ನಿರ್ಮಾಪಕರು ನೀಡಿದ ಬೆಳ್ಳಿ ಪೆನ್ನನ್ನು ನಿರ್ದೇಶಕರಿಗೆ ನೀಡಿದ ಕಿಚ್ಚ ಬಿಗ್‌ಬಾಸ್‌ ಖ್ಯಾತಿಯ ರಾಜೀವ್‌ ಸಿನಿಮಾ ಉಸಿರೇ ಉಸಿರೇ ಆರಂಭ

ಬಿಗ್‌ಬಾಸ್‌ ಖ್ಯಾತಿಯ ರಾಜೀವ್‌ ನಟನೆಯ ‘ಉಸಿರೇ ಉಸಿರೇ’ ಚಿತ್ರ ಶುರುವಾಗಿದೆ. ಸಿ.ಎಂ. ವಿಜಯ್‌ ನಿರ್ದೇಶನದ, ಪ್ರದೀವ್‌ ಯಾದವ್‌ ನಿರ್ಮಾಣದ ಈ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು ಕಿಚ್ಚ ಸುದೀಪ್‌. ಒಳ್ಳೆಯ ಮೂಡಿನಲ್ಲಿದ್ದ ಸುದೀಪ್‌, ‘ರಾಜೀವ್‌ ಕಲೆ, ಶ್ರದ್ಧೆ ಎಲ್ಲಕ್ಕಿಂತ ಹೆಚ್ಚಾಗಿ ಮುಗ್ಧ. ಸ್ಕ್ರೀನ್‌ನಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತಾನೆ. ಅವನಿಗೆ ಒಳ್ಳೆಯದಾಗಬೇಕು’ ಎಂದರು. ಈ ಸಂದರ್ಭದಲ್ಲಿ ಸಿನಿಮಾ ಆರಂಭಿಸಿದ ಪ್ರವೀಣ್‌ ಯಾದವ್‌ ಧೈರ್ಯವನ್ನು ಮೆಚ್ಚಿಕೊಂಡರು.

ರಾಜೀವ್‌ಗೆ ಈ ಕ್ಷಣ ಧನ್ಯತೆಯ ಕ್ಷಣವಾಗಿತ್ತು. ‘ಇಂಥದ್ದೊಂದು ವೇದಿಕೆ ಹತ್ತುವುದಕ್ಕೆ 10 ವರ್ಷ ಕಾದೆ’ ಎಂದರು. ಚಿತ್ರಕ್ಕೆ ‘ಹುಚ್ಚ’ ಸಿನಿಮಾದ ಹಾಡಿನ ಸಾಲನ್ನು ಇಡಲು ತಾನೇ ಕೇಳಿಕೊಂಡಿದ್ದನ್ನು ತಿಳಿಸಿದರು.

ರಾಜೀವ್ 'ಉಸಿರೇ ಉಸಿರೇ' ತಂಡಕ್ಕೆ ಸಾಥ್‌ ಕೊಟ್ಟ ಕಿಚ್ಚ ಸುದೀಪ್!

ನಿರ್ದೇಶಕ ಸಿ.ಎಂ. ವಿಜಯ್‌, ‘ನನ್ನ ಅಕ್ಷರಗಳು ಅನ್ನದ ರೂಪ ಪಡೆದುಕೊಂಡ ದಿನ ಇದು’ ಎಂದು ಭಾವ ಪರವಶರಾದರು. ತೆಲುಗು ನಟ ಅಲಿ ಕಿಚ್ಚ ಸುದೀಪರನ್ನು ಮೆಚ್ಚಿಕೊಂಡರು. ‘ಹಿರಿಯರ ಹಾದಿಯಲ್ಲಿ ಸಾಗಿ ಕನ್ನಡದ ಸೇವೆ ಮಾಡುತ್ತಿರುವ ಹೃದಯವಂತ ನಟ’ ಎಂದರು.

ಈ ಚಿತ್ರಕ್ಕೆ ಶ್ರೀಜಿತಾ ನಾಯಕಿ. ಬೇರೆ ಭಾಷೆಗಳಲ್ಲಿ ನಟಿಸಿದ್ದರೂ ಕನ್ನಡದಲ್ಲಿ ಮೊದಲ ಸಿನಿಮಾ. ಬಿಗ್‌ಬಾಸ್‌ ಸೀಸನ್‌ 8 ವಿನ್ನರ್‌ ಮಂಜು ಪಾವಗಡ, ತಬಲಾ ನಾಣಿ ಇದ್ದರು.

ನಿರ್ಮಾಪಕರು ನೀಡಿದ ಬೆಳ್ಳಿ ಪೆನ್ನನ್ನು ನಿರ್ದೇಶಕರಿಗೆ ನೀಡಿದ ಕಿಚ್ಚ

ಕಿಚ್ಚ ಸುದೀಪ್‌ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಗೌರವಾರ್ಥವಾಗಿ ನಿರ್ಮಾಪಕರು ಬೆಳ್ಳಿ ಪೆನ್‌ ಕೊಡುಗೆ ನೀಡಿದರು. ಆದರೆ ಕಿಚ್ಚ ಸುದೀಪ್‌ ಆ ಕ್ಷಣವೇ, ‘ಈ ಪೆನ್ನು ತಲುಪಬೇಕಾಗಿದ್ದು ನನಗಲ್ಲ, ನಿರ್ದೇಶಕರಿಗೆ. ನನ್ನ ಬಳಿ ಇದ್ದರೆ ಬರೀ ಚೆಕ್‌ ಸೈನ್‌ ಮಾಡಿಸಿಕೊಳ್ಳುತ್ತಾರೆ’ ಎಂದು ತಮಾಷೆ ಮಾಡಿ ನಿರ್ದೇಶಕ ವಿಜಯ್‌ ಅಂಗಿಗೆ ಸಿಕ್ಕಿಸಿದರು. ಸುದೀಪ್‌ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.