13 ವರ್ಷದಿಂದ RCB ಕಪ್‌ ಗೆಲ್ತಿಲ್ಲ, ಯಾಕೆಂದು ಕ್ಲಿಯರ್ ಕ್ಲಾರಿಟಿ ಕೊಟ್ಟ ನಿರ್ದೇಶಕ ಕವಿರಾಜ್!

ರಸ್ತೆ, ಪಬ್, ಮೊಬೈಲ್ ಸ್ಟೇಟಸ್‌, ಅಭಿಮಾನಿಗಳ ಟೀ ಶರ್ಟ್‌ ಎಲ್ಲಿ ನೋಡಿದರೂ ಆರ್‌ಸಿಬಿ ತಂಡದ್ದೇ ಹವಾ. ಈ ಸಲ ಕಪ್ ನಮ್ದೇ ಎನ್ನುವ ಆಶಾ ಭಾವನೆಯಲ್ಲಿ ಪ್ರತಿ ಐಪಿಎಲ್‌ ಸೀಸನ್‌ ಕಳೆಯುತ್ತಿದ್ದೇವೆ, ಒಂದು ಸೀಸನ್‌ ಕೂಡ ಗೆಲ್ಲದೆ ಇರಲು ಕಾರಣವೇನು ಎಂದು ನಿರ್ದೇಶಕ ಕವಿರಾಜ್‌ ವಿವರಿಸಿದ್ದಾರೆ.
 

Kannada Director Kaviraj explains why RCB fails to hold the winner trophy  every season vcs

ಆರ್‌ಸಿಬಿ ಒಂದು ಮ್ಯಾಚ್‌ ಗೆದ್ದರೆ ಸಾಕು ಈ ವರ್ಷದ ಕಪ್ ನಮ್ದೇ ಎನ್ನುವಷ್ಟು ಖುಷಿಯಾಗಿರುತ್ತಾರೆ ಬೆಂಗಳೂರಿನ ಮಂದಿ. ಫಿನಾಲೆ ತಲುಪಿದರೂ ಟ್ರೋಫಿ ನಮ್ಮ ಕೈ ಸೇರುವುದು ಕಷ್ಟವೇ. ಬರೋಬ್ಬರಿ 13 ವರ್ಷಗಳಿಂದ ಹೀಗೆ ಆಗುತ್ತಿರುವುದಕ್ಕೆ ಕಾರಣವೇನು ಎಂದು ನಿರ್ದೇಶಕ ಕಮ್ ಗೀತಾ ರಚನೆಕಾರ ಕವಿ ರಾಜ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನೇರವಾಗಿ ವಿಷಯಕ್ಕೆ ಬರುವುದಾದರೆ ಹದಿಮೂರು ವರ್ಷಗಳಿಂದ ಈ ಸಲ ಕಪ್ ನಮ್ದೇ ಎಂದು ಕನವರಿಸಿದವರ ಪೈಕಿ ನಾನು ಒಬ್ಬ. ಈವರೆಗೂ ಅದು ಕನಸಾಗೇ ಉಳಿದಿರುವ ಕಾರಣ RCB ತಂಡದ ಮ್ಯಾನೇಜ್ಮೆಂಟಿಗೆ ಹದಿಮೂರು ವರ್ಷಗಳಿಂದ ತಾವೆಲ್ಲಿ ಎಡವುತ್ತಿದ್ದೇವೆ ಎಂಬ ಸ್ಪಷ್ಟತೆ ಇಲ್ಲದಿರುವುದು. ಹನ್ನೊಂದು ಆಟಗಾರರ ಸಮರ್ಥ ಸಂಯೋಜನೆಯಿಂದ ಗೆಲ್ಲಬೇಕಾದ ಆಟವನ್ನು ಇಬ್ಬರೇ ಇಬ್ಬರು ಸ್ಟಾರ್ ಆಟಗಾರರು ಗೆದ್ದು ಕೊಟ್ಟುಬಿಡುತ್ತಾರೆ ಎಂದು ನಮ್ಮಂತೆ ಇಂದಿಗೂ ಅವರು ಕೂಡಾ ನಂಬಿರುವುದು.

Kannada Director Kaviraj explains why RCB fails to hold the winner trophy  every season vcs
      
 RCBಯ ಮೊದಲ ಕೊರತೆ ಎಂದರೆ ಆರಂಭ ಮತ್ತು ಮುಖ್ಯವಾಗಿ ಡೆತ್ ಓವರ್ ಗಳಲ್ಲಿ ಕರಾರುವಾಕ್ಕಾಗಿ ಬೌಲಿಂಗ್ ಮಾಡೀ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಬಹುದಾದ  'A+' ಶ್ರೇಣಿಯ ಒಬ್ಬ  ಏಸ್ ವೇಗದ ಬೌಲರ್.  ಬುಮ್ರಾ, ಕಗಿಸೋ ರಬಡಾ, ಜೋಫ್ರಾ ಆರ್ಚರ್ , ಭುವನೇಶ್ವರ್ ಕುಮಾರ್ , ಪ್ಯಾಟ್ ಕಮಿನ್ಸ್ ತರಹದ ಪಂದ್ಯದ ಗತಿ ಬದಲಿಸಬಲ್ಲ ಸ್ಟ್ರೈಕ್ ಬೌಲರ್ ಒಬ್ಬರ ಕೊರತೆ RCB ಗೆ ಐಪಿಎಲ್ ಆರಂಭ ದಿಂದಲೂ ಇದ್ದದ್ದೇ. ಡೇಲ್ ಸ್ಟೈನ್, ಮಿಚೆಲ್ ಸ್ಟಾರ್ಕ್ ತರಹದ ಇದೇ ಶ್ರೇಣಿಯ ಬೌಲರ್ ಗಳನ್ನು RCB ಕೆಲವು ಸೀಸನ್ ನಲ್ಲಿ ಕೊಂಡು ಕೊಂಡಿದ್ದರು ಅದು ಅವರ ಕ್ಷಮತೆ,ನಿಖರತೆ,ಕರಿಯರ್ ಗ್ರಾಫ್ ಇಳಿಮುಖವಾಗುತ್ತಿದ್ದ ಹೊತ್ತಿನಲ್ಲಿ. ಸಿರಾಜ್,ಸೈನಿ, ಉಮೇಶ್ ಯಾದವ್ ಕೆಲವೊಂದು ಪಂದ್ಯಗಳಲ್ಲಿ ಮಿಂಚಬಹುದಾದರೂ ಯಾವುದೇ ಹೊತ್ತಿನಲ್ಲೂ ನಂಬಿಕೆಯಿಂದ ಚೆಂಡು ಕೈಗಿಡಬಹುದಾದ  'A+'  ಶ್ರೇಣಿಯ ಗುಣಮಟ್ಟ, ಸ್ಥಿರತೆ ಅವರಿಗಿನ್ನು ಸಿದ್ದಿಸಿಲ್ಲ. ಈ ಬಾರಿ ಬೆರಗಾಗುವಷ್ಟು ದೊಡ್ಡ ಮೊತ್ತ ಕೊಟ್ಟು ಖರೀದಿಸಿರುವ ಕೈಲ್ ಜೆಮಿಸನ್ ಕೂಡಾ ಇನ್ನೂ A+ ಮಟ್ಟದ ಬೌಲರ್ ಅಲ್ಲಾ.

ಇದ್ಯಾವುದ್ರೀ ಕರ್ಮಾ ದುಸ್ಸೇರಾ, ದಿವಾಲಿ?; ಕವಿರಾಜ್ ಆಕ್ರೋಶ 
    
RCBಯ ಇನ್ನೊಂದು ಬಹುಮುಖ್ಯ ಕೊರತೆ ಒಬ್ಬ 'ಎ +'  ಶ್ರೇಣಿಯ ಫಿನಿಶರ್ ಆಗಬಲ್ಲ ಆಲ್ರೌಂಡರಿನದು.  ಹಾರ್ದಿಕ್ ಪಾಂಡ್ಯ,ಡ್ವೇನ್ ಬ್ರಾವೋ, ಕೈರನ್ ಪೊಲಾರ್ಡ್,ಬೆನ್ ಸ್ಟೋಕ್ಸ್ , ರವೀಂದ್ರ ಜಡೇಜಾ ಅವರಂತೆ ಖಡಕ್ಕಾಗಿ ಕೆಲವು ಓವರ್ ಬೌಲ್ ಮಾಡಿ ಐದು ,ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಮುಲಾಜಿಲ್ಲದೆ ಸ್ಲಾಗ್ ಓವರ್ ಗಳಲ್ಲಿ ಪದೇ ಪದೇ ಚೆಂಡನ್ನು ಬೌಂಡರಿ ಆಚೆ ಅಟ್ಟಬಲ್ಲ ಖದರ್ ಇರುವವರು, ಮೊದಲು ಬ್ಯಾಟಿಂಗ್ ಮಾಡುತ್ತಿದ್ದರೆ ಅಂದುಕೊಂಡಿದ್ದಕ್ಕಿಂತ ಇಪ್ಪತ್ತೈದು, ಮೂವತ್ತು ರನ್ಗಳ ಹೆಚ್ಚು ಗುರಿ ನೀಡಬಲ್ಲವರು ಅಥವಾ ಗುರಿ ಬೆನ್ನಟ್ಟುವಾಗ ಕೊನೆಯ ಮೂರ್ನಾಲ್ಕು ಓವರ್ ಗಳಲ್ಲಿ ಅರವತ್ತು ಎಪ್ಪತ್ತು ರನ್ ಅವಶ್ಯಕತೆ ಇದ್ದರೂ ಅದನ್ನು ಸಾಧ್ಯವಾಗಿಸಬಲ್ಲ  ತಾಕತ್ತಿರುವ ಆಟಗಾರನ ಕೊರತೆ RCB ಗೆ ಮೊದಲಿಂದಲೂ ಇದೆ. ಇರೋದರಲ್ಲಿ ಈ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಮೇಲೆ ಕಳೆದ ಆವೃತ್ತಿಗಿಂತ ಈ ಬಾರಿ ಹೆಚ್ಚು ಸುಧಾರಿತ ಆಟಗಾರನಾಗಿರುವುದರಿಂದ ಸ್ವಲ್ಪ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೂ ಕೊಹ್ಲಿ ,ಎಬೀಡಿ ಎಂಬಿಬ್ಬರು ಅದ್ಭುತ ಬ್ಯಾಟ್ಸ್ಮನ್ಗಳನ್ನು ಬುಟ್ಟಿಗೆ ಹಾಕಿಕೊಂಡ ಗರ್ವದಲ್ಲಿ ಮೈ ಮರೆತು ಸೂಕ್ತ ಸಂಯೋಜನೆಯಲ್ಲಿ ಎಡವಿದ್ದೇ ಆರ್ಸಿಬಿಯ ಹದಿಮೂರು ವರ್ಷದ ವನವಾಸಕ್ಕೆ ಕಾರಣ.

Kannada Director Kaviraj explains why RCB fails to hold the winner trophy  every season vcs
    
ಹದಿಮೂರು ವರ್ಷಗಳಿಂದಲೂ ಮುಂದುವರಿದ ಮೂರನೇ ಸಮಸ್ಯೆ ದೇಶೀಯ ಯುವ ಉದಯೋನ್ಮುಖ ಆಟಗಾರರ ಆಯ್ಕೆ. RCB ಆರಿಸಿಕೊಂಡ ಗುರುಕೀರತ್ ಸಿಂಗ್ , ಮನ್ ಪ್ರೀತ್ ಸಿಂಗ್, ಪವನ್ ನೇಗಿ  ಮುಂತಾದ ಹೆಚ್ಚಿನ ದೇಶೀಯ ಯುವ ಆಟಗಾರರ ಕಥೆ 'ಮದುವೆ ಗಂಡಿಗೆ ಅದೇ ಇಲ್ಲ' ಅನ್ನುವಂತದ್ದೇ.  

'ಕೊತ್ಮೀರಿ ಸೊಪ್ಪು' ವಿಡಿಯೋ ವೈರಲ್; ಸಾರ್ವಜನಿಕರ ಗಮನ ಸೆಳೆದ ಕವಿರಾಜ್‌ ಪೋಸ್ಟ್‌! 

ರಿಶಬ್ ಪಂತ್ ,ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತೆವಾಟಿಯಾ, ಶುಬ್ಮನ್ ಗಿಲ್ ಅವರಂತಹ ಒಬ್ಬೇ ಒಬ್ಬ 'A+' ಶ್ರೇಣಿಯ ಸ್ಫೋಟಕ ಯುವ ಉದಯೋನ್ಮುಖ ಆಟಗಾರ ನಮಗೆ ದಕ್ಕಲಿಲ್ಲ. ಇನ್ನು ನಮ್ಮ ರಾಜ್ಯದವರಾಗಿ ಬೇರೆಯ ಫ್ರಾಂಚೈಸಿಗಳಿಗೆ ಪಂದ್ಯ ಗೆಲ್ಲಿಸುವ ಹಲವು ಪ್ರದರ್ಶನ ನೀಡುತ್ತಿರುವ ಕೆ ಎಲ್ ರಾಹುಲ್, ಉತ್ತಪ್ಪ,ಮನೀಶ್ ಪಾಂಡೆ, ಮಾಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಗೌತಮ್ , ಪ್ರಸಿದ್ಧ್ ಕೃಷ್ಣ ಮುಂತಾದವರನ್ನು ನಮ್ಮ ಮ್ಯಾನೇಜ್ಮೆಂಟ್ ಕೊಂಡುಕೊಳ್ಳಲಿಲ್ಲ, ಕೊಂಡರೂ ಉಳಿಸಿಕೊಳ್ಳಲಿಲ್ಲ‌. ಫಿಟ್ನೆಸ್, ರನ್ನಿಂಗ್ ಬಿಟ್ವೀನ್ ದ ವಿಕೆಟ್ ಮುಂತಾದ ಏನೇ ಸಮಸ್ಯೆ ಇದ್ದರೂ ಕ್ರಿಸ್ ಗೇಲ್ ಒಮ್ಮೆ ಚೆಂಡನ್ನು ಕನೆಕ್ಟ್ ಮಾಡಲು ಶುರು ಮಾಡಿದನೆಂದರೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸೋ ಸಾಮರ್ಥ್ಯ ಇದ್ದವನು ಅವರನ್ನು ಒಂದು ಸೀಸನ್ ವಿಫಲವಾದಾಗ ಬಿಟ್ಟು ಕೊಟ್ಟು ಬಿಟ್ಟೆವು. ಹೀಗೆ ಅವಸರದಲ್ಲಿ ಬಿಟ್ಟು ಕೊಟ್ಟವರಲ್ಲಿ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯ್ನಿಸ್ ಅಂತಹ ಅದ್ಭುತ ಆಟಗಾರರು ಇದ್ದರು. 

ಒಟ್ಟಾರೆ ಈ ಕೊರತೆಗಳು ಈ ಬಾರಿಯು ಹಾಗೇ ಇವೆಯಾದರೂ, ಇರುವುದರಲ್ಲಿ ಆಲ್ರೌಂಡರ್ ಫಿನಿಶರ್ ಜಾಗಕ್ಕೆ ಮ್ಯಾಕ್ಸ್ ವೆಲ್ ಬಂದಿರುವುದು ಒಂದು ಆಶಾದಾಯಕ ಅಂಶ ,ಕಳೆದ ಬಾರಿ ನೀರಸ ಪ್ರದರ್ಶನ ನೀಡಿದ್ದ ಮ್ಯಾಕ್ಸ್ ವೆಲ್ ಅವರಲ್ಲಿ ಇನ್ನೂ 'ಗ್ಯಾಸ್' ಉಳಿದಿದ್ದು ಈ ಬಾರಿ ಸಿಡಿದರೆ ಕಪ್ ನಮ್ಮದಾಗುವ ಒಂದಷ್ಟು ಆಸೆ ಇಟ್ಟುಕೊಳ್ಳಬಹುದು .  ಏನೇ ಆದರೂ ಮತ್ತೊಂದು ಐಪಿಎಲ್ ಹಬ್ಬ ಇಂದಿನಿಂದ ಆರಂಭವಾಗುತ್ತಿದೆ. ಈ ಎಲ್ಲಾ ಕೊರತೆಗಳ ನಡುವೆಯೂ ಈ ಬಾರಿ ಕಪ್ ನಮ್ಮದಾಗಲಿ  ಎಂಬುದೇ ನಮ್ಮಂತ ಕೋಟ್ಯಾಂತರ ಅಭಿಮಾನಿಗಳ ಆಶಯ.

Latest Videos
Follow Us:
Download App:
  • android
  • ios