ಡಾರ್ಲಿಂಗ್ ಕೃಷ್ಣ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್‌ ಕಾಂಬಿನೇಷನ್‌ನಲ್ಲಿ ಇತ್ತೀಚಿಗೆ ಅನೌನ್ಸ್ ಆದ ಸಿನಿಮಾ 'ಲವ್ ಮಿ ಆರ್ ಹೇಟ್ ಮಿ'. ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಿತ್ರ ಮತ್ತು ಚಿತ್ರ ತಂಡದ ಬಗ್ಗೆ ಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಎರಡೇ ದಿನಗಳಲ್ಲಿ ಶೀರ್ಷಿಕೆ ವಿವಾದಕ್ಕೆ ಗುರಿಯಾಗಿದೆ.

ಡಾರ್ಲಿಂಗ್ ಕೃಷ್ಣಗೆ 'ಲವ್‌ ಮಿ ಆರ್ ಹೇಟ್ ಮಿ' ಎಂದೇಳಿದ ಡಿಂಪಲ್ ಕ್ವೀನ್ ರಚಿತಾ ರಾಮ್!

ದೀಪಕ್ ಗಂಗಾಧರ್ ನಿರ್ದೇಶನದ ಈ ಚಿತ್ರದ ಹೆಸರು ಎರಡು ದಿನಗಳ ಹಿಂದೆಯಷ್ಟೇ ಘೋಷಣೆ ಆಗಿತ್ತು. 'ಸೈಕೋ' ಚಿತ್ರದ ನಿರ್ದೇಶಕ ವಿ.ದೇವದತ್ತ ಈ ಶೀರ್ಷಿಕೆ ತಮ್ಮದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ ದೇವದತ್ತ, ‘ಶ್ರೀ ವೆಂಕಟೇಶ್ವರ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ಬಿ ಕೆ ರವಿಕಿರಣ್ ನಿರ್ಮಾಣದಲ್ಲಿ ನಾನು ‘ಲವ್ ಮಿ ಆರ್ ಹೇಟ್ ಮಿ’ ಚಿತ್ರ ನಿರ್ದೇಶಿಸುತ್ತಿದ್ದೇನೆ. ಕೇವಲ ಟೈಟಲ್ ನೋಂದಣಿ ಆಗಿದ್ದರೆ ಈ ಶೀರ್ಷಿಕೆಯನ್ನು ಅವರಿಗೇ ಬಿಟ್ಟು ಕೊಡುತ್ತಿದ್ದೆ. ಆದರೆ ಅದೇ ಹೆಸರಿನಲ್ಲಿ ಪ್ರೊಮೋ ಹಾಗೂ ಫಸ್ಟ್ ಲುಕ್ ಶೂಟ್ ಆಗಿದೆ. ಹೀಗಾಗಿ ಟೈಟಲ್‌ ಅನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಇದನ್ನು ನಿರ್ದೇಶಕ ದೀಪಕ್ ಗಂಗಾಧರ್ ಅವರಿಗೂ ಹೇಳಿದ್ದೇನೆ,’ ಎಂದಿದ್ದಾರೆ.

ಈ ವಿಚಾರದ ಬಗ್ಗೆ ನಿರ್ದೇಶಕ ದೀಪಕ್ ಯಾವುದೇ ಪತ್ರಿಕ್ರಿಯೆ ನೀಡಿಲ್ಲ. ಆದರೆ ರಚಿತಾ ರಾಮ್ ಚಿತ್ರಕ್ಕೆ ವಿವಾದ ಅಂಟಿಕೊಳ್ಳುವುದು ಇದೇನೂ ಹೊಸತೇನಲ್ಲ. ಈ ಹಿಂದಿನ ಚಿತ್ರ ಶಾಂತಿ ನಿವಾಸಕ್ಕೂ ಇಂಥದ್ದೇ ಕಳಂಕ ತಟ್ಟಿದ್ದು, ನಂತರ ಚಿತ್ರದ ಶಿರ್ಷಿಕೆಯನ್ನು ಬದಲಾಯಿಸಲಾಗಿತ್ತು.ಆದರೆ, ಈ ಚಿತ್ರದಿಂದ ನಂತರ ರಚಿತಾ ಹೊರ ಬಂದಿದ್ದು, ಶಾನ್ವಿ ಶ್ರೀವಾತ್ಸವ್ ನಟಿಯಾಗಿ ಸೇರಿಕೊಂಡರು. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ರಚ್ಚು ಕೈಯಲ್ಲಿ ಈಗ ಸುಮಾರು 8-10 ಸಿನಿಮಾಗಳಿವೆ. ಡಾರ್ಲಿಂಗ್ ಕೃಷ್ಣ ಬಳಿ 3-4 ಸಿನಿಮಾಗಳಿವೆ. ಲಾಕ್‌ಡೌನ್‌ ಸಮಯದಲ್ಲಿ ರಚಿತಾ ರಾಮ್ ಎಲ್ಲಿಯೂ ಕಾಣಿಸಿಕೊಳ್ಳದಿರುವುದು, ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾ ಹೊಸ ಹೊಸ ಶೈಲಿಯ ಅಡುಗೆಗಳನ್ನು ಕಲಿಯುತ್ತಾರೆ. ಇನ್ನು ಕೃಷ್ಣ ಮತ್ತು ಮಿಲನಾ ಮುದ್ದು ನಾಯಿ ಮರಿ ಜೊತೆ ಸಮಯ ಕಳೆಯುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಣಬಹುದು.