‘ಪೊಗರು’ ಚಿತ್ರದ ಆ್ಯಕ್ಷನ್‌ ಇಮೇಜ್‌ಗೆ ಫಿದಾ ಆಗಿರುವ ನಿಖಿಲ್‌ ಕುಮಾರ್‌ ಅವರು ನಂದಕಿಶೋರ್‌ ಜತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ‘ದುಬಾರಿ’ ಚಿತ್ರದ ನಂತರ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ. ಅತ್ತ ನಿಖಿಲ್‌ ಕೂಡ ‘ರೈಡರ್‌’ ಮುಗಿಸಿಕೊಂಡು ಬರಲಿದ್ದಾರೆ.

ಈ ನಡುವೆ ನಂದಕಿಶೋರ್‌ ಅವರು ಶಿವರಾಜ್‌ಕುಮಾರ್‌ ಅವರಿಗೂ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ಮೂಡಿ ಬರಲಿದೆ. ಕತೆ ಓಕೆ ಆಗಿದೆ. ತೆಲುಗಿನ ಗೌತಮ್‌ ರೆಡ್ಡಿ ಹಾಗೂ ಕಾರ್ತಿ ಚಿಲಕುರಿ ಹಾಗೂ ವಿವೇಕ್‌ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಿಯದರ್ಶಿನಿ ರಾಮ್‌ ಈ ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ. ಈಗಾಗಲೇ ಶಿವಣ್ಣ ಕತೆ ಒಪ್ಪಿಕೊಂಡಿದ್ದಾರೆ.

ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು! 

ಪಕ್ಕಾ ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಸಿನಿಮಾ ಇದಾಗಿದೆ. ‘ಶಿವಣ್ಣ ಅವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಕತೆ ಕೇಳಿದ್ದಾರೆ. ಯಾವ ನಂಬರ್‌ ಸಿನಿಮಾ, ಯಾವಾಗ ಶೂಟಿಂಗ್‌ ಎಂಬಿತ್ಯಾದಿ ವಿಚಾರಗಳು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾಕೆಂದರೆ ನಾನು ಶಿವಣ್ಣ ಚಿತ್ರಕ್ಕೆ ಹೋಗುವ ಮುನ್ನ ಧ್ರುವ ಸರ್ಜಾ ನಟನೆಯ ‘ದುಬಾರಿ’ ಹಾಗೂ ನಿಖಿಲ್‌ ಕುಮಾರ್‌ ಅವರ ನಟನೆಯ ಚಿತ್ರವನ್ನು ಮುಗಿಸಬೇಕಿದೆ. ಹೀಗಾಗಿ ಯಾವುದು, ಯಾವಾಗ ಸೆಟ್ಟೇರುತ್ತದೆ ಎಂಬುದು ಶೀಘ್ರದಲ್ಲಿ ಗೊತ್ತಾಗಲಿದೆ. ಎರಡು ಸಿನಿಮಾ ಕನ್ನಡದ ಜತೆಗೆ ಬೇರೆ ಭಾಷೆಗಳಲ್ಲೂ ಬರಲಿದೆ’ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್‌.

ನಂದಕಿಶೋರ್‌ ನಿರ್ದೇಶನದ ಶಿವಣ್ಣ ನಟನೆಯ ಚಿತ್ರಕ್ಕೆ ದೊಡ್ಡ ಬಜೆಟ್‌ ಹಾಗೂ ದೊಡ್ಡ ತಾರಾಗಣ ಇರಲಿದೆಯಂತೆ. ‘ವೇದ’ ಹಾಗೂ ತೆಲುಗು ನಿರ್ದೇಶಕ ರಾಮ್‌ ಧುಲಿಪುಡಿ ನಿರ್ದೇಶನದ ಚಿತ್ರವನ್ನು ಮುಗಿಸಿ ನಂದಕಿಶೋರ್‌ ಚಿತ್ರಕ್ಕೆ ಜತೆಯಾಗಲಿದ್ದಾರೆ.