ಫ್ಯಾಂಟಮ್‌ ಅಲ್ಲ ವಿಕ್ರಾಂತ್‌ ರೋಣ | ಜ.21ರಂದು ಸುದೀಪ್‌ ಚಿತ್ರದ ಅಧಿಕೃತ ಹೆಸರು ಘೋಷಣೆ

‘ಜನವರಿ 21 ಸಂಜೆ 4 ಗಂಟೆಗೆ ನಿಮಗೊಂದು ಮಹತ್ವದ ಅಪ್‌ಡೇಟ್‌ ಹೇಳ್ತೀವಿ’ ಅಂತ ಫ್ಯಾಂಟಮ್‌ ಟೀಮ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದೆ. ಸುದೀಪ್‌ ಅಭಿಮಾನಿಗಳು ಈ ಅಪ್‌ಡೇಟ್‌ ಏನಿರಬಹುದು ಎಂದು ಯೋಚಿಸುತ್ತಿದ್ದಾರೆ.

ಆ ಅಪ್‌ಡೇಟ್‌ ನಿಜಕ್ಕೂ ಮಹತ್ವದ್ದೇ. ಯಾಕೆಂದರೆ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾದ ಹೆಸರು ಬದಲಾಗಲಿದೆ. ಹೊಸ ಹೆಸರಿನ ಅಧಿಕೃತ ಘೋಷಣೆ ಜ.21ರಂದು ನಡೆಯಲಿದೆ.

ಆ ದಿನದಂದು ಫ್ಯಾಂಟಮ್‌ ಅಡ್ಡದಿಂದ ಬರುತ್ತಿದೆ ಬಿಗ್ ಅನೌನ್ಸ್‌ಮೆಂಟ್!

ಫ್ಯಾಂಟಮ್‌ ಹೆಸರು ಬಳಸದಂತೆ ಸಂಸ್ಥೆಯೊಂದು ಅಡ್ಡಿ ಮಾಡಿದ್ದರಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸುದೀಪ್‌ ಪಾತ್ರದ ಹೆಸರು ವಿಕ್ರಾಂತ್‌ ರೋಣ. ಆ ಹೆಸರನ್ನೇ ಚಿತ್ರದ ಟೈಟಲ್‌ ಆಗಿ ಇಡುವ ಸಾಧ್ಯತೆ ಹೆಚ್ಚಿದೆ. ಅದಕ್ಕೆ ವಲ್‌ರ್‍್ಡ ಆಫ್‌ ಫ್ಯಾಂಟಮ್‌ ಎಂಬ ಟ್ಯಾಗ್‌ಲೈನ್‌ ನೀಡಿದರೂ ನೀಡಬಹುದು.

ಸಿನಿಮಾ ಶುರುವಾಗಿ ಚಿತ್ರೀಕರಣ ಮುಗಿಸಿ ಇನ್ನೇನು ತೆರೆಗೆ ಬರಲಿದೆ ಅನ್ನುವಾಗ ಟೈಟಲ್‌ ಬದಲಿಸುವುದು ಸುಲಭದ ಕೆಲಸವಲ್ಲ. ಆದರೆ ಅಂಥದ್ದೊಂದು ಕಠಿಣ ಕೆಲಸಕ್ಕೆ ಫ್ಯಾಂಟಮ್‌ ಚಿತ್ರತಂಡ ಮುಂದಾಗಿದೆ. ತಂಡದ ಧೈರ್ಯಕ್ಕೆ ನಿಮ್ಮ ಮೆಚ್ಚುಗೆ ಇರಲಿ. ಹೊಸ ಹೆಸರು ತಿಳಿದುಕೊಳ್ಳುವ ಕುತೂಹಲವೂ ಇರಲಿ.