ಇತ್ತೀಚೆಗೆ ಪುನೀತ್‌ ರಾಜ್‌ಕುಮಾರ್‌ ಆಡಿಯೋ ಬಿಡುಗಡೆ ಮಾಡಿದರು. ‘ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಜನ ಬಂದಿರುವುದು ನೋಡಿದರೆ ಖುಷಿ ಆಗುತ್ತದೆ. ಇದೇ ರೀತಿ ಚಿತ್ರಮಂದಿರಗಳಿಗೂ ಜನ ಬಂದು ಸಿನಿಮಾ ನೋಡುವಂತಾಗಲಿ. ನಿಧಾನಕ್ಕೆ ಚಿತ್ರರಂಗದ ಚಟುವಟಿಕೆಗಳು ಸದ್ದು ಮಾಡುತ್ತಿವೆ. ಕೋವಿಡ್‌-19 ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಜನ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿ ಸಿನಿಮಾ ನೋಡುವಂತಾಗಲಿ’ ಎಂದು ಪುನೀತ್‌ ಹಾರೈಸಿದರು.

'ಡಿಯರ್ ಸತ್ಯ' ಚಿತ್ರದ ನಟಿ ಅರ್ಚನಾ ಕೊಟ್ಟಿಗೆ ಜೊತೆ ಮಾತುಕತೆ! 

ಶಿವ ಗಣೇಶನ್‌ ನಿರ್ದೇಶನದ ಸಿನಿಮಾವಿದು. ಗಣೇಶ್‌ ಪಾಪಣ್ಣ, ರಾಕ್‌ಲೈನ್‌ ವೆಂಕಟೇಶ್‌ ಪುತ್ರ ಯತೀಶ್‌ ವೆಂಕಟೇಶ್‌, ಶ್ರೀನಿವಾಸ್‌ ಹಾಗೂ ಅಜಯ್‌ ರಾವ್‌ ಚಿತ್ರ ನಿರ್ಮಿಸಿದ್ದಾರೆ. ಆಡಿಯೋ ಬಿಡುಗಡೆಗೆ ವಿಜಯ… ರಾಘವೇಂದ್ರ ಕೂಡ ಅತಿಥಿಗಳಾಗಿ ಆಗಮಿಸಿದ್ದರು. ‘ಹಲಸೂರಿನ ಚಿತ್ರಮಂದಿರದಲ್ಲಿ ‘ಓಂ’ ಚಿತ್ರವನ್ನು ಬ್ಲಾಕ್‌ನಲ್ಲಿ ಟಿಕೆಟ್‌ ಕೊಂಡು ನೋಡಿದ್ದೆ. ಆ ಚಿತ್ರದ ನಾಯಕ ಶಿವರಾಜ್‌ಕುಮಾರ್‌ ಅವರಿಂದಲೇ ನನ್ನ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆ ಆಗಿದೆ. ತುಂಬಾ ಹಿಂದೆ ‘ನೂರು ಜನ್ಮಕು’ ಚಿತ್ರದಲ್ಲಿ ನಟಿಸಿದ್ದಾಗ ಪುನೀತ್‌ ಅವರೇ ಆಗಮಿಸಿ ಶುಭ ಕೋರಿದ್ದರು. ಆ ಸಿನಿಮಾ ಹಿಟ್‌ ಆಯಿತು. ಈಗ ಮತ್ತೆ ಅಪ್ಪು ಅವರು ಬಂದಿದ್ದಾರೆ. ‘ಡಿಯರ್‌ ಸತ್ಯ’ ಚಿತ್ರ ಕೂಡ ಯಶಸ್ಸು ಆಗುತ್ತದೆಂಬ ನಂಬಿಕೆ ಇದೆ’ ಎಂದರು ನಟ ಸಂತೋಷ್‌ ಆರ್ಯನ್‌.

ಈ ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ. ಇದು ಅವರ ಮೊದಲ ನಟನೆಯ ಸಿನಿಮಾ. ಚಿತ್ರಕ್ಕೆ ಸಂಗೀತ ನೀಡಿರುವುದು ಶ್ರೀಧರ್‌ ವಿ ಸಂಭ್ರಮ್‌. ಮನಸ್ಸಿಗೆ ಒಪ್ಪುವಂತಹ ಹಾಡುಗಳನ್ನು ನೀಡಿದ್ದಾರೆ ಎಂಬುದು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕೇಳಿ ಬಂದ ಮಾತುಗಳು. ‘ಚಿತ್ರದಲ್ಲಿ 5 ಹಾಡುಗಳಿವೆ. ‘ಮುಂದಿನ ನಿಲ್ದಾಣ’ ಚಿತ್ರದ ‘ಇನ್ನೂನು ಬೇಕಾಗಿದೆ’ ಹಾಡಿಗೆ ಸಾಹಿತ್ಯ ಬರೆದಿದ್ದ ಪ್ರಮೋದ್‌ ಮರವಂತೆ ಈ ಚಿತ್ರದಲ್ಲಿನ ಹಾಡಿಗೂ ಸಾಹಿತ್ಯ ಬರೆದಿದ್ದಾರೆ. ಶ್ವೇತಾ, ಅನುರಾಧಾ ಭಟ್‌, ಅನಿರುದ್ಧ ಶಾಸ್ತ್ರಿ, ಹೇಮಂತ್‌, ವಿಹಾನ್‌ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಎಲ್ಲ ಹಾಡುಗಳು ಚೆನ್ನಾಗಿವೆ’ ಎಂದು ಹೇಳಿಕೊಂಡರು ಶ್ರೀಧರ್‌ ವಿ ಸಂಭ್ರಮ್‌. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕರು ಭರವಸೆ ನೀಡಿದರು.