ಒಂದು ಕೋಟಿ ಚಂದಾದಾರರು ಅಂದರೆ...

ಕಳೆದ ಒಂಭತ್ತು ವರ್ಷಗಳ ಪಯಣ, ಹಾಕಿದ ಶ್ರಮ, ಖುಷಿ- ಕಷ್ಟಎಲ್ಲವೂ ನೆನಪಾಗುತ್ತಿದೆ. ನೆನಪಿಡಿ, 1 ಕೋಟಿ ಮಂದಿ ನೋಂದಣಿದಾರರನ್ನು ಒಳಗೊಂಡಿರುವ ದಕ್ಷಿಣ ಭಾರತದ ಏಕೈಕ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ ಲಹರಿ ಆಡಿಯೋ ಸಂಸ್ಥೆ.

ಆಡಿಯೋ ಕಂಪನಿ ಮಾಡಿದ ನಿಮಗೆ ಯೂಟ್ಯೂಬ್‌ ಮಾಡುವ ಐಡಿಯಾ ಬಂದಿದ್ದು ಹೇಗೆ?

ಡಿಜಟಲ್‌ ಕ್ರಾಂತಿಯೇ ಕಾರಣ. ಅದುಎಲ್ಲ ಕ್ಷೇತ್ರಗಳನ್ನೂ ಆವರಿಸಿದಂತೆ ಸಂಗೀತ ಕ್ಷೇತ್ರಕ್ಕೂ ಬಂತು. ಆಗ ಎಲ್ಲರು ಹೆದರಿಕೊಂಡಿದ್ದೇ ಹೆಚ್ಚು. ಇನ್ನು ಮುಂದೆ ಕ್ಯಾಸೆಟ್‌, ಸೀಡಿಗಳಿಗೆ ಕಾಲವಿಲ್ಲ ಅನ್ನುವ ಆತಂಕ ಇತ್ತು. ಆದರೆ, ರೇಡಿಯೋ, ಪತ್ರಿಕೆ, ಟೀವಿ ಹೀಗೆ ಏನೆಲ್ಲ ಬದಲಾವಣೆಗಳು ಆಗುತ್ತಿದ್ದರು ಜನ ಪತ್ರಿಕೆ ಓದುವುದನ್ನು ಬಿಡಲಿಲ್ಲ. ಹಾಗೆ ಏನೇ ಬದಲಾವಣೆ ಆದರೂ ಜನ ಹಾಡು ಕೇಳುತ್ತಾರೆ. ಅವರಿಗೆ ಹೊಸ ಮಾರ್ಗದಲ್ಲಿ ತಲುಪಿಸಬೇಕು ಎಂದುಕೊಂಡಾಗ ಲಹರಿ ಮ್ಯೂಸಿಕ್‌ ಹೆಸರಿನಲ್ಲಿ ಸಿಂಪಲ್ಲಾಗಿ ಯೂಟ್ಯೂಬ್‌ ಆರಂಭಿಸಿದ್ವಿ.

ಆರಂಭದ ದಿನಗಳಲ್ಲಿ ಪ್ರತಿಕ್ರಿಯೆಗಳು ಹೇಗಿತ್ತು?

ನಾವು ಯಾವುದೇ ನಿರೀಕ್ಷೆ ಇಲ್ಲದೆ ಮಾಡಿದ ಸಾಹಸ ಇದು. ಹೀಗಾಗಿ ಶೂನ್ಯದಿಂದ ಆರಂಭವಾಯಿತು. ಆದರೆ, ಸಂಗೀತ ಕ್ಷೇತ್ರ ಎಂಬುದು ನಮ್ಮ ಪಾಲಿಗೆ ತಾಯಿಯಂತೆ. ತಾಯಿ ಮಕ್ಕಳನ್ನು ಹೇಗೆ ಜೋಪಾನವಾಗಿ ಸಾಕಿ ಬೆಳೆಸೋತ್ತಾಳೋ ಹಾಗೆಯೇ ನಮ್ಮನ್ನು ಸಂಗೀತ ಕ್ಷೇತ್ರ ಸಾಕುತ್ತಿದೆ. 3 ವರ್ಷಗಳ ಹಿಂದೆ ಯೂಟ್ಯೂಬ್‌ ಗೋಲ್ಡ್‌ ಅವಾರ್ಡ್‌ ಬಂತು. ನಂತರ ವಜ್ರ ಡೈಮಂಡ್‌ ಅವಾರ್ಡ್‌ ಬಂತು. ಈಗ ಒಂದು ಕೋಟಿ ಸಬ್‌ ಸ್ಕೆ್ರೖಬರ್ಸ್‌ ಬಲ ಬಂದಿದೆ.

ಸಂಗೀತ ಕ್ಷೇತ್ರದಲ್ಲಿನ ನಿಮ್ಮ ಸಾಹಸಗಳ ಬೆನ್ನೆಲುಬು ಯಾರು?

ನನ್ನ ಅಣ್ಣ ಮನೋಹರ್‌ ನಾಯ್ಡು. ಅವರು ಬೆನ್ನೆಲುಬು ಎನ್ನುವುದಕ್ಕಿಂತ ಅವರೇ ಕ್ಯಾಪ್ಟನ್‌. ನನ್ನನ್ನು ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿ ಎನ್ನಬಹುದು. ಮನೋಹರ್‌ ನಾಯ್ಡು ಅವರ ಧೈರ್ಯ, ಬಂಡವಾಳ, ಯೋಜನೆಗಳೇ ಈ ಸಂಸ್ಥೆಯ ಈ ಬೆಳವಣಿಗೆಗೆ ಕಾರಣ. ಅಣ್ಣನ ಮಕ್ಕಳಾದ ನವೀನ್‌ ಕುಮಾರ್‌ ಹಾಗೂ ಚಂದ್ರು ವಿದೇಶದಲ್ಲಿ ಓದಿ ಬಂದವರು. ಅವರ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಬ್ಯುಸಿನೆಸ್‌ಗೆ ವರವಾಯಿತು.

ಸದ್ಯಕ್ಕೆ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಏನೆಲ್ಲ ಇವೆ? ನಿಮ್ಮ ಯೂಟ್ಯೂಬ್‌ ಚಾನಲ್‌ನ ಶಕ್ತಿ ಏನು?

6500 ಹಾಡುಗಳಿವೆ, 4 ಸಾವಿರ ಚಿತ್ರಗಳ ಟೀಸರ್‌- ಟ್ರೇಲರ್‌ಗಳು ಇವೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು, ಮಲಯಾಳಂಗೂ ವಿಸ್ತರಣೆ ಆಗಿರುವುದು. ಪ್ರತಿ ಭಾಷೆಯಲ್ಲೂ ಒಂದೊಂದು ತಂಡವಿದ್ದು, ಪ್ರತಿ ತಂಡದಲ್ಲೂ 20 ರಿಂದ 25 ಮಂದಿ ಕೆಲಸ ಮಾಡುತ್ತಿದ್ದಾರೆ.

ಇಲ್ಲಿವರೆಗೂ ಡಿಜಿಟಲ್‌ ಮಾರುಕಟ್ಟೆಗಾಗಿಯೇ ಎಷ್ಟುಹೂಡಿಕೆ ಮಾಡಿದ್ದೀರಿ?

ಒಟ್ಟು 1 ಲಕ್ಷ 26 ಸಾವಿರ ಹಾಡುಗಳು ಲಹರಿ ಆಡಿಯೋ ಸಂಸ್ಥೆಯಲ್ಲಿವೆ. ಇಲ್ಲಿವರೆಗೂ 250 ರಿಂದ 300 ಕೋಟಿ ಹೂಡಿಕೆ ಮಾಡಿದ್ದೇವೆ. ‘ಬಾಹುಬಲಿ’ ಚಿತ್ರದ ಆಡಿಯೋ ಹಕ್ಕುಗಳಿಗೆ 10 ಕೋಟಿ 60 ಲಕ್ಷ, ಮಹೇಶ್‌ ಬಾಬು ಚಿತ್ರಗಳ ಆಡಿಯೋಗೆ ಕನಿಷ್ಠ 5 ಕೋಟಿ ವೆಚ್ಚ... ಹೀಗೆ ಪ್ರತಿ ಹಂತದಲ್ಲೂ ರಿಸ್ಕ್‌ ತೆಗೆದುಕೊಂಡೇ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇವೆ. ಭಾವಗೀತೆಗಳಿಗಾಗಿಯೇ ಪ್ರತ್ಯೇಕವಾಗಿ ಯೂಟ್ಯೂಬ್‌ ಚಾನಲ್‌ ಮಾಡಿದ್ದೇವೆ. ಇದು ಕೂಡ ಭಾರತೀಯ ಚಿತ್ರರಂಗದಲ್ಲೇ ಮೊದಲ ಸಾಹಸ.

ನಿಮ್ಮ ಪ್ರಕಾರ ಆಡಿಯೋ ಕ್ಷೇತ್ರ ನಷ್ಟದ ಕ್ಷೇತ್ರವಲ್ಲ?

ನಮ್ಮ ಪ್ರಾಮಾಣಿಕ ಪ್ರಯತ್ನ, ಆಸಕ್ತಿ, ಕೆಲಸದ ಮೇಲೆ ಈ ಪ್ರಶ್ನೆಗೆ ಉತ್ತರ ನಿಂತಿರುತ್ತದೆ. ಯಾವುದೇ ಕ್ಷೇತ್ರವನ್ನು ಲಾಭ- ನಷ್ಟದ ಲೆಕ್ಕಾಚಾರ ಮೊದಲೇ ಹಾಕಬಾರದು. ನಮ್ಮ ಕೆಲಸ ನಾವು ಮಾಡಬೇಕು. ಏನೇ ಬದಲಾವಣೆ ಆದರೂ ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅದೇ ನಮ್ಮ ತತ್ವ.