ನೆರೆ ಮನೆಯವರಿಗೆ ಕಿರುಕುಳ, ಜೀವ ಬೆದರಿಕೆ ಆರೋಪ ಕಾರು ಚಾಲಕನಿಂದ ನೆರೆ ಮನೆಯವರ ವಿರುದ್ಧ ಜಾತಿ ನಿಂದನೆ ಕೇಸ್‌

ವೈಯಕ್ತಿಕ ಕಾರಣಗಳಿಗೆ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಹಾಗೂ ಅವರ ನೆರೆಮನೆಯವರ ನಡುವೆ ಮತ್ತೆ ಬೀದಿ ಜಗಳವಾಗಿದ್ದು, ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ಪರಸ್ಪರ ದೂರು-ಪ್ರತಿ ದೂರು ದಾಖಲಿಸಿದ್ದಾರೆ.

ತಮಗೆ ಸುಖಾಸುಮ್ಮನೆ ನಡು ರಸ್ತೆಯಲ್ಲಿ ಕಾರು ಅಡ್ಡಗಟ್ಟಿಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೌಂದರ್ಯ ಜಗದೀಶ್‌ ಪುತ್ರ ಮತ್ತು ಆತನ ಸ್ನೇಹಿತರ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ನೆರೆಮನೆಯ ಮಹಿಳೆ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರೆ ಅನ್ನಪೂರ್ಣ ವಿರುದ್ಧ ಸೌಂದರ್ಯ ಜಗದೀಶ್‌ ಕಾರು ಚಾಲಕ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ಅನ್ನಪೂರ್ಣ ದೂರು ಕೊಟ್ಟಿದ್ದು, ಇತ್ತೀಚೆಗೆ ತಮ್ಮ ಮಕ್ಕಳ ಶಾಲೆಯಲ್ಲಿ ಪೋಷಕರ ಸಭೆ ಮುಗಿಸಿಕೊಂಡು ಪತಿ ರಜತ್‌ಗೌಡ ಜತೆ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಈ ದೂರಿನ ಮೇರೆಗೆ ಸೌಂದರ್ಯ ಜಗದೀಶ್‌ ಪುತ್ರ ಹಾಗೂ ನಟ ಸ್ನೇಹಿತ್‌ ಹಾಗೂ ಆತನ ಕಾರು ಚಾಲಕ ರಂಜಿತ್‌ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕೆಲ ತಿಂಗಳ ಹಿಂದೆ ವೈಯಕ್ತಿಕ ಕಾರಣಗಳಿಗೆ ನೆರೆ ಹೊರೆಯಲ್ಲಿ ನೆಲೆಸಿರುವ ಅನ್ನಪೂರ್ಣ ಹಾಗೂ ಸೌಂದರ್ಯ ಜಗದೀಶ್‌ ಕುಟುಂಬಗಳ ಮಧ್ಯೆ ಜಗಳವಾಗಿ ಕೊನೆಗೆ ಮಹಾಲಕ್ಷ್ಮಿ ಲೇಔಟ್‌ ಠಾಣೆ ಮೆಟ್ಟಿಲೇರಿತು. ಈಗ ಮತ್ತೆ ಕುಟುಂಬಗಳ ನಡುವೆ ಬೀದಿ ಜಗಳವಾಗಿದ್ದು, ತಮ್ಮ ಪುತ್ರನ ಮೇಲಿನ ಆರೋಪವನ್ನು ಸೌಂದರ್ಯ ಜಗದೀಶ್‌ ನಿರಾಕರಿಸಿದ್ದಾರೆ.

ಪತಿ ಎದುರೇ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತ್ ಜಗದೀಶ್; ಏನಿದು ಜಾಗ್ವರ್ ಜಗಳ?

ಮಗ ತಪ್ಪು ಮಾಡಿಲ್ಲ: ಜಗದೀಶ್‌ ಸ್ಪಷ್ಟನೆ

ನಮ್ಮ ಮನೆ ಎದುರು ನೆಲೆಸಿರುವ ಮಂಜುಳಾ ಪುರುಷೋತ್ತಮ್‌, ರಜತ್‌, ಅನ್ನಪೂರ್ಣ ಹಾಗೂ ಶಮಂತ್‌ ಮೇಲಿಂದ ಮೇಲೆ ನಮಗೆ ತೊಂದರೆ ಕೊಡುತ್ತಿದ್ದಾರೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಕಾಲೇಜಿನಲ್ಲಿ ಆತ ವ್ಯಾಸಂಗ ಮಾಡುತ್ತಿದ್ದಾನೆ. ಆತನ ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡಲು ಯತ್ನಿಸಿದ್ದಾರೆ. ಸುಮ್ಮನೆ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ನಿರ್ಮಾಪಕ ಸೌಂದರ್ಯ ಜಗದೀಶ್‌ ಕಿಡಿಕಾರಿದ್ದಾರೆ.

ನಮ್ಮ ವಿರುದ್ಧ ಸುಳ್ಳು ದೂರು: ಅನ್ನಪೂರ್ಣ

ನಮ್ಮ ಮನೆಗೆ ನುಗ್ಗಿ ಸೌಂದರ್ಯ ಜಗದೀಶ್‌ ಕುಟುಂಬದವರು ಗಲಾಟೆ ಮಾಡಿದ್ದರು. ಆಗ ಚಿತ್ರರಂಗದ ದಿಗ್ಗಜರೆಲ್ಲ ಸಂಧಾನ ನಡೆಸಿದರೂ ನಾವು ಪೊಲೀಸರಿಗೆ ನೀಡಿದ್ದ ದೂರು ಹಿಂಪಡೆದಿರಲಿಲ್ಲ. ನಮ್ಮ ಮನೆ ಮುಂದೆ ಕಾರು ನಿಲ್ಲಿಸದಂತೆ ಹೇಳಿದರೂ ಕೇಳದೆ ಕಾರು ನಿಲ್ಲಿಸಿ ಕ್ಯಾತೆ ತೆಗೆಯುತ್ತಾರೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಾರಣಕ್ಕೆ ಬಿಬಿಎಂಪಿಗೆ ಸಹ ದೂರು ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಕಾರು ಚಾಲಕ ರಕ್ಷಿತ್‌ ಮೂಲಕ ನಮ್ಮ ಮೇಲೆ ಜಾತಿ ನಿಂದನೆ ಆರೋಪ ಹೊರಿಸಿ ಸೌಂದರ್ಯ ಜಗದೀಶ್‌ ಸುಳ್ಳು ದೂರು ಕೊಡಿಸಿದ್ದಾರೆ ಎಂದು ಅನ್ನಪೂರ್ಣ ಆರೋಪಿಸಿದ್ದಾರೆ.