ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿದ್ದ ನಟಿ ರಚಿತಾ ರಾಮ್ ಅಭಿನಯದ ಚಿತ್ರದ ಚಿತ್ರೀಕರಣಕ್ಕೆ ಜಿಲ್ಲಾಡಳಿತ ತಡೆ ನೀಡಿದೆ. ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ಪಡೆಯದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಕೊಪ್ಪಳ (ಜ.31): ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಡಂದೇ ಖ್ಯಾತರಾಗಿರುವ ನಟಿ ರಚಿತಾ ರಾಮ್ ಅವರ ಸಿನಿಮಾ ಶೂಟಿಂಗ್‌ಗೆ ರಾಜ್ಯ ಸರ್ಕಾರದಿಂದ ಶಾಕ್ ನೀಡಲಾಗಿದೆ. ನೀವು ಇಲ್ಲಿ ಸಿನಿಮಾ ಮಾಡಬೇಡಿ ಎಂದು ಕೊಪ್ಪಳ ಜಿಲ್ಲಾಡಳಿತದಿಂದ ತಡೆ ಒಡ್ಡಲಾಗಿದೆ. ಸ್ವತಃ ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಇದ್ದರೂ ಜಿಲ್ಲಾಡಳಿತದ ನಡೆಯನ್ನು ತಡೆಯಲಾಗದೇ ಶೂಟಿಂಗ್ ಸ್ಥಗಿತ ಮಾಡಲಾಗಿದೆ.
ರಾಜ್ಯ ಸರ್ಕಾರದ ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಚಿತ್ರೀಕರಣವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರ, ರಂಗಾಪುರ ಗ್ರಾಮದ ಬಳಿ ಮಾಡಲಾಗುತ್ತಿತ್ತು. ನಮ್ಮಪ್ಪ ಮಿನಿಸ್ಟರ್ ಎಂಬ ಧೈರ್ಯದಿಂದ ಇಡೀ ಚಿತ್ರತಂಡವನ್ನು ಯಾರದೇ ಅನುಮತಿಯನ್ನೂ ಪಡೆಯದೇ ಚಿತ್ರೀಕರಣ ಮಾಡಲು ಜೈದ್ ಖಾನ್ ಕರೆದುಕೊಂಡು ಬಂದಿದ್ದರು. ಆದರೆ, ಸಿನಿಮಾ ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿಯೇ ನೀವು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಥಳದ ಹಿನ್ನೆಲೆ ಹೊಂದಿರುವ ಸ್ಥಳದಲ್ಲಿ ಚಿತ್ರೀಕರಣ ಮಾಡಲು ಪರವಾನಗಿ ಪಡೆದುಕೊಂಡಿಲ್ಲ. ನೀವು ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಇಲ್ಲಿ ಚಿತ್ರೀಕರಣ ಮಾಡುವಂತಿಲ್ಲ ಎಂದು ತಾತ್ಕಾಲಿಕವಾಗಿ ತಡೆ ಒಡ್ಡಲಾಗಿದೆ.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಜೊತೆ ನಟಿ ರಚಿತಾ ರಾಮ್ ಒಡನಾಟ, ಲಾಭ ಅಷ್ಟಿಷ್ಟಲ್ಲ: ಲಾಯರ್ ಜಗದೀಶ್ ಹೇಳಿಕೆ ವೈರಲ್
ಜೈದ್ ಖಾನ್ ಅಭಿನಯದ ಕಲ್ಟ್ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಇಲ್ಲಿ ಜೈದ್ ಖಾನ್ ಸ್ವತಃ ಸಚಿವರ ಮಗನಾಗಿದ್ದರೂ, ಅಧಿಕಾರಿಗಳು ಚಿತ್ರೀಕರಣಕ್ಕೆ ತಡೆ ನೀಡಿದರೂ ಏನೂ ಮಾಡಲಾಗದೇ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನು ಈ ಕಲ್ಟ್ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ಸಣಾಪುರ ಹಾಗೂ ರಂಗಾಪುರ ನೈಸರ್ಗಿಕ ಪ್ರದೇಶಗಳು ಮಾತ್ರವಲ್ಲದೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಸ್ಥಳ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಗೂ ಕೊಪ್ಪಳ ತಾಲೂಕಿನ ಐತಿಹಾಸಿಕ ಸ್ಥಳ ಆನೆಗೊಂದಿ ಭಾಗದ ಹಲವೆಡೆ ಚಿತ್ರಿಕರಣ ಮಾಡಲಾಗುತ್ತಿತ್ತು. ಇನ್ನು ಸಾಣಾಪುರ ಕೆರೆ ಸೇರಿದಂತೆ ಸುತ್ತಲಿನ ಪ್ರದೇಶವನ್ನು ಕೊಪ್ಪಳ ಜಿಲ್ಲಾಡಳಿತದಿಂದ ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಟ್ ಸಿನಿಮಾ ಚಿತ್ರಿಕರಣಕ್ಕೆ ಅರಣ್ಯ ಅಧಿಕಾರಿಗಳು ತಡೆ ತಂದಿದ್ದಾರೆ.
