ಕೋಟಿಗೊಬ್ಬ-3 ಚಿತ್ರತಂಡ ಆಯೋಜಿಸಿದ್ದ ‘ಕಿಚ್ಚ ಸುದೀಪ್‌ ಬೆಳ್ಳಿ ಮಹೋತ್ಸವ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪಾಲ್ಗೊಂಡು ಅವರು, ‘ಕೋಟಿಗೊಬ್ಬ 3 ಚಿತ್ರತಂಡದವರು ಸುದೀಪ್‌ ಬೆಳ್ಳಿಹಬ್ಬದ ಸಂಭ್ರಮಕ್ಕೆ ಈ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಸಂಗತಿ. ಅವರು ನಡೆದು ಬಂದ ಹಾದಿಯನ್ನು ಅವಲೋಕನ ಮಾಡಬೇಕಾದ ಸಂದರ್ಭವಿದು’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

‘1997 ತಾಯವ್ವ ಚಿತ್ರದಲ್ಲಿ ಚಿಕ್ಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಸುದೀಪ್‌ ಅವರು ಕೋಟಿಗೊಬ್ಬ-3 ಚಿತ್ರದವರೆಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿತೆರೆಯ ಜೊತೆಗೆ ಕಿರು ತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಅವರ ಅಭಿಮಾನಿ ಬಳಗ ಬಹಳ ದೊಡ್ಡದಿದೆ. ವರ್ಷದಿಂದ ವರ್ಷಕ್ಕೆ ಮಾಗಿದ ಅವರ ಪ್ರತಿಭೆಗೆ ಅವರ ಚಿತ್ರಗಳು ಸಾಕ್ಷಿಯಂತಿವೆ. ವಿಭಿನ್ನ ವ್ಯಕ್ತಿತ್ವದ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಚಿತ್ರ ಒರೆಗೆ ಹಚ್ಚಿರುವ ಸುದೀಪ್‌ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಇದೀಗ ಕೋಟಿಗೊಬ್ಬ 3 ಚಿತ್ರವೂ ದೇಶದ ಗಮನ ಸೆಳೆಯುವಂತಾಗಲಿ. ಇಂಥ ಚಿತ್ರಗಳ ಮೂಲಕ ಅವರೂ ಬೆಳೆದು ಚಿತ್ರರಂಗವನ್ನೂ ಬೆಳೆಸಲಿ’ ಎಂದು ಆಶಯ ವ್ಯಕ್ತಪಡಿಸಿದರು.

'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ಸುದೀಪ್; ಅಬ್ಬಬ್ಬಾ ಜನ ಸಾಗರ!

‘ಸುದೀಪ್‌ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸಲು ಸಂತಸವಾಗುತ್ತಿದೆ’ ಎಂದೂ ಯಡಿಯೂರಪ್ಪ ಹೇಳಿದರು.

ಹಿರಿಯ ನಟರಾದ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌ ಅರವಿಂದ್‌, ರವಿಶಂಕರ್‌, ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್‌ಆರ್‌ ರಂಗನಾಥ್‌, ಕನ್ನಡ ಪ್ರಭ-ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ, ಕೋಟಿಗೊಬ್ಬ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.