ್ರಧಾನ ಚಿತ್ರಗಳನ್ನು ಮಾಡುತ್ತಲೇ ಹೋದರು. ವರ್ಷಕ್ಕೆ ಕನಿಷ್ಠ ಎರಡು ಅಥವಾ ಮೂರು ಚಿತ್ರಗಳು ಬಿಡುಗಡೆ ಆಗುತ್ತಿದ್ದರೆ, ನಾಲ್ಕೈದು ಸಿನಿಮಾಗಳು ಶೂಟಿಂಗ್‌ ಸೆಟ್‌ನಲ್ಲಿರುತ್ತಿದ್ದವು. ಈಗಲೂ ಲಾಕ್‌ಡೌನ್‌ಗೂ ಮೊದಲು ಶಿವಾರ್ಜುನ ತೆರೆಕಂಡರೆ, ಶೂಟಿಂಗ್‌ ಮುಗಿಸಿದ್ದ ಎರಡು ಚಿತ್ರಗಳು, ಶೂಟಿಂಗ್‌ಗೆ ಹೋಗಬೇಕಾದ ಮೂರು ಚಿತ್ರಗಳು ಬಾಕಿ ಉಳಿದುಕೊಂಡಿದ್ದವು. ಆ ಮಟ್ಟಿಗೆ ಚಿರಂಜೀವಿ ಸರ್ಜಾ ಬ್ಯುಸಿ ಸ್ಟಾರ್‌ ಆಗಿದ್ದರು.

ನಿನ್ನೆ ತಾನೆ ಒಂದು ನಾಯಿ ಮರಿ ತರಿಸಿಕೊಂಡಿದ್ದರಂತೆ. ಇಂದು ಆಸ್ಪತ್ರೆ ಸೇರಿ ಹೀಗಾಗಿದೆ. ಇದನ್ನು ನಂಬಲು ಆಗುತ್ತಲೇ ಇಲ್ಲ. ಜಿಮ್‌ ಮಾಡಿಕೊಂಡು ಫಿಟ್‌ ಆಗಿದ್ದರು. ಸಾಕಷ್ಟುಕಾರ್ಯಗಳಲ್ಲಿ ನಾವು ಜೊತೆಯಾಗಿ ಕೆಲಸ ಮಾಡಿದ್ದೇವೆ. ಇದು ಅವರ ಕುಟುಂಬ, ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರು ನಮಗೆ ಫ್ಯಾಮಿಲಿ ಫ್ರೆಂಡ್‌ ಆಗಿದ್ದವರು. ಅವರ ಇಡೀ ಕುಟುಂಬ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಸಂಪೂರ್ಣವಾಗಿ ತಮ್ಮನ್ನು ಚಿತ್ರರಂಗಕ್ಕೆ ತೆರೆದುಕೊಂಡಿದ್ದವರು. ಚಿರು ಹಲವಾರು ಸಿನಿಮಾಗಳಲ್ಲಿ ಮಾಡಿದ್ದರು. ಅರ್ಜುನ್‌ ಸರ್ಜಾ ಅವರ ದಾರಿಯಲ್ಲೇ ಸಾಗುವ ಆಸೆ ಅವರಿಗೆ ಇತ್ತು. ಇತ್ತೀಚೆಗೆ ಸಾಕಷ್ಟುಸಿನಿಮಾಗಳಿಗೆ ಸಹಿ ಮಾಡಿದ್ದರು. ಮಾರ್ಕೆಟ್‌ ಕೂಡ ಹೆಚ್ಚುತ್ತಿತ್ತು. - ಇಂದ್ರಜಿತ್‌ ಲಂಕೇಶ್

ಸಾಮಾನ್ಯವಾಗಿ ಸಾಹಸ ಚಿತ್ರಗಳಲ್ಲೂ ಹಾಡುಗಳು ಹಿಟ್‌ ಆಗುವುದು ಅಪರೂಪ. ಆದರೆ ಚಿರು ಅವರ ಅಜಿತ್‌ ಹಾಗೂ ಸಿಂಗ ಚಿತ್ರಗಳಲ್ಲಿ ಹಾಡುಗಳು ಹಿಟ್‌ ಆಗಿದ್ದವು.

ಇತ್ತೀಚೆಗಷ್ಟೆತೆರೆಕಂಡ ಗುರು ದೇಶಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೇ ನಿರ್ದೇಶಕರ ಜತೆ ಮಾಡಿದ್ದ ರುದ್ರತಾಂಡವ ಸಿನಿಮಾ ಚಿರು ಅವರಿಗೆ ದೊಡ್ಡ ಮಟ್ಟದಲ್ಲಿ ಆಕ್ಷನ್‌ ಇಮೇಜ್‌ ನೀಡಿತು.

ಇಲ್ಲಿವರೆಗೂ ಚಿರಂಜೀವಿ ಸರ್ಜಾ ನಟನೆಯ 22 ಸಿನಿಮಾಗಳು ತೆರೆಗೆ ಬಂದಿದ್ದವು. ಅಂದಹಾಗೆ ಸಿನಿಮಾ ನಟರಾಗುವ ಮುನ್ನ ತಮ್ಮ ಸೋದರ ಮಾವ ಅರ್ಜುನ್‌ ಸರ್ಜಾ ಅವರ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿಮಾ ಪಾಠಗಳನ್ನು ಕಲಿತವರು. ನಾಲ್ಕು ವರ್ಷ ತಮ್ಮ ಮಾವನ ಜತೆ ಕೆಲಸ ಮಾಡಿದ ನಂತರವೇ ಚಿರು, ಕ್ಯಾಮೆರಾ ಮುಂದೆ ನಿಂತಿದ್ದು. ಅರ್ಜುನ್‌ ಸರ್ಜಾ ಅವರಿಗೂ ಕೂಡ ತಮ್ಮ ಕುಟುಂಬದ ಹೆಸರು ಇದ್ದರೆ ಮಾತ್ರ ಸಾಲದು, ಅದಕ್ಕೆ ಬೇಕಾದ ತಯಾರಿಯೂ ಅಗತ್ಯ ಎಂದು ತಿಳಿದುಕೊಂಡೇ ಎಲ್ಲ ರೀತಿಯಲ್ಲೂ ತರಬೇತಿ ನೀಡಿದ ನಂತರವೇ ವಾಯುಪುತ್ರ ಚಿತ್ರದ ಮೂಲಕ ನಾಯಕ ನಟನಾಗಿ ಲಾಂಚ್‌ ಮಾಡಿಸಿದರು.

ಅಂಬರೀಶ್‌ ಕಂಡರೆ ಚಿರುಗೆ ಬಹಳ ಪ್ರೀತಿ. ಅಂಬಿ ಇದ್ದಾಗ ಅವರ ಕೈ ಹಿಡಿದು ಒತ್ತುತ್ತಾ, ಕಾಲು ಒತ್ತುತ್ತಾ ಕೂರುತ್ತಿದ್ದ. ಮನೆಗೆ ಬಂದರೆ ಅವರ ಮುಂದೆ ಕೂರುತ್ತಿರಲಿಲ್ಲ. ಅಂಬರೀಶ್‌ಗೂ ಚಿರು ಅಂದ್ರೆ ಬಹಳ ಅಕ್ಕರೆ. ಆತ ಬಹಳ ಲವಲವಿಕೆಯ ಜೀವನ ಪ್ರೀತಿಯ ಹುಡುಗ. ನಮ್ಮ ಅಕ್ಕನ ಮಗಳ ಮದುವೆ ಕಾರ್ಯಕ್ರಮಕ್ಕೆ ಚಿರು ಮೇಘನ ಬಂದಿದ್ದರು. ನಮ್ಮ ಮನೆಯ ಹತ್ತಿರವೆ ಅವರ ಮನೆ. ಇದೊಂದು ಆಘಾತಕಾರಿ ಸುದ್ದಿ. ಇಷ್ಟುಚಿಕ್ಕ ವಯಸ್ಸಿಗೆ ಹೀಗಾಗಿದೆ ಎಂದರೆ ಏನು ಹೇಳಲು ಸಾಧ್ಯ. ಆ ಭಗವಂತ ಮೇಘನಾ, ಮನೆಯವ್ರಿಗೆ ದು:ಖ ಭರಿಸುವ ಶಕ್ತಿ ನೀಡಬೇಕು. ಚಿರು ತುಂಬಾ ಕೂಲ್‌ ಸ್ವಭಾವದ ಹುಡುಗ. ಸಿನಿಮಾ ಹಿಟ್‌ ಆಗಲಿ, ಫ್ಲಾಪ್‌ ಆಗಲಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. - ಸುಮಲತಾ ಅಂಬರೀಷ್‌, ಸಂಸದೆ

ತಮ್ಮ ಮಾವನ ಬೆಂಬಲ, ಬೆನ್ನೆಲುಬಿನಿಂದ ಚಿತ್ರರಂಗಕ್ಕೆ ಬಂದರೂ ಆ ನಂತರ, ಸರ್ಜಾ ಕುಟುಂಬ ಎಂಬ ಯಾವ ಶಿಫಾರಸ್ಸು ಇಲ್ಲದೆ ತಾವೇ ಗುರುತಿಸಿಕೊಳ್ಳುವ ಮಟ್ಟಿಗೆ ಬೆಳೆದರು. ಚಿರಂಜೀವಿ ಸರ್ಜಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಲಾಸ್‌ ಆಗಲ್ಲ ಎನ್ನುವ ಮಟ್ಟಿಗೆ ಚಿರು ಸಿನಿಮಾಗಳು ಡಬ್ಬಿಂಗ್‌ನಲ್ಲೂ ಸದ್ದು ಮಾಡಿದವು. ಕನ್ನಡದಲ್ಲಿ ಅತ್ಯಂತ ಬ್ಯುಸಿ ಇದ್ದ ಕೆಲವೇ ನಟರಲ್ಲಿ ಚಿರು ಕೂಡ ಒಬ್ಬರು. ಹೀಗೆ ಕನ್ನಡ ಚಿತ್ರರಂಗದಲ್ಲಿ ಮಾಸ್‌ ಹೀರೋ ಆಗಿ ಬೆಳೆಯುತ್ತಿದ್ದ, ಯುವ ಸಾಮ್ರಾಟ್‌ ಎನಿಸಿಕೊಂಡಿದ್ದ ಚಿರಂಜೀವಿ ಸರ್ಜಾ 40 ವರ್ಷ ವಯಸ್ಸಿಗೂ ಮುನ್ನವೇ ನಿಧನರಾಗುವುದು ಎಂದರೆ ಯಾರೂ ನಂಬಕ್ಕೆ ಆಗುತ್ತಿಲ್ಲ.

ಇದು ನನಗೆ ಮಾತ್ರವಲ್ಲ ಯಾರಿಗೂ ನಂಬಲು ಆಗದ ಸುದ್ದಿ. ಅವರೊಂದಿಗೆ ನಟಿಸುವ ಎಲ್ಲಾ ಸಮಯದಲ್ಲೂ ಅವರಲ್ಲಿನ ಪ್ರೀತಿ ತುಂಬಿದ ವ್ಯಕ್ತಿತ್ವ ಎದ್ದು ಕಾಣುತ್ತಿತ್ತು. ತುಂಬಾ ಸಿಂಪಲ್‌ ಆಗಿ ಇರುತ್ತಿದ್ದರು. ದೊಡ್ಡ ಹಿನ್ನೆಲೆ, ಸ್ಟಾರ್‌ ನಟರಾಗಿದ್ದರೂ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಕಲೆಯ ಬಗ್ಗೆ ಅವರಿಗೆ ತುಂಬಾ ಪ್ರೀತಿ ಇತ್ತು. ಹಾಗೆಯೇ ಫಿಟ್‌ನೆಸ್‌ ಬಗ್ಗೆಯೂ ಕಾಳಜಿ ಇತ್ತು. ಇಂತಹ ವ್ಯಕ್ತಿಗೆ ಹೀಗಾಗಿದೆ ಎಂದರೆ ಸುಲಭಕ್ಕೆ ನಂಬಲು ಸಾಧ್ಯವಿಲ್ಲ. ನಮ್ಮಿಬ್ಬರ ಬತ್‌ರ್‍ಡೇ ಒಟ್ಟಿಗೆ ಬರುತ್ತಿತ್ತು. ಹೀಗಾಗಿ ಪ್ರತಿ ಬಾರಿ ಇಬ್ಬರೂ ಪರಸ್ಪರ ವಿಶ್‌ ಮಾಡಿಕೊಳ್ಳುತ್ತಿದ್ದೆವು.- ಪ್ರಣೀತಾ, ನಟಿ

‘ಛೇ... ಏನ್‌ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಕಣ್ರಿ. ಆ ವಿಧಿ ತುಂಬಾ ಕ್ರೂರಿ ಅನಿಸಿದ್ದು ಈಗ. ನಾವು ಹೋಗಬೇಕಿತ್ತು. ಅವನದು ಸಾಯೋ ವಯಸ್ಸಾ ಹೇಳಿ...’ ಹೀಗೆ ಭಾವುಕರಾಗಿ ಪ್ರಶ್ನಿಸುತ್ತಲೇ ದುಃಖಿಸಿದ್ದು ನಟ ಜಗ್ಗೇಶ್‌.