ಕೊರೋನಾ ವೈರಸ್ ಎರಡನೇ ಅಲೆಯಿಂದ ಅದೆಷ್ಟೋ ಮಂದಿ ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ, ಸರಿಯಾದ ಸಮಯದಲ್ಲಿ ಆ್ಯಂಬುಲೆನ್ಸ್ ಸಿಗದೆಯೂ ಜೀವ ಬಿಡುತ್ತಿದ್ದಾರೆ. ಜನರ ಪರಿಸ್ಥಿತಿ ನೋಡಲಾಗದೇ 'ಐರಾವನ್' ಚಿತ್ರತಂಡ ಸಹಾಯಕ್ಕೆ ಮುಂದಾಗಿದೆ. ನಟ ಜಯರಾಮ್ ಕಾರ್ತಿ, ವಿವೇಕ್ ಹಾಗೂ ಅದ್ವಿತಿ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್‌ ಚಿತ್ರತಂಡ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್‌ಗಳನ್ನು ಬ್ಯಾಟರಾಯಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ನೀಡಿದ್ದಾರೆ. ಸುಮಾರು 10 ಸಾವಿರ ಕೋವಿಡ್‌ ಮೆಡಿಕಲ್ ಕಿಟ್ ಹಾಗೂ ಔಷಧಿಗಳನ್ನು ಪೂರೈಸಿದ್ದಾರೆ. ಚಿತ್ರತಂಡದ ಈ ಮಹತ್ವದ ಕೆಲಸ ಇತರರಿಗೂ ಮಾದರಿ ಆಗಲಿದೆ. 

ಕವಿರಾಜ್ 'ಉಸಿರು' ತಂಡದಿಂದ ಉಚಿತ ಆಕ್ಸಿಜನ್ ಕೇರ್ ಸೆಂಟರ್! 

'ದಯವಿಟ್ಟು ನಾವೂ ಹಳ್ಳಿಗಳನ್ನು ನಿರ್ಲಕ್ಷ್ಯಿಸುವುದು ಬೇಡ.  ಸಿಟಿಯಲ್ಲಿರುವವರಿಗಿಂತ ಅವರೇ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿರುವುದು. ಸೋಂಕಿನ ಬಗ್ಗೆ ಅರಿವು ಮೂಡಿಸಿ ನಾವು ಅವರ ಸಹಾಯಕ್ಕೆ ನಿಲ್ಲಬೇಕು. ಈ ಸಮಯಲ್ಲಿ ಹೇಗಿರಬೇಕು, ಏನು ಮಾಡಬೇಕು ಎಂದು ತಿಳಿಸಿ ಹೇಳಬೇಕು,'ಎಂದು ಜೆಕೆ ಬರೆದುಕೊಂಡಿದ್ದಾರೆ. 

ಕನ್ನಡದ ಅನೇಕ ಸ್ಟಾರ್ ನಟರೂ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ನಟ ಉಪೇಂದ್ರ ನೇತೃತ್ವದಲ್ಲಿ ಸಾವಿರಾರು ಜನರಿಗೆ, ಚಿತ್ರತಂಡದ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ನಟ ಅರ್ಜುನ್ ಗೌಡ ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿದ್ದಾರೆ.  ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಎರಡು ಆಕ್ಸಿಜನ್ ಬಸ್‌ಗಳನ್ನು ನೀಡಿದ್ದಾರೆ. ನಟ ಶ್ರೀಮುರಳಿ ದಿನವೂ 5 ಸರ್ಕಾರಿ ಆಸ್ಪತ್ರೆಗಳಿಗೆ ಆಹಾರ ನೀಡುತ್ತಿದ್ದಾರೆ. ನಟಿ ಶುಭಾ ಪೂಂಜಾ ಬಿಗ್ ಬಾಸ್‌ನಿಂದ ಹೊರ ಬಂದ ನಂತರ ಕಟ್ಟಡ ಕಾರ್ಮಿಕರಿಗೆ ಫುಡ್‌ ಕಿಟ್ ವಿತರಿಸಿದ್ದಾರೆ.