‘ಅಬ್ಬಾ ನಮ್‌ ಹೀರೋ ಸಿನಿಮಾ ಇನ್ನೇನು ಬಂತು’ ಎಂದುಕೊಳ್ಳುವಷ್ಟರಲ್ಲಿ ಆ ದಿನಾಂಕ ಮುಂದಕ್ಕೆ ಹೋಗಿರುತ್ತದೆ. ‘ಪೊಗರು’ ಹಾಗೂ ‘ರಾಬರ್ಟ್‌’ ಚಿತ್ರಗಳ ನಂತರ ಈಗ ಇದೇ ರೀತಿ ಬಿಡುಗಡೆಯ ದಿನಾಂಕ ಘೋಷಿಸಿರುವುದು ಪುನೀತ್‌ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಸಿನಿಮಾ. ಹೌದು ಅಪ್ಪು ಚಿತ್ರ ಜ.22ರಂದು ತೆರೆಗೆ ಬರುತ್ತದೆ ಎನ್ನುವ ಸುದ್ದಿ ಇದೆ. ಬಿಡುಗಡೆಯ ದಿನಾಂಕ ಹೊರ ಬರುತ್ತಿರುವಂತೆಯೇ ಪವರ್‌ಸ್ಟಾರ್‌ ಅಭಿಮಾನಿಗಳಲ್ಲಿ ಕ್ರೇಜ್‌ ಹೆಚ್ಚಾಗಿದೆ. ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಿಗೆ ಬರುತ್ತಿರುವುದು ವಿಶೇಷ.

ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ರೀಲೀಸ್‌ ವಾರ್ತೆಗಳ ಬಗ್ಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಹೇಳುವುದೇ ಬೇರೆ. ‘ಸದ್ಯಕ್ಕೆ ನಾವು ಅಂದುಕೊಂಡಿರುವುದು ಜ.22ರಂದು ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು. ಈ ದಿನಾಂಕದ ಹೊತ್ತಿಗೆ ಚಿತ್ರಕ್ಕೆ ತೆಲುಗಿನಲ್ಲಿ ಡಬ್ಬಿಂಗ್‌ ಕೆಲಸಗಳು ಮುಗಿಯಬೇಕು, ಜತೆಗೆ ಕನ್ನಡದಲ್ಲಿ ಸಣ್ಣ ಪುಟ್ಟತಾಂತ್ರಿಕ ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಜ.22ರ ಒಳಗೆ ಮುಗಿಸಬೇಕಿದೆ. ಅಷ್ಟುಹೊತ್ತಿಗೆ ಥಿಯೇಟರ್‌ಗಳಲ್ಲಿ ಶೇ.50 ಭಾಗ ಮಾತ್ರ ಸೀಟು ಭರ್ತಿಗೆ ಇರುವ ಅವಕಾಶ ಬದಲಾಗಬೇಕು. ಶೇ.100 ಭಾಗ ಅಥವಾ ಶೇ.75 ಭಾಗ ಸೀಟು ಭರ್ತಿಗೆ ಅನುಮತಿ ಸಿಗಬೇಕು. ಈ ಎಲ್ಲವೂ ಜನವರಿ ತಿಂಗಳ ಹೊತ್ತಿಗೆ ಆದರೆ ಖಂಡಿತ ನಾವು ಜ.22ರಂದೇ ಯುವರತ್ನ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಒಂದು ವೇಳೆ ಅದೇ ದಿನ ಕನ್ನಡದ ಬೇರೆ ಯಾವುದಾದರೂ ಸಿನಿಮಾ ಬರಲು ರೆಡಿ ಇದ್ದರೆ ಅವರ ಜತೆ ಮಾತುಕತೆ ಮಾಡಿಕೊಂಡು ಯಾರಿಗೂ ಯಾರೂ ಸ್ಪರ್ಧಿಯಾಗದಂತೆ ಚಿತ್ರಮಂದಿರಕ್ಕೆ ಬರುತ್ತೇವೆ’ ಎನ್ನುತ್ತಾರೆ ಸಂತೋಷ್‌ ಆನಂದ್‌ರಾಮ್‌.

ಸೈಲೆಂಟ್ ಆಗಿಯೇ ಸುದ್ದಿ ಮಾಡಿದ ಪುನೀತ್ ರಾಜ್‌ಕುಮಾರ್ 'ಯುವರತ್ನ' ಸಾಂಗ್! 

ಹಾಗಾದರೆ ನಿರ್ದೇಶಕರು ಅಂದುಕೊಂಡಂತೆ ಕೋವಿಡ್‌-19 ಮಾರ್ಗ ಸೂಚಿಗಳಲ್ಲಿ ಬದಲಾವಣೆ ಆಗುತ್ತದೆಯೇ ಎಂಬುದನ್ನು ನೋಡಬೇಕಿದೆ. ಒಂದು ವೇಳೆ ಶೇ.50ರಷ್ಟುಮಾತ್ರ ಸೀಟು ಭರ್ತಿ ನಿಯಮ ಜಾರಿ ಇದ್ದರೆ ‘ಯುವರತ್ನ’ ಜ.22ಕ್ಕೆ ಪ್ರೇಕ್ಷಕರ ಮುಂದೆ ಬರುವುದು ಅನುಮಾನ. ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಯೇಷಾ ನಾಯಕಿಯಾಗಿ ನಟಿಸುತ್ತಿದ್ದಾರೆ.