Asianet Suvarna News Asianet Suvarna News

ನಾನು ನಿರ್ಮಾಪಕನಾಗಲು ಜಯರಾಂ ಅವರೇ ಸ್ಫೂರ್ತಿ : ಸಾ ರಾ ಗೋವಿಂದು

ನಾನು ಆಗಷ್ಟೆಚಿತ್ರರಂಗಕ್ಕೆ ಬಂದು ಡಾ. ರಾಜ್‌ಕುಮಾರ್‌ ಅವರ ನಟನೆಯ ಚಿತ್ರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ಸಿ ಜಯರಾಂ ಅವರು ಚಿತ್ರ ನಿರ್ಮಾಣಕ್ಕೆ ಇಳಿದಾಗ ನನ್ನನ್ನೂ ಜತೆಗೆ ಕರೆದುಕೊಂಡರು. ಹಾಗೆ ನೋಡಿದರೆ ಜಯರಾಂ ಅವರು ಚಿತ್ರ ನಿರ್ಮಾಣಕ್ಕೆ ಬರಲು ಕಾರಣ ರಾಜ್‌ಕುಮಾರ್‌ ದಂಪತಿ. 

KFCC president Sa Ra Govindu recalls memory about late producer C Jayaram vcs
Author
Bangalore, First Published Sep 10, 2021, 11:01 AM IST

ಜಯರಾಂ ಅವರು ದುಡಿಮೆ ಹುಡುಕುತ್ತ ಬೆಂಗಳೂರಿಗೆ ಬಂದವರು. ಅವರು ಚಿತ್ರರಂಗಕ್ಕೆ ಬರುವ ಮುನ್ನ ಇಲೆಕ್ಟ್ರಿಕ್‌ ಗುತ್ತಿಗೆದಾರರಾಗಿದ್ದರು. ಗಾಂಧಿನಗರದಲ್ಲಿರುವ ಮೋತಿಮಹಲ್‌ ಹೋಟೆಲ್‌ನ ಇಲೆಕ್ಟ್ರಿಕ್‌ ಕೆಲಸ ಮಾಡಿಸಿದ್ದು ಇದೇ ಜಯರಾಂ ಅವರು. ಮುಂದೆ ರಾಜ್‌ ಅವರಿಗೆ ಹತ್ತಿರವಾದರು. ರಾಜ್‌ಕುಮಾರ್‌ ಅವರಿಗೂ ಜಯರಾಂ ಅಂದ್ರೆ ಪ್ರೀತಿ. ಒಮ್ಮೆ ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಅವರು ಜಯರಾಂ ಅವರನ್ನು ಉದ್ದೇಶಿಸಿ ‘ನಿಮ್ಮಂಥವರು ಇಂತ ಸಮಯದಲ್ಲಿ ಸಿನಿಮಾ ನಿರ್ಮಾಣಕ್ಕೆ ಬರಬೇಕು. ನಿಮ್ಮಲ್ಲಿರುವ ಒಳ್ಳೆಯ ಗುಣಗಳಿಂದ ಒಳ್ಳೆಯ ಚಿತ್ರಗಳನ್ನು ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದ ಮೇಲೆ ಜಯರಾಂ ಅವರು ಸಿನಿಮಾ ನಿರ್ಮಾಣದ ಬಗ್ಗೆ ಯೋಚಿಸಿದರು.

ಖ್ಯಾತ ನಿರ್ಮಾಪಕ ಸಿ. ಜಯರಾಮ್ ನಿಧನ

ಇಲೆಕ್ಟ್ರಿಕ್‌ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ, ಚಿತ್ರರಂಗಕ್ಕೆ ಬಂದರೆ ಎಂಥ ಸಿನಿಮಾಗಳನ್ನು ನಿರ್ಮಿಸಬಹುದು ಎಂಬುದಕ್ಕೆ ಅವರ ಬ್ಯಾನರ್‌ನಲ್ಲಿ ಬಂದ ಚಿತ್ರಗಳೇ ಸಾಕ್ಷಿ. ಮನೆಗಳಿಗೆ ಬೆಳಕು ಕೊಡುತ್ತಿದ್ದ ವ್ಯಕ್ತಿ, ಚಿತ್ರರಂಗದಲ್ಲೂ ಬೆಳಕು ಕಾಣುವ ಮೊದಲ ಹೆಜ್ಜೆಯಾಗಿ ಆರಂಭಿಸಿದ್ದು ‘ಪಾವನಾ ಗಂಗಾ’ ಚಿತ್ರದ ಮೂಲಕ. ಶ್ರೀನಾಥ್‌, ಆರತಿ ಜೋಡಿಯ ಈ ಸಿನಿಮಾ ಸೂಪರ್‌ ಹಿಟ್‌ ಆಯಿತು. ಆ ನಂತರ ‘ರಾಮಪುರದ ರಾವಣ’, ‘ಅನುಪಮಾ’, ‘ಆಟೋರಾಜ’, ‘ನಾ ನಿನ್ನ ಬಿಡಲಾರೆ’, ‘ಕಾಮನಬಿಲ್ಲು’, ‘ರುದ್ರತಾಂಡವ’, ‘ಗಲಾಟೆ ಸಂಸಾರ’. ಈ ಪೈಕಿ ಶಂಕರ್‌ನಾಗ್‌ ನಟನೆಯ ‘ಆಟೋರಾಜ’ ಎವರ್‌ ಗ್ರೀನ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ ಚಿತ್ರವಾಯಿತು. ಇನ್ನೂ ಡಾ ರಾಜ್‌ಕುಮಾರ್‌ ಅಭಿನಯದ ‘ಕಾಮನಬಿಲ್ಲು’ ಚಿತ್ರದಲ್ಲಿ ಬರುವ ಯೋಗಾಸನ ದೃಶ್ಯವನ್ನು ಮರೆಯಲಾಗದು. ಹಾಗೆ ಅನಂತ್‌ನಾಗ್‌ ನಟನೆಯಲ್ಲಿ ಬಂದ ‘ನಾ ನಿನ್ನ ಬಿಡಲಾರೆ’ ಚಿತ್ರ 25 ವಾರ ಯಶಸ್ವಿಯಾಗಿ ಪ್ರದರ್ಶಗೊಂಡು ದಾಖಲೆ ಮಾಡಿತು.

KFCC president Sa Ra Govindu recalls memory about late producer C Jayaram vcs

ಹೀಗೆ ಒಂದಕ್ಕಿಂತ ಒಂದು ಭಿನ್ನವಾದ ಚಿತ್ರಗಳನ್ನು ನಿರ್ಮಿಸಿದ ಜಯರಾಂ ಅವರ ಬ್ಯಾನರ್‌ನಲ್ಲಿ ಪ್ರೊಡಕ್ಷನ್‌ ಮ್ಯಾನೇಜರ್‌ ಆಗುವ ಮೂಲಕ ನಾನು ಚಿತ್ರರಂಗದಲ್ಲಿ ಮತ್ತೊಂದು ಹಂತಕ್ಕೆ ಬೆಳೆದೆ. ಮುಂದೆ ನಾನು ಚಿತ್ರ ನಿರ್ಮಾಪಕನಾಗಲು ಸ್ಫೂರ್ತಿ ಆಗಿದ್ದೇ ಜಯರಾಂ ಅವರಿಂದ ಕಲಿತ ಪಾಠಗಳಿಂದ. ಅವರ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೂ ನಾನೇ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿದ್ದೆ. ಎಂ ಡಿ ಸುಂದರ್‌, ಚಿ ಉದಯ್‌ ಶಂಕರ್‌, ಬಬ್ರುವಾಹನ ಚಿತ್ರದ ಛಾಯಾಗ್ರಾಹಕ ಶ್ರೀಕಾಂತ್‌ ಹಾಗೂ ಜಯರಾಂ ಇವರದ್ದು ಒಂದು ತಂಡ. ಆಗಿನ ದಿನಗಳಲ್ಲಿ ಈ ತಂಡವನ್ನು ನೋಡುವುದೇ ಒಂದು ಖುಷಿ. ಪ್ರಾಮಾಣಿಕ ಹಾಗೂ ಶಿಸ್ತಿನ ವ್ಯಕ್ತಿ. 9 ಗಂಟೆಗೆ ಶೂಟಿಂಗ್‌ ಮುಗಿಯುತ್ತದೆ ಎಂದರೆ ಅರ್ಧ ಗಂಟೆ ಮೊದಲೇ ಬಂದು ಯಾರಿಗೆಲ್ಲ ಎಷ್ಟುಪೇಮೆಂಟ್‌ ಕೊಡಬೇಕು ಎಂದು ನನ್ನ ಜತೆ ಮಾತನಾಡಿ ಸರಿಯಾಗಿ 9 ಗಂಟೆಗೆ ಎಲ್ಲರಿಗೂ ಹಣ ಕೊಟ್ಟು ಹೋಗುತ್ತಿದ್ದರು.

ಕನ್ನಡ ಚಿತ್ರರಂಗದ ಮೂಲಕ ನಟಿಯರಾದ ಗಾಯತ್ರಿನಾಗ್‌ (ಆಟೋಶಂಕರ್‌) ಹಾಗೂ ಮಾಧವಿ (ಅನುಪಮಾ) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಸಿ ಜಯರಾಂ ಅವರಿಗೆ ಸೇರುತ್ತದೆ. ಹಾಗೆ ಡಾ ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ಅವರನ್ನು ಜತೆ ಮಾಡಿ ‘ಗಲಾಟೆ ಸಂಸಾರ’ ಚಿತ್ರ ನಿರ್ಮಿಸಿದ್ದು ಜಯರಾಂ ಅವರ ಹೆಚ್ಚುಗಾರಿಕೆ. ಅನಂತ್‌ನಾಗ್‌ ಅವರಿಗೆ ಜಯರಾಂ ಎಂದರೆ ಪ್ರೀತಿ ಮತ್ತು ಅಭಿಮಾನ. ಜಯರಾಂ ಅವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಬಂದು ಕೂತ ನನಗೆ ಮತ್ತೆ ಆ ದಿನಗಳು ನೆನಪಾಗುತ್ತಿವೆ.

ಫೋಟೋ ವಿವರಣೆ: ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿ ನಾ ನಿನ್ನ ಬಿಡಲಾರೆ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರತಂಡ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.

Follow Us:
Download App:
  • android
  • ios