ಬೆಂಗಳೂರು (ಏ. 09): ಶ್ರೇಯಸ್ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ಮೊದಲ ಚಿತ್ರ ಪಡ್ಡೆಹುಲಿ. ಒಂದು ಯಶಸ್ವೀ ಚಿತ್ರ ಬಿಡುಗಡೆ ಪೂರ್ವದಲ್ಲಿಯೇ ಯಾವ್ಯಾವ ದಿಕ್ಕಿನಿಂದ ಪ್ರಚಾರ ಪಡೆಯ ಬಹುದೋ ಅಂಥಾ ವ್ಯಾಪಕ ಜನಪ್ರಿಯತೆಗಳನ್ನು ಈಗಾಗಲೇ ಈ ಚಿತ್ರ ಪಡೆದುಕೊಂಡಿದೆ. 

ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಗುರುದೇಶಪಾಂಡೆ ನೆಲದ ಘಮಲಿನ ಕಥೆಯೊಂದಿಗೆ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಶ್ರೇಯಸ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಅವರು ಲವರ್ ಬಾಯ್ ಆಗಿಯೂ ಪ್ರೇಕ್ಷಕರನ್ನ ಮುಖಾಮುಖಿಯಾಗೋ ಸೂಚನೆ ಹಾಡುಗಳ ಮೂಲಕವೇ ಸಿಕ್ಕಿದೆ. ಮೊದಲ ಚಿತ್ರದಲ್ಲಿಯೇ ಇಬ್ಬರು ಹುಡುಗೀರೊಂದಿಗೆ ಡ್ಯುಯೆಟ್ ಹಾಡೋ ಭಾಗ್ಯವೂ ಶ್ರೇಯಸ್ ಅವರಿಗೆ ಮೊದಲ ಚಿತ್ರದಲ್ಲಿಯೇ ಸಿಕ್ಕಿದೆ!

ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಐಶ್ವರ್ಯಾ ಶ್ರೇಯಸ್ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ನಿಶ್ವಿಕಾ ಈಗಾಗಲೇ ಒಂದು ಚಿತ್ರದ ಮೂಲಕ ಗಮನ ಸೆಳೆದಿರುವವವರು. ಐಶ್ವರ್ಯಾ ಮಾಡೆಲ್ ಲೋಕದಲ್ಲಿ ಮಿಂಚುತ್ತಲೇ ಪಡ್ಡೆಹುಲಿಗೆ ಜೋಡಿಯಾಗಿ ಹಿರಿತೆರೆಯತ್ತ ಪ್ರಯಾಣ ಬೆಳೆಸಿರುವವರು. ಆದರೆ ಇವರಿಬ್ಬರೂ ಕೂಡಾ ಯಾವ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆಂಬುದನ್ನು ಮಾತ್ರ ಚಿತ್ರತಂಡ ಗುಟ್ಟಾಗಿಟ್ಟಿದೆ.

ಪಡ್ಡೆಹುಲಿಯ ಪ್ರತೀ ಪಾತ್ರಗಳನ್ನೂ ಕೂಡಾ ಪ್ರೇಕ್ಷಕರಿಗೆ ಸರ್‍ಪ್ರೈಸ್ ನೀಡುವಂತೆ ರೂಪಿಸಿರುವ ನಿರ್ದೇಶಕರು ನಾಯಕಿಯರ ಪಾತ್ರವನ್ನೂ ಕೂಡಾ ಹಾಗೆಯೇ ಸಿದ್ಧಪಡಿಸಿದ್ದಾರಂತೆ. ಇದೆಲ್ಲವೂ ಏಪ್ರಿಲ್ ಹತ್ತೊಂಬತ್ತರಂದು ಅನಾವರಣಗೊಳ್ಳಲಿದೆ.