ಸ್ಯಾಂಡಲ್‌ವುಡ್‌ ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಗ್ಗೆ ಖಾಸಗಿ ಸಂದರ್ಶನದಲ್ಲಿ ತೆಲುಗು ನಟ ವಿಜಯ ರಂಗರಾಜು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ವಿಷ್ಣು ದಾದಾ ಅಭಿಮಾನಿ ಸಂಘಗಳು ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟ, ನಟಿಯರು ಧ್ವನಿ ಎತ್ತಿದ್ದಾರೆ.  ವಿಷ್ಣು ಕುಟುಂಬದ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಅಂಬರೀಶ್ ಪತ್ನಿ ಸುಮಲತಾ ಸಹ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಸುಮಲತಾ ಪೋಸ್ಟ್‌: 
'ಇತ್ತೀಚಿಗೆ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ, ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು' ಎಂದು ಹೇಳುತ್ತಾ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ಆರಂಭಿಸಿದ್ದಾರೆ.

ವಿಷ್ಣುವರ್ಧನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತೆಲಗು ನಟ 

'ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ, ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು! ಅದು ಕೇವಲ ಅಂತಹ ಬಾಯಿ ಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ' ಎಂದು ಹೇಳಿದ್ದಾರೆ.

ವಿಷ್ಣುವರ್ಧನ್ ಬಗ್ಗೆ ಅವಹೇಳನ ಮಾತು: ತೆಲುಗು ನಟನಿಗೆ ಪವರ್ ಸ್ಟಾರ್ ಖಡಕ್ ಎಚ್ಚರಿಕೆ! 

'ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯ ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿಯಲ್ಲದೇ ಮತ್ತೇನೂ ಅಲ್ಲ' ಎಂದಿದ್ದಾರೆ.

ವಿಷ್ಣು ಬಗ್ಗೆ ಕೆಟ್ಟ ಮಾತಾಡಿದ ನಟನಿಗೆ ಸುದೀಪ್ ವಾರ್ನಿಂಗ್..! 

'ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ 'ಚೀಪ್ ಪಬ್ಲಿಸಿಟಿ' ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು' ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸ್ಯಾಂಡಲ್‌ವುಡ್ ನಟ, ನಟಿಯರು ರಂಗರಾಜು ಹೇಳಿಕೆಗೆ ತೀವ್ರ ವಿರೋಧ ವ್ಯಕಪಡಿಸಿದ ಬೆನ್ನಲ್ಲೇ ನಟ ಕೈ ಮುಗಿದು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಮಾಡಿದ್ದು ತಪ್ಪಾಯ್ತು ಎಂದು ಹೇಳಿದ್ದಾರೆ. ಕ್ಷಮಿಸುವ ದೊಡ್ಡ ಗುಣ ಕನ್ನಡಿಗರಿಗೆ ರಕ್ತದಲ್ಲಿಯೇ ಬಂದಿದ್ದು. ಆದರೂ, ಕನ್ನಡದ ಈ ವಿಷಯದಲ್ಲಿ ಕನ್ನಾಡಿಭಿಮಾನಿಗಳು ಹೇಗೆ ಸ್ಪಂದಿಸುತ್ತಾರೋ ನೋಡಬೇಕು.