ಮಾಳವಿಕಾ ಮತ್ತು ಅವಿನಾಶ್ 15 ವರ್ಷಗಳ ಹಿಂದೆ ತಮ್ಮ ಮನೆಗೆ ಅಡಿಗಲ್ಲು ಹಾಕಿದಾಗ ವಿಷ್ಣುವರ್ಧನ್ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ಮನೆ, ಮನದಲ್ಲಿ ಸಾಹಸಸಿಂಹಗೆ ನೀಡಿದ ಸ್ಥಾನದ ಬಗ್ಗೆ ಜಗಜ್ಜಾಹೀರುಗೊಳಿಸಿದ್ದಾರೆ.
ಮಾಳವಿಕಾ ಅವಿನಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ನೆನೆಸಿಕೊಂಡಿದ್ದಾರೆ. ಅದರೆ ಜೊತೆಗೆ 15 ವರ್ಷಗಳ ಹಿಂದಿನ ಫೋಟೋ ಹಂಚಿಕೊಂಡಿದ್ದು, ಫೋಟೋ ಹಿಂದಿರುವ ಚೆಂದದ್ದೊಂದು ಕಥೆಯನ್ನೂ ಹೇಳಿ ಕೊಂಡಿದ್ದಾರೆ.
ಫೋಟೋ ಹಂಚಿಕೊಳ್ಳುವುದರೊಂದಿಗೆ ಮಾಳವಿಕಾ ಸಣ್ಣದೊಂದು ನೋಟ್ ಬರೆದುಕೊಂಡಿದ್ದು, 'ನಾವು ಏನನ್ನೋ ಹುಡುಕುವಾಗ ಮತ್ತಿನ್ನೇನೋ ಸಿಕ್ಕಿ ಅದ್ಭುತವಾದ ನೆನಪುಗಳೆಲ್ಲಾ ಮತ್ತೆ ಎದುರಾಗುತ್ತವೆ. ತಮ್ಮ ಸಿನಿಮಾಗಳ ಮೂಲಕ ಲಕ್ಷಗಟ್ಟಲೆ ಕನ್ನಡಿಗರ ಮನಸ್ಸಲ್ಲಿ ಚಿರಂತನವಾಗಿ ಉಳಿದಿರುವ ವಿಷ್ಣುವರ್ಧನ್ ಎಂಬ ಲೆಜೆಂಡ್ ನಮ್ಮ ಮನೆಗೆ ಗುದ್ದಲಿ ಪೂಜೆ ಮಾಡಿದ್ದರು. ಅದೇ ಮನೆಯಲ್ಲಿ ನಾವು 15 ವರ್ಷಗಳಿಂದ ವಾಸಿಸುತ್ತಿದ್ದೇವೆ,' ಎಂದು ಬರೆದುಕೊಂಡಿದ್ದಾರೆ.
ಈ ಫೋಟೋದಲ್ಲಿ ವಿಷ್ಣುವರ್ಧನ್ ಮತ್ತು ಅವಿನಾಶ್-ಮಾಳವಿಕಾ ದಂಪತಿಯ ಕುಟುಂಬಸ್ಥರು ಇದ್ದಾರೆ. ಮಾಳವಿಕಾ ಈ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಮತ್ತು ವಿಷ್ಣುವರ್ಧನ್ ಮಧ್ಯೆ ಇದ್ದ ಬಾಂಧವ್ಯವನ್ನೂ ಮತ್ತೆ ನೆನೆಸಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರಿಗೆ ಈ ದಂಪತಿ ಮೇಲೆ ವಿಪರೀತ ಅಕ್ಕರೆ ಇತ್ತು. ಅವರ ಕಷ್ಟ-ಸುಖಗಳಲ್ಲಿ ವಿಷ್ಣು ಭಾಗಿಯಾಗುತ್ತಿದ್ದರು. ಅದಕ್ಕಿಂತ ಹೆಚ್ಚು ಅವಿನಾಶ್ ಮತ್ತು ಮಾಳವಿಕಾ ಮದುವೆಯಲ್ಲಿ ವಿಷ್ಣುವರ್ಧನ್ ಪಾತ್ರವೂ ದೊಡ್ಡದು.
ಮಾಳವಿಕಾ ದೇವರ ಮನೆಯಲ್ಲಿ ದೇವರ ಪೋಟೋ ಜೊತೆ ವಿಷ್ಣುವರ್ಧನ್ ಫೋಟೋ
ವಿಷ್ಣುವರ್ಧನ್‌ಗೆ ಅವಿನಾಶ್ ಮೊದಲಿನಿಂದಲೂ ಆಪ್ತರು. ಅವಿನಾಶ್‌ಗೊಂದು ಮದುವೆ ಮಾಡಬೇಕು ಎಂಬ ಆಸೆ ಅವರಿಗಿತ್ತು. ಅದೇ ವೇಳೆ ಅವಿನಾಶ್ ಮಾಳವಿಕಾರನ್ನು ಪ್ರೀತಿ ಮಾಡುತ್ತಿರುವುದು ವಿಷ್ಣುವಿಗೆ ಗೊತ್ತಾಗಿತ್ತು. ಅವರು ಆಮೇಲೆ ಹಿಂದೆಮುಂದೆ ನೋಡಲಿಲ್ಲ. ಅವಿನಾಶ್ ಪೋಷಕರ ಸ್ಥಾನದಲ್ಲಿ ನಿಂತು, ಮಾಳವಿಕಾ ಅವರ ಮನೆಗೆ ಹೋಗಿ ಹೆಣ್ಣು ಕೇಳಿದ್ದರು. ಈ ಕತೆಯನ್ನು ಅವಿನಾಶ್-ಮಾಳವಿಕಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಸ್ಮರಿಸಿಕೊಂಡಿದ್ದರು.
ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ:
ಅಷ್ಟೇ ಅಲ್ಲ, ವಿಷ್ಣುವರ್ಧನ್ ಯಾವ ಮಟ್ಟಿಗೆ ಅವರಿಬ್ಬರಿಗೂ ಸಹಾಯ ಮಾಡಿದ್ದಾರೆ ಎಂದರೆ ಇವತ್ತಿಗೂ ಅವಿನಾಶ್ ಮತ್ತು ಮಾಳವಿಕಾ ಅವರು ವಿಷ್ಣುವರ್ಧನ್ ಅವರನ್ನು ದೇವರ ಸ್ಥಾನದಲ್ಲಿಯೇ ಇಟ್ಟಿದ್ದಾರೆ. ಆ ದಂಪತಿಯ ದೇವರ ಮನೆಯಲ್ಲಿಯೂ ವಿಷ್ಣುವರ್ಧನ್ ಅವರ ಫೋಟೋ ಇದೆ. ಅಷ್ಟರ ಮಟ್ಟಿಗೆ ವಿಷ್ಣುವರ್ಧನ್ ಆ ದಂಪತಿಯ ಬದುಕಲ್ಲಿ ಹಾಸುಹೊಕ್ಕಾಗಿ ಹೋಗಿದ್ದಾರೆ.
ವೀಕೆಂಡ್ ವಿಥ್ ರಮೇಶ್‌ನಲ್ಲಿ ಮಗನ ಬಗ್ಗೆ ಮಾತನಾಡಿದ ಅವಿನಾಶ್ ದಂಪತಿ
ಈಗ ನೋಡಿದರೆ ಮಾಳವಿಕಾ ಹಂಚಿಕೊಂಡಿರುವ ಫೋಟೋ ಮತ್ತೊಂದು ಕತೆ ಹೇಳುತ್ತಿದೆ. ಅವರ ಮನೆಯ ಗುದ್ದಲಿ ಪೂಜೆ ನೆರವೇರಿಸಿದ್ದೂ ಸಾಹಸಸಿಂಹ. ಆ ಪ್ರಕಾರ ನೋಡುವುದಾದರೆ ಅವಿನಾಶ್-ಮಾಳವಿಕಾ ದಂಪತಿಯ ಮನೆಯ ಆಧಾರವಾಗಿ ವಿಷ್ಣು ಇದ್ದಾರೆ. ಅವರ ಮನೆಯಲ್ಲೂ ಇದ್ದಾರೆ. ಮನದಲ್ಲೂ ಇದ್ದಾರೆ. ಬದುಕಲ್ಲೂ ಇದ್ದಾರೆ. ಆ ಒಂದು ಫೋಟೋ ಇಷ್ಟೆಲ್ಲಾ ಕತೆಯನ್ನು ಸಾರುತ್ತಿದೆ.
