RRR ಕನ್ನಡ ವರ್ಷನ್ನಿಗೆ ಜಾಗ ಕೊಡಿ!

ಕನ್ನಡದಲ್ಲಿ ಡಬ್‌ ಆಗಿದ್ದರೂ ಮೂಲ ಭಾಷೆಯಲ್ಲೇ ತೆಲುಗಿನ ‘ಆರ್‌ಆರ್‌ಆರ್‌’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ದ್ರೋಹಿ ಚಿತ್ರವನ್ನು ಯಾರು ನೋಡಬೇಡಿ ಎನ್ನುವ ಬಹಿಷ್ಕಾರದ ಅಭಿಯಾನ ಎಂದಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಈ ಅಭಿಯಾನದ ಸಿಟ್ಟು ನೇರವಾಗಿ ಮೂಲ ಚಿತ್ರತಂಡದ ಮೇಲೆ ತೋರಿಸಲಾಗುತ್ತಿದೆ. ಆದರೆ, ವಾಸ್ತವನೇ ಬೇರೆ.

Rajamouli team request Karnataka film theathers for more screeing of RRR Kannada vcs

ಕನ್ನಡ ಡಬ್ಬಿಂಗ್‌ ಆವೃತ್ತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಕ್ಕೆ ಇಲ್ಲಿನ ಪ್ರದರ್ಶಕರಿಗೇ ಆಸಕ್ತಿ ಇಲ್ಲವಂತೆ. ಬಹುತೇಕ ಪ್ರದರ್ಶಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಚಿತ್ರವನ್ನು ಮೂಲ ಭಾಷೆಯಲ್ಲೇ ಪ್ರದರ್ಶನಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎನ್ನುವುದಕ್ಕೆ ಕೆವಿಎನ್‌ ಪ್ರೊಡಕ್ಷನ್‌ ಬಿಡುಗಡೆ ಮಾಡಿರುವ ಪತ್ರವೇ ಸಾಕ್ಷಿ.

ಪ್ರದರ್ಶಕರಲ್ಲಿ ಕೆವಿಎನ್‌ ಮನವಿ

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಭಾಷೆಯಲ್ಲಿ ‘ಆರ್‌ಆರ್‌ಆರ್‌’ ಬಿಡುಗಡೆ ಆಗುವುದಾದರೆ ಅದು ಕೆವಿಎನ್‌ ಪ್ರೊಡಕ್ಷನ್‌ ಮೂಲಕವೇ ಆಗಬೇಕಿದೆ. ಎಲ್ಲ ಭಾಷೆಯ ಬಿಡುಗಡೆ ಹಕ್ಕುಗಳನ್ನು ಕೆವಿಎನ್‌ ಪ್ರೊಡಕ್ಷನ್‌ ಖಾತೆಗೆ ಸೇರಿದೆ. ಇಲ್ಲಿನ ಪ್ರದರ್ಶಕರು ಮಾತ್ರ ಮೂಲ ಭಾಷೆಯ ಹೊರತಾಗಿ ಬೇರೆ ಭಾಷೆಗೆ ಆಸಕ್ತಿ ತೋರುತ್ತಿಲ್ಲವಂತೆ. ಈ ಕುರಿತು ಕೆವಿಎನ್‌ ಪ್ರೊಡಕ್ಷನ್‌ ಹೇಳುವುದೇನು? ‘ಎಲ್ಲರಿಗೂ ತಿಳಿದಿರುವಂತೆ ಆರ್‌ಆರ್‌ಆರ್‌ ಸಿನಿಮಾ ಮಾ.25ರಂದು ಬಿಡುಗಡೆ ಆಗುತ್ತಿದೆ. ನಮ್ಮ ಸಂಸ್ಥೆಯಿಂದ ವಿತರಣೆ ಮಾಡುತ್ತಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕನ್ನಡದಲ್ಲೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಬೇಕು ಎಂಬುದು ನಮ್ಮ ಸಂಸ್ಥೆಯ ಉದ್ದೇಶ ಕೂಡ. ಮೊದಲ ಬಾರಿಗೆ ರಾಮ್‌ಚರಣ್‌ ತೇಜ ಹಾಗೂ ಜ್ಯೂಎನ್‌ಟಿಆರ್‌ ಅವರು ತಮ್ಮ ಪಾತ್ರಗಳಿಗೆ ತಾವೇ ಕನ್ನಡದಲ್ಲಿ ಡಬ್‌ ಮಾಡಿದ್ದಾರೆ. ಹೀಗಾಗಿ ಕನ್ನಡಿಗರು ತಮ್ಮ ಭಾಷೆಯಲ್ಲೇ ‘ಆರ್‌ಆರ್‌ಆರ್‌’ ಚಿತ್ರವನ್ನು ನೋಡಲಿ ಎನ್ನುವ ಉದ್ದೇಶ ನಮಗೂ ಇದೆ. ಆದರೆ, ಕನ್ನಡ ಆವೃತ್ತಿಯನ್ನು ಪ್ರದರ್ಶಿಸಲು ಪ್ರದರ್ಶಕರು ಹಿಂದೇಟು ಹಾಕುತ್ತಿದ್ದಾರೆ. ಕನ್ನಡದಲ್ಲೇ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಮಾತುಕತೆ ಪ್ರದರ್ಶಕರ ಜತೆ ನಡೆಯುತ್ತಿದೆ. ಆದಷ್ಟುಬೇಗ ಅವರ ಮನವೊಲಿಸಿ ಕನ್ನಡದಲ್ಲಿ ಎಷ್ಟುಸ್ಕ್ರೀನ್‌ಗಳಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ಬರಲಿದೆ ಎನ್ನುವ ಮಾಹಿತಿಯನ್ನು ಸದ್ಯದಲ್ಲೇ ಹೇಳುತ್ತೇವೆ’ ಎನ್ನುತ್ತಿದೆ ಕೆವಿಎನ್‌ ಪ್ರೊಡಕ್ಷನ್‌.

ಪ್ರದರ್ಶಕರ ವಾದ ಏನು?

ಡಬ್ಬಿಂಗ್‌ ಚಿತ್ರಗಳನ್ನು ನೋಡಲು ನಮ್ಮ ರಾಜ್ಯದಲ್ಲಿ ಯಾರೂ ಬರುತ್ತಿಲ್ಲ. ಈಗಾಗಲೇ ತಮಿಳಿನ ಅಜಿತ್‌, ವಿಜಯ್‌, ಹಿಂದಿಯ ಸಲ್ಮಾನ್‌ ಖಾನ್‌, ತೆಲುಗಿನ ಪ್ರಭಾಸ್‌ ಚಿತ್ರಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡಿ ಕೈ ಸುಟ್ಟುಕೊಂಡಿದ್ದೇವೆ. ಪರಭಾಷೆಯ ಚಿತ್ರಗಳನ್ನು ನಮ್ಮದೇ ಭಾಷೆಗೆ ತರಬೇಕು ಎನ್ನುವ ವಾದ ಸರಿ. ಆದರೆ, ಹಾಗೆ ವಾದ ಮಾಡುವವರು ಡಬ್ಬಿಂಗ್‌ ಆವೃತ್ತಿಯನ್ನು ನೋಡುತ್ತಿಲ್ಲ. ಮೂಲ ಭಾಷೆಯಲ್ಲೇ ನೋಡುತ್ತಿದ್ದಾರೆ. ಪರಭಾಷೆಯಿಂದ ಡಬ್‌ ಆದ ಚಿತ್ರಗಳ ಪ್ರದರ್ಶನದಿಂದ ಚಿತ್ರಮಂದಿರಗಳ ಬಾಡಿಗೆ ಕೂಡ ಬರುತ್ತಿಲ್ಲ ಎಂಬುದು ಪ್ರದರ್ಶಕರ ವಾದ.

ಇತ್ತೀಚಿಗಷ್ಟೆ ವಾರಾಣಸಿಯಲ್ಲಿ ಕಾಣಿಸಿಕೊಂಡ ಸಿನಿಮಾತಂಡದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟರಾದ ರಾಮ್ ಚರಣ್(Ram Charan), ಜೂ ಎನ್ ಟಿ ಆರ್(Jr NTR) ಮತ್ತು ರಾಜಮೌಳಿ ವಾರಾಣಸಿಯಲ್ಲಿ ಗಂಗಾ ಆರತಿ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡ ಸಿನಿಮಾತಂಡದ ಫೋಟೋಗಳು ಮೆಚ್ಚುಗೆ ಗಳಿಸಿದೆ. ಜೊತೆಗೆ ವ್ಯಾಪಕ ಪ್ರಚಾರ ನಡೆಸುತ್ತಿರುವ ಕಾರಣ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

ಸಿನಿಮಾತಂಡ ಕೋಟಿ ಕೋಟಿ ಸುರಿದು ಪ್ರಚಾರ ಮಾಡುತ್ತಿರುವುದು ನೆಟ್ಟಿಗರಿಂದ ಟ್ರೋಲ್ ಗೆ ಗುರಿಯಾಗಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಕಡಿಮೆ ಪ್ರಚಾರದ ಹೊರತಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ ಎಂದು ಹೇಳುತ್ತಿದ್ದಾರೆ. ಚಿತ್ರದ ಕಥೆ ಮತ್ತು ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯಿಂದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಸೂಪರ್ ಹಿಟ್ ಆಗಿದೆ. ಸಿನಿಮಾ ಚೆನ್ನಾಗಿದ್ರೆ ಪ್ರಚಾರದ ಅವಶ್ಯಕತೆ ಇರಲ್ಲ ಎಂದು ಹೇಳುತ್ತಿದ್ದಾರೆ.

Latest Videos
Follow Us:
Download App:
  • android
  • ios