13 ವರ್ಷಗಳ ಬಳಿಕ ಮೈಸೂರಲ್ಲಿ ಜ.29ಕ್ಕೆ ವಿಷ್ಣು ಸ್ಮಾರಕ ಅನಾವರಣ!
ಹಾಲಾಳು ಗ್ರಾಮದಲ್ಲಿ ಡಾ ವಿಷ್ಣು ವರ್ಧನ್ ಸ್ಮಾರಕವನ್ನು ಸಿಎಂ ಉದ್ಘಾಟನೆ ಮಾಡಲಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಜ.29 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಮಾರಕ ಉದ್ಘಾಟಿಸಲಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಿಧನರಾದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಭೂಮಿಯ ವ್ಯಾಜ್ಯ, ರೈತರ ಪ್ರತಿಭಟನೆ ನಡುವೆಯೂ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ, ನಟ ಅನಿರುದ್ಧ ಅವರ ಹೋರಾಟದ ಫಲವಾಗಿ ಮತ್ತು ಸರ್ಕಾರದ ನೆರವಿನೊಂದಿಗೆ ಈಗ ಸ್ಮಾರಕ ಸಿದ್ಧವಾಗಿದೆ.
ಗುರುವಾರ ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ನಟ ಅನಿರುದ್ಧ, ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿ ಸರ್ಕಾರ ನೀಡಿರುವ 5 ಎಕರೆ ಪ್ರದೇಶದ ಪೈಕಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಇದರಲ್ಲಿ ಸುಮಾರು 600 ಛಾಯಾಚಿತ್ರಗಳ ಪ್ರದರ್ಶನವಿದೆ. ಅಲ್ಲದೆ, ಅವರು ಬಳಕೆ ಮಾಡುತ್ತಿದ್ದ ಹಾಗೂ ಇತರ ಅನೇಕ ವಸ್ತುಗಳ ಪ್ರದರ್ಶನವೂ ಇರಲಿದೆ. ಸ್ಮಾರಕದ ಆವರಣದಲ್ಲಿ ವಿಭೂತಿ ಧರಿಸಿರುವ ಸುಮಾರು 7 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನೂ ಅನಾವರಣಗೊಳಿಸಲಾಗುವುದು. ಸ್ಮಾರಕದಲ್ಲಿ ಒಂದು ಸಭಾಂಗಣ ನಿರ್ಮಿಸಲಾಗಿದ್ದು, ಇಲ್ಲಿ ರಂಗ ತರಬೇತಿ, ಸಿನಿಮಾ ಕಾರ್ಯಾಗಾರ ಆಯೋಜಿಸಲಾಗುವುದು. ಈ ಸಭಾಂಗಣದ ಜೊತೆಗೆ ಇತರ ಎರಡು ಕೊಠಡಿ ಮತ್ತು ಕಚೇರಿ ಇರಲಿದೆ ಎಂದರು.
ಡಾ ವಿಷ್ಣುವರ್ಧನ್ 'ವಲ್ಮೀಕ' ನಿಲಯ: ಗೃಹಪ್ರವೇಶ ಫೋಟೋಗಳಿವು...
'ತಮ್ಮೆಲ್ಲರ ಜೊತೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತಿರುವೆ. ಇದೇ ತಿಂಗಳು 29ನೇ ತಾರೀಕು ಭಾನುವಾರ ಅಪ್ಪ ಅವರು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಸಂಪೂರ್ಣಗೊಂಡಿರುವ ಸ್ಮಾರಕ ಉದ್ಘಾಟನೆ ನಡೆಯಲಿದೆ. ಈಗಷ್ಟೆ ಮಾನ್ಯ ಮುಖ್ಯಮಂತ್ರಿಗಳು ಈ ಸಂಭ್ರಮಕ್ಕೆ ಬರುವೆ ಎಂದು ಒಪ್ಪಿಕೊಂಡಿದ್ದಾರೆ. ತಾವೆಲ್ಲರೂ ಅಭಿಮಾನಿಗಳು ಇಷ್ಟು ವರ್ಷ ಕಾದಿದ್ದೀರಿ, ಇವತ್ತು ಈ ಸಂತೋಷದ ಸುದ್ದಿಯನ್ನು ಹೇಳುತ್ತಿರುವೆ. ನಾವೆಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸುವ ಮುಖಾಂತರ ಅಪ್ಪ ಅವರ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ನಮನಗಳನ್ನ ಶ್ರದ್ಧಾಂಜಲಿ ಸಲ್ಲಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೀನಿ' ಎಂದು ಅನಿರುದ್ಧ್ ಮಾತನಾಡಿದ್ದಾರೆ.
ಹೊಸ ಮನೆ:
ಕೆಲವು ದಿನಗಳ ಹಿಂದೆ ಜಯನಗರದಲ್ಲಿ ಡಾ. ವಿಷ್ಣುವರ್ಧನ್ ಹಳೆ ಮನೆಗೆ ಹೊಸ ರೂಪ ಕೊಟ್ಟು ಗೃಹಪ್ರವೇಶ ಮಾಡಿದ್ದರು. ವಲ್ಮೀಕ ಎಂದು ಮನೆಗೆ ಹೆಸರಿಟ್ಟರು. ಅಂದಹಾಗೆ ಮನೆಗೆ ವಲ್ಕೀಕ ಎಂದು ಹೆಸರಿಡಲು ಕಾರಣವಿದೆ. ವಲ್ಕೀಕ ಅಂದ್ರೆ ಹುತ್ತದಲ್ಲಿ ಇರೋ ನಾಗರಹಾವು. ವಿಷ್ಣುಗೆ ಬ್ರೇಕ್ ಕೊಟ್ಟ ಸಿನಿಮಾ ನಾಗರಹಾವು ಹೀಗಾಗಿ ಈ ಹೆಸರು ಆಯ್ಕೆ ಮಾಡಲಾಗಿದೆ. ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು.