ದರ್ಶನ್ ಅಂದ್ರೆ ಪರ್ಫೆಕ್ಟ್ ಕೋ ಸ್ಟಾರ್: ಆಶಾ ಭಟ್
ಬಾಲಿವುಡ್ನಿಂದ ಕನ್ನಡಕ್ಕೆ ಬಂದಿರುವ ಕನ್ನಡತಿ ಆಶಾ ಭಟ್. ತಮ್ಮ ಮೊದಲ ಸಿನಿಮಾ ‘ರಾಬರ್ಟ್’ಗೆ ಶೂಟಿಂಗ್ ಮುಗಿಸಿದ್ದು, ಆ ಕುರಿತು ಅನುಭವ ಹೇಳಿಕೊಂಡಿದ್ದಾರೆ. ಜತೆಗೆ ಚಿತ್ರದ ಹಲವು ಆಸಕ್ತಿಕರ ಅಂಶಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ನಟಿ ಆಶಾ ಭಟ್.
ಆರ್ ಕೇಶವಮೂರ್ತಿ
ರಾಬರ್ಟ್ ಚಿತ್ರೀಕರಣದ ಅನುಭವ ಹೇಗಿತ್ತು?
ಮಾತಿನಲ್ಲಿ ಹೇಳಲಾಗದಷ್ಟುಖುಷಿ ಕೊಟ್ಟಿದೆ. ಯಾಕೆಂದರೆ ನನ್ನ ಮೊದಲ ಕನ್ನಡ ಸಿನಿಮಾ. ಸಹಜವಾಗಿ ಮೊದಲ ಹೆಜ್ಜೆಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಹಾಗೆ ನನಗೆ ರಾಬರ್ಟ್ ಸಿನಿಮಾ ಸೆಟ್ಟು ಹಲವು ಸಂಗತಿಗಳನ್ನು ನನ್ನ ನೆನಪಿನಲ್ಲಿ ಉಳಿಸಿವೆ. ಬೆಂಗಳೂರು, ಮುಂಬಾಯಿ, ವಾರಣಾಸಿ... ಹೀಗೆ ಹಲವು ಕಡೆ ಶೂಟಿಂಗ್ ಮಾಡಿದ್ದು ಖುಷಿ ಕೊಟ್ಟಿದೆ. ಒಂದು ದೊಡ್ಡ ಚಿತ್ರಕ್ಕೆ ನಾನು ಜತೆಯಾಗಿದ್ದೇನೆ ಎಂಬುದೇ ಮೊದಲ ಸಂಭ್ರಮ.
ಹಾಗೆ ನಿಮಗೆ ಮರೆಯಲಾಗದ ನೆನಪುಗಳು ಅಂದರೆ ಯಾವುದು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹ. ನಿರ್ದೇಶಕ ತರುಣ್ ಸುಧೀರ್ ಅವರ ಬೆಂಬಲ. ಜತೆಗೆ ಇಡೀ ಸೆಟ್ ಪ್ರತಿ ದಿನ ಪಾಸಿಟೀವ್ ಆಗಿತ್ತು. ಎಂದೂ ಮೂಡ್ ಆಫ್ ಆಗಿದ್ದೇ ಇಲ್ಲ. ಚಿತ್ರೀಕರಣದ ಕೊನೆಯ ದಿನ. ಕೊನೆಯ ದೃಶ್ಯ ಎಂದಾಗ ‘ಅಯ್ಯೋ ಇಷ್ಟುಬೇಗ ಮುಗಿಯಿತೇ’ ಎಂದುಕೊಂಡೆ. ಅಷ್ಟರ ಮಟ್ಟಿಗೆ ಭಾವನಾತ್ಮಕ ನಂಟು ಮೂಡಿಸಿದ ಸಿನಿಮಾ.
ನಟ ದರ್ಶನ್ ಅವರನ್ನು ನೀವು ಕಂಡಂತೆ ಹೇಗೆ?
ಎಲ್ಲ ವಿಷಯಗಳು ಗೊತ್ತಿರುವ ನಟ. ಯಾವ ವಿಷಯದ ಬಗ್ಗೆ ಮಾತನಾಡಿದರೂ ಮಾತನಾಡುತ್ತಾರೆ. ಸಿನಿಮಾ, ಊಟ, ಜೀವನ, ಕೃಷಿ, ಪ್ರಾಣಿ ಪ್ರೀತಿ, ಸ್ನೇಹ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ತಾನು ದೊಡ್ಡ ಸ್ಟಾರ್ ನಟನೆ ಎಂಬುದನ್ನು ಯಾವತ್ತೂ ಸೆಟ್ನಲ್ಲಿ ತೋರಿಸಿಕೊಂಡವರಲ್ಲ. ಎಲ್ಲರ ಜತೆಗೂ ಬೆರೆಯುತ್ತಿದ್ದರು. ಎಲ್ಲರನ್ನೂ ಇಷ್ಟಪಡುವ ಮತ್ತು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವ ವ್ಯಕ್ತಿ. ನನ್ನ ಪ್ರಕಾರ ದರ್ಶನ್ ಅವರು ಪರ್ಫೆಕ್ಟ್ ಕೋ ಸ್ಟಾರ್ ಎನ್ನಬಹುದು.
ಚಿತ್ರದಲ್ಲಿ ನಿಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ಏನು ತಲುಪುತ್ತದೆ?
ಚಿತ್ರದಲ್ಲಿ ನನ್ನ ಪಾತ್ರ ಏನೆಂಬುದು ಗುಟ್ಟು ಬಿಡಿಸುವ ಪರೋಕ್ಷ ಪ್ರಯತ್ನ ಮಾಡುತ್ತಿದ್ದೀರಿ.... ಹ್ಹಹ್ಹಹ್ಹ. ನಿರ್ದೇಶಕರು ಹೇಳುವ ತನಕ ನನ್ನ ಪಾತ್ರ ಏನೆಂದು ಹೇಳಲಾರೆ. ಆದರೆ, ಒಳ್ಳೆಯ ಪಾತ್ರ ಎಂಬುದು ಮಾತ್ರ ನಿಜ. ನನ್ನ ಪಾತ್ರ ನೋಡಗರಿಗೆ ಯಾವ ರೀತಿ ರಿಜಿಸ್ಟರ್ ಆಗುತ್ತದೆ ಎಂಬುದನ್ನು ಸಿನಿಮಾ ಬಂದ ಮೇಲೆ ಗೊತ್ತಾಗಲಿದೆ.
ನಿಮ್ಮ ಪಾತ್ರದ ಬಗ್ಗೆ ನಿಮಗೆ ಇರುವ ನಿರೀಕ್ಷೆ ಏನು?
ನನಗೆ ಕೇವಲ ನನ್ನ ಪಾತ್ರದ ಬಗ್ಗೆ ಮಾತ್ರ ನಿರೀಕ್ಷೆಗಳು ಇಲ್ಲ. ಯಾಕೆಂದರೆ ಇದು ದೊಡ್ಡ ಸಿನಿಮಾ. ನಾನು ಅದರ ಒಂದು ಸಣ್ಣ ಭಾಗ. ಆದರೆ, ಇಡೀ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಅಂತ ಧೈರ್ಯವಾಗಿ ಹೇಳಬಲ್ಲ. ಅದರ ಜತೆಗೆ ನಿರ್ದೇಶಕರು ಹೇಳಿದಂತೆ ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆಂಬ ನಂಬಿಕೆ ಇದೆ. ಜನ ಇಷ್ಟಪಡುತ್ತಾರೆ. ನನ್ನ ಪಾತ್ರಕ್ಕೆ ಜೀವ ತುಂಬಿದ್ದೇನೆಂಬ ನಂಬಿಕೆ ಇದೆ.
ರಾಬರ್ಟ್ ಚಿತ್ರವನ್ನು ನೀವು ಹೇಗೆ ಎದುರು ನೋಡುತ್ತಿದ್ದೀರಿ?
ಎಲ್ಲ ಪ್ರೇಕ್ಷಕರಂತೆ, ಅಭಿಮಾನಿಗಳಂತೆ ನಾನೂ ಕೂಡ ಕುತೂಹಲದಿಂದ ಕಾಯುತ್ತಿದ್ದೇನೆ. ಯಾಕೆಂದರೆ ನಮ್ಮ ನಮ್ಮ ಪಾತ್ರಗಳ ಹೊರತಾಗಿ ಚಿತ್ರದ ಉಳಿದ ಯಾವ ವಿವಗಳು ನಿರ್ದೇಶಕರು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಸಿನಿಮಾ ಹೇಗೆ ಬಂದಿರುತ್ತದೆ ಎನ್ನುವ ಕುತೂಹಲ ಆ ಚಿತ್ರದ ನಟಿಯಾಗಿಯೂ ನನಗೂ ಇದೆ.
ಚಿತ್ರದ ಟೀಸರ್, ಫಸ್ಟ್ ಲುಕ್ ನೋಡಿದಾಗ ನಿಮಗೆ ಅನಿಸಿದ್ದೇನು?
ಪ್ರೀತಿಯಿಂದ ಕಷ್ಟಪಟ್ಟರೆ ಇಂಥ ಸಿನಿಮಾಗಳನ್ನು ಮಾಡಕ್ಕೆ ಸಾಧ್ಯ ಅನಿಸಿತು. ಚಿತ್ರದ ಪೋಸ್ಟರ್, ಟೀಸರ್ ನೋಡಿದ ನನ್ನ ಆತ್ಮೀಯರು, ನೆಂಟರು ತುಂಬಾ ಮೆಚ್ಚಿಕೊಂಡರು. ಕನ್ನಡದಲ್ಲಿ ನನಗೆ ಇಷ್ಟುದೊಡ್ಡ ಸಿನಿಮಾ ಇಷ್ಟುಬೇಗ ಸಿಗುತ್ತದೆ ಅಂದುಕೊಂಡಿರಲಿಲ್ಲ.
ರಾಬರ್ಟ್ ಇಷ್ಟುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಾಗ ನಿಮಗೆ ಬೇರೆ ಅಫರ್ಗಳು ಆಗಲೇ ಬಂದಿರಬೇಕಲ್ಲ?
ಖಂಡಿತ ಬಂದಿವೆ. ಆದರೂ ನಾನು ರಾಬರ್ಟ್ ಸಿನಿಮಾ ಮುಗಿಯುವ ತನಕ ಬೇರೆ ಯಾವ ಚಿತ್ರದ ಬಗ್ಗೆಯೂ ಯೋಚನೆ ಮಾಡಲಾರೆ. ಯಾಕೆಂದರೆ ಇದು ನನ್ನ ಮೊದಲ ಸಿನಿಮಾ. ಅದು ಬಿಡುಗಡೆಗೆ ಹತ್ತಿರ ಬಂದಾಗ ಪ್ರಚಾರ ಸೇರಿದಂತೆ ಬೇರೆ ಬೇರೆ ಕೆಲಸಗಳು ಇರುತ್ತವೆ. ಹೀಗಾಗಿ ಸಂಪೂರ್ಣವಾಗಿ ನಾನು ‘ರಾಬರ್ಟ್’ನಲ್ಲಿ ತೊಡಗಿಸಿಕೊಂಡಿರುವೆ. ಈ ಚಿತ್ರದ ನಂತರವೇ ಬೇರೆ ಚಿತ್ರಗಳ ವಿಚಾರ.
"