ಕಲಾವಿದ ಸಿನಿಮಾದ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಪ್ರದೀಪ್‌ ಕುಮಾರ್‌. ವೃತ್ತಿಯಲ್ಲಿ ಇಂಜಿನಿಯರ್‌. ಸಿನಿಮಾ, ಬ್ಯುಸಿನೆಸ್‌ ಮೇಲೆ ಆಸಕ್ತಿ. ‘ಸಿನಿಮಾ ಮಾಡಬೇಕು ಅಂತ ಬಹಳ ತುಡಿತ ಇತ್ತು. ಆದರೆ ಕಿಸೆಯಲ್ಲಿ ಕಾಸಿರಲಿಲ್ಲ. ಆಗ ರಂಗ್‌ ದೆ ಬಸಂತಿ ಎಂಬ ಹೊಟೇಲ್‌ ಮಾಡಿದೆ. ಅದರಿಂದ ಬಂದ ಹಣದಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿ ನಾನು ಕಾರ್ಟೂನಿಸ್ಟ್‌ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ 13 ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಪ್ರೀತಿ, ಸರಗಳ್ಳತನ, ಕಾರ್ಟೂನಿಸ್ಟ್‌ ಲೈಫ್‌ನ ಸುತ್ತ ಕತೆ ಸಾಗುತ್ತದೆ’ ಎಂದರು.

ನಿರ್ದೇಶಕ ಶಿವಾನಂದ ಹೆಚ್‌ ಡಿ ಮಾತನಾಡಿ, ‘ಹೆಲ್ದೀ ಟೀಸಿಂಗ್‌ ಅನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಸಿನಿಮಾವಿದು. ನಿರ್ದೇಶಕನಾಗಿ ಮೈಕ್‌ ಹಿಡೀಬೇಕು ಅನ್ನೋದು ನನ್ನ ಹಲವು ವರ್ಷಗಳ ಕನಸು. ಅದೀಗ ಸಾಕಾರಗೊಳ್ಳುತ್ತಿದೆ. ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ’ ಎಂದರು.

ಹೋಟೆಲ್‌ನಲ್ಲಿ ಸಂಪಾದಿಸಿದ ಹಣದಿಂದ ಚಿತ್ರ ಮಾಡಿದೆ: ಪ್ರದೀಪ್‌ ಕುಮಾರ್‌ 

‘ರಣಕಣಕ’ ಚಿತ್ರದಲ್ಲಿ ನಟಿಸಿರುವ ಸಂಭ್ರಮ ಈ ಚಿತ್ರದ ನಾಯಕಿ. ‘ಸಿನಿಮಾ ಮಾಡಿ 3 ವರ್ಷಗಳಾದ ಕಾರಣ ಕತೆಯೇ ಮರೆತುಹೋಗಿದೆ’ ಅಂದರು ಸಂಭ್ರಮ.

ಮಂಜುನಾಥ್‌ ಹೆಗಡೆ, ಅರುಣಾ ಬಾಲರಾಜ್‌, ಮೂಗು ಸುರೇಶ್‌ ಮತ್ತಿತರರು ಚಿತ್ರದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ವಿವೇಕ್‌ ಚಕ್ರವರ್ತಿ ಸಂಗೀತವಿದೆ. ಛಾಯಾಗ್ರಹಣ ಚಿದಾನಂದ್‌ ಅವರದು.