ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಡ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್ ಅವರು ಆಗ್ರಹಿಸಿದ್ದಾರೆ. ಸುಧೀ‌ರ್ ಅತ್ತಾವರ ನಿರ್ದೇಶನದ ಈ ಸಿನಿಮಾದ ಕೊರಗಜ್ಜ ಹಾಡುಗಳನ್ನ ಬಳಸಿ ರೀಲ್ಸ್ ಮಾಡುವಂತೆ ಸಿನಿಮಾ ತಂಡ ಕರೆ ನೀಡಿದೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಕೊರಗಜ್ಜ ಸಿನಿಮಾದ ರೀಲ್ಸ್ ವಿವಾದ

ಕಾಂತಾರ ಸಿನಿಮಾದ ಸಕ್ಸಸ್ ಬಳಿಕ ದೈವಾರಾಧನೆ ಸಬ್ಜೆಕ್ಟ್ ಸಿನಿಮಾಗಳ ಮೇಲೆ ಸ್ಯಾಂಡಲ್‌ವುಡ್ ಪ್ರೀತಿ ಜಾಸ್ತಿ ಆಗಿದೆಯಾ? ಈ ಪ್ರಶ್ನೆಗೆ ಕಾರಣ, ಇದೀಗ ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ಕನ್ನಡದ 'ಕೊರಗಜ್ಜ' ಸಿನಿಮಾ. ಬಹುತೇಕ ಎಲ್ಲರಿಗೂ ತಿಳಿದುರುವಂತೆ, ಕೊರಗಜ್ಜ (Koragajja) ತುಳುನಾಡು ಸೇರಿದಂತೆ ಕೊಡಗು (Kodagu) ಜಿಲ್ಲೆಯ ಆರಾಧ್ಯ ದೈವ. ಆದರೆ ಇದೀಗ ಇದೇ ದೈವದ ಹೆಸರಲ್ಲಿ ಸಿನಿಮಾವೊಂದು ತೆರೆಕಾಣಲು ರೆಡಿಯಾಗಿದೆ, ಪ್ರಚಾರವೂ ಜೋರಾಗಿದೆ. ರೀಲ್ಸ್ ಸ್ಪರ್ಧೆಗೆ 'ಕೊರಗಜ್ಜ' ಸಿನಿಮಾ ತಂಡ ಕರೆ ನೀಡಿದೆ. ಗೆದ್ದವರಿಗೆ ವಿದೇಶ ಪ್ರವಾಸದ ಜೊತೆ ಒಂದು ಕೋಟಿ ರೂ. ಬಹುಮಾನದ ವಿಶೇಷ ಆಸೆಯನ್ನೂ ಸೃಷ್ಟಿಸಿದೆ.

ಆದರೆ, 'ಕೊರಗಜ್ಜ' ಸಿನಿಮಾ ತಂಡ ಆಯೋಜಿಸಿರುವ ರೀಲ್ಸ್ ಸ್ಪರ್ಧೆಗೆ ಇದೀಗ ಕೊಡಗಿನಲ್ಲಿ ದೈವ ನರ್ತಕರ ಮತ್ತು ಆರಾಧಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈಗಾಗಲೇ ಸಾವಿರಾರು ರೀಲ್ಸ್ ಗಳು ಕೂಡ ಸಿದ್ದವಾಗಿವೆ. ಆದರೆ ಸಿನಿಮಾ ತಂಡದ ಈ ಪ್ರಚಾರದ ಗಿಮಿಕ್ ನೋಡಿ ಕೊಡಗಿನ ದೈವ ಆರಾಧಕರು ಹಾಗೂ ದೈವ ನರ್ತಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಘದ ಸದಸ್ಯರು 'ಸಿನಿಮಾ ತಂಡ ಇಂಥ ಕೀಳು ಅಭಿರುಚಿಗಾಗಿ ಈ ರೀಲ್ಸ್ ಸ್ಪರ್ಧೆಗೆ ಕರೆ ಕೊಟ್ಟಿದೆ' ಎಂದು ಟೀಕಿಸಿದೆ, ಜೊತೆಗೆ ಕೆಂಡಾಮಂಡಲವಾಗಿದೆ.

'ಕೊರಗಜ್ಜ' ಸಿನಿಮಾ ತಂಡದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ:

'ಕೊರಗಜ್ಜ ಸಿನಿಮಾ ತಂಡದ ಈ ಕೀಳು ಅಭಿರುಚಿಯ ಪ್ರಚಾರಕಾಯ್ದಿಂದ, ಈ ರೀಲ್ಸ್ ಸ್ಪರ್ಧೆ ಆಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೈವದ ಅಪಹಾಸ್ಯ ಮಾಡಿದಂತಾಗುತ್ತದೆ. ಬೀದಿಬೀದಿಯಲ್ಲಿ ಕುಣಿಯಲು ಇದೇನೂ ಯಾವುದೋ ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗುತ್ತದೆ' ಎಂದು ದೈವ ಆರಾಧಕರು ಆಕ್ರೋಶ ಹೊರ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಡ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್ ಅವರು ಆಗ್ರಹಿಸಿದ್ದಾರೆ.

ಸುಧೀ‌ರ್ ಅತ್ತಾವರ ನಿರ್ದೇಶನ

ಸುಧೀ‌ರ್ ಅತ್ತಾವರ ನಿರ್ದೇಶನದ ಈ ಸಿನಿಮಾದ ಕೊರಗಜ್ಜ ಹಾಡುಗಳನ್ನ ಬಳಸಿ ರೀಲ್ಸ್ ಮಾಡುವಂತೆ ಸಿನಿಮಾ ತಂಡ ಕರೆ ನೀಡಿದೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಬಹುಮಾನ ಮೀಸಲಿಟ್ಟಿದೆ. ಅಂತಿಮ ಮೂರು ಸ್ಪರ್ಧಿಗಳಿಗೆ ವಿದೇಶ ಪ್ರವಾಸದ ಬಹುಮಾನವನ್ನೂ ಘೋಷಿಸಿದೆ. ಅತಿಹೆಚ್ಚು ಲೈಕ್ಸ್ ಗಳಿಸುವ ಸ್ಪರ್ಧಿಗಳಿಗೆ ಈ ಎಲ್ಲಾ ಬಹುಮಾನ ಲಭಿಸಲಿವೆ ಎಂದು ಚಿತ್ರ ತಂಡ ಆಫರ್ ನೀಡಿದೆ. ಆದರೆ 'ನಂಬಿದವರಿಗೆ ಇಂಬು ನೀಡುವ ದೇವರು' ಎಂದೇ ಖ್ಯಾತಿಯಾಗಿರುವ ಕೊರಗಜ್ಜನನ್ನ ಬಳಸಿ ರೀಲ್ಸ್ ಮಾಡಲು ಹೊರಟಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಸಿನಿಮಾ ಈ ತಿಂಗಳು ಜನವರಿಯಲ್ಲಿ (ಜನವರಿ 2026) ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಅಂದಹಾಗೆ, ಕರಾವಳಿ-ತುಳುನಾಡು ಭಾಗದ ಸ್ಥಳೀಯ ದೈವಗಳನ್ನ ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ಸು ಗಳಿಸುವುದು ಹೆಚ್ಚಾಗಿದೆ. 'ರಂಗಿತರಂಗ', 'ಕಾಂತಾರ' ಮತ್ತು 'ಕಾಂತಾರ ಚಾಪ್ಟರ್-1' ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳು. ಈ ಹಿನ್ನೆಲೆಯಲ್ಲಿ, ಇದೀಗ 'ಕೊರಗಜ್ಜ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತುಳನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನನ್ನ ಇಟ್ಟುಕೊಂಡು ಈ ಸಿನಿಮಾದಲ್ಲಿ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ. ಸದ್ಯ ಈ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಕೊರಗಜ್ಜನ ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದೆ. ಇದಕ್ಕೆ ಭರ್ಜರಿ ಬಹುಮಾನವನ್ನೂ ಇಟ್ಟಿದೆ. ಆದರೆ, ಚಿತ್ರತಂಡದ ನಿಲುವು ಕೊಡಗಿನ ಜನರು, ದೈವಾರಾಧಕರು ಹಾಗೂ ದೈವನರ್ತಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಬೆಳವಳಿಗೆಯನ್ನು ಕಾದು ನೋಡಬೇಕಿದೆ.