ನಗುವೇ ಬತ್ತಿ ಹೋದಂತಿದ್ದ ಮೇಘನಾ ರಾಜ್ ಮುಖದಲ್ಲಿ ಮಂದಹಾಸ. ಕ್ಷಣಕ್ಕೊಮ್ಮೆ ಮಿಂಚುವ ಕ್ಯಾಮರಾ ಫ್ಲ್ಯಾಶ್‌ಗೆ ಆಕೆಯ ತುಟಿಗಳು ಅರಳುತ್ತಿವೆ. ಹಿಂದೆಯೇ ಪತಿ ಚಿರು ಸರ್ಜಾ ಅವರ ದೊಡ್ಡ ಕಟೌಟ್, ಮೇಘನಾ ಜೊತೆಗೆ ತಾನಿದ್ದೇ ಇರುವೆ ಎನ್ನುವ ಹಾಗೆ.
ಆ ಕಾರಣಕ್ಕೋ ಏನೋ ಮೇಘನಾ ಮನಃಪೂರ್ವಕವಾಗಿ ನಗುತ್ತಾರೆ. ಆದರೆ ಅತ್ತಿಗೆಯ ಪಕ್ಕ ನಿಂತ ಧ್ರುವ ಸರ್ಜಾ ಮಾತ್ರ ನಗುತ್ತಿಲ್ಲ, ಒಂದು ಹಂತದಲ್ಲಿ ಅಳು ನಿಯಂತ್ರಿಸಲಾಗದೇ ಎದ್ದು ನಡೆಯುತ್ತಾರೆ.
ಚಿರು ನೆರಳಿನಲ್ಲಿ ಮೇಘನಾಗೆ ಸೀಮಂತ, ಮನೆ ಮಂದಿಯೆಲ್ಲ ಭಾಗಿ
ಮೇಘನಾಗೆ ಸೀಮಂತವಾಗಿದೆ. ಸುಂದರ್‌ರಾಜ್ - ಪ್ರಮೀಳಾ ಜೋಷಾಯ್ ಕುಟುಂಬದ ಅತ್ಯಾಪ್ತರು, ಸರ್ಜಾ ಕುಟುಂಬದಿಂದ ಧ್ರುವ ಸರ್ಜಾ- ಪ್ರೇರಣಾ ಸೀಮಂತದಲ್ಲಿ ಭಾಗವಹಿಸಿದ್ದಾರೆ. ಸರಳವಾಗಿ ಅಲಂಕರಿಸಿದ ಮಂಟಪದಲ್ಲಿ ಗುಲಾಬಿ ಬಣ್ಣದ ಅಗಲವಾದ ಅಂಚಿರುವ ಹಸಿರು ಸೀರೆಯುಟ್ಟು, ಕೈ ತುಂಬ ಹಸಿರು ಬಳೆ ತೊಟ್ಟು, ನಾನಾ ಬಗೆಯ ಭಕ್ಷ್ಯಗಳ ಮಧ್ಯೆ ಕೂತಿರುವ ಮೇಘನಾ. ಹೆಂಗಸರು ಹಚ್ಚಿದ ಅರಿಶಿನ ಕೆನ್ನೆಯ ಹೊಳಪು ಹೆಚ್ಚಿಸಿದೆ. ಅಕ್ಷತೆ ಹೊಸ ಭರವಸೆ ತುಂಬುವಂತಿದೆ. ಮಕ್ಕಳು ಮಂಟಪದ ತುಂಬ ಓಡಾಡಿ ಖುಷಿ ಹೆಚ್ಚಿಸುತ್ತಿದ್ದಾರೆ. ಎಂಟು ತಿಂಗಳ ತುಂಬು ಗರ್ಭಿಣಿ ಮೇಘನಾ ನಸು ನಗು ಕಂಡು ಹಿರಿಯರ ಅಧೈರ್ಯ ಕರಗಿದೆ.
![]()
ಮಗಳಿಗೆ ಏಳು ತಿಂಗಳಲ್ಲಿ ಸೀಮಂತ ಮಾಡಬೇಕಿತ್ತು. ಆದರೆ ಅನಿರೀಕ್ಷಿತ ಆಘಾತದಿಂದಾಗ ಈಗ ಎಂಟು ತಿಂಗಳು ತುಂಬಿ ಒಂಭತ್ತನೇ ತಿಂಗಳಿಗೆ ಕಾಲಿಟ್ಟಿರುವಾಗ ಅವಳ ಇಷ್ಟಪಟ್ಟರೀತಿಯಲ್ಲಿ ಸೀಮಂತ ಮಾಡುತ್ತಿದ್ದೇವೆ. ಈ ತಿಂಗಳಲ್ಲೇ ಹೆರಿಗೆ ಆಗಲಿದೆ ಅಂತ ವೈದ್ಯರು ಹೇಳಿದ್ದಾರೆ. ಅವಳು ಚಿಕ್ಕವಳು. ನಿಮ್ಮೆಲ್ಲರ ಆಶೀರ್ವಾದ ಅವಳ ಮೇಲಿರಲಿ.- ಸುಂದರ್‌ರಾಜ್, ಮೇಘನಾ ತಂದೆ
ಅಕ್ಟೋಬರ್ ತಿಂಗಳು ಚಿರು ಹುಟ್ಟಿದ ತಿಂಗಳು. ಈ ತಿಂಗಳಲ್ಲೇ ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಚಿರು ಜನ್ಮದಿನ ಅಕ್ಟೋಬರ್ ಹದಿನೇಳರಂದೇ ಸರ್ಜಾ ಕುಟುಂಬದ ಕುಡಿ ಮೇಘನಾ ಮಡಿಲು ತುಂಬುವ ಸಾಧ್ಯತೆ ಇದೆ. ಚಿರು ಮತ್ತೆ ಮಗಳಾಗಿಯೋ ಮಗನಾಗಿಯೂ ಬರುತ್ತಾರೆಂಬ ನಂಬಿಕೆ ಬರೀ ಮೇಘನಾ ಅವರದು ಮಾತ್ರವಲ್ಲ, ಸರ್ಜಾ- ಸುಂದರ್ ರಾಜ್ ಕುಟುಂಬದವರೆಲ್ಲರದು. ಕಳೆದ ನಾಲ್ಕು ತಿಂಗಳಿನಿಂದ ಚಿರು ಸಾವಿನ ನೋವಿಂದ ಹೊರಬರಲು ಹರಸಾಹಸ ಮಾಡುತ್ತಿರುವ ಮೇಘನಾಗೆ ಬದುಕಲ್ಲಿ ಸುಖದ ಬೆಳ್ಳಿಗೆರೆಯಂತಿದೆ ಒಟ್ಟಾರೆ ಸನ್ನಿವೇಶ.
"
