ರೈತರಿಂದ ತರಕಾರಿ ಕೊಂಡುಕೊಂಡ ಉಪ್ಪಿಕಳೆದ ಒಂದು ವಾರದಿಂದ ರೈತರಿಂದ ಅಗತ್ಯ ತರಕಾರಿಗಳನ್ನು ಕೊಂಡು ಕಷ್ಟದಲ್ಲಿದ್ದವರಿಗೆ ಉಚಿತವಾಗಿ ನೀಡುವ ಉಪೇಂದ್ರ ಅವರ ಪ್ರಯತ್ನ ಯಶಸ್ವಿಯಾಗಿ ಜಾರಿಯಾಗಿದೆ. ಲಾಕ್‌ಡೌನ್‌ನಿಂದ ಬೆಳೆದ ತರಕಾರಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಉಪ್ಪಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿದ್ದಾರೆ. ಸದ್ಯ ರೈತರಿಂದ ಕೊಂಡ ತರಕಾರಿ ಜತೆಗೆ ದಿನಸಿ ಕಿಟ್‌ಗಳನ್ನು ತಮ್ಮ ಮನೆಯ ಬಳಿಯೇ ವಿತರಣೆ ಮಾಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡಿರುವ, ಈಗ ಸಂಕಷ್ಟದಲ್ಲಿರುವ ಹಲವು ಕುಟುಂಬಗಳಿಗೆ ನೆರವಾಗಿದೆ.

ಹಿರಿಯ ನಟ ಅಮರನಾಥ್‌ಗೆ ಫುಡ್‌ಕಿಟ್‌ ಹಾಗೂ ಮೆಡಿಸಿನ್‌ ನೀಡಿದ ಭುವನ್ ಪೊನ್ನಣ್ಣ! 

ಕಿಟ್ ನೀಡಿದ ಶುಭಾ ಪೂಂಜಾ ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಮೇಲೆ ನಟಿ ಶುಭಾ ಪೂಂಜಾ ಕೂಡ ತಮ್ಮದೇ ಆದ ರೀತಿಯಲ್ಲಿ ಬಡವರಿಗೆ ನೆರವಾಗುತ್ತಿದ್ದಾರೆ. ದಿನಗೂಲಿ ಮಾಡಿಕೊಂಡು ಜೀವನ ಮಾಡುತ್ತಿರುವವರಿಗೆ ತಮ್ಮ ಮನೆಯ ಬಳಿಯೇ ಕರೆದು ಅಗತ್ಯ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ. ‘ನಮ್ಮ ಮನೆಯ ಬಳಿ ಇರುವ ಕಟ್ಟಡ ಕಾಮಿಕರಿಗೆ ರೇಷನ್ ಕಿಟ್‌ಗಳನ್ನು ವಿತರಣೆ ಮಾಡುವ ಮೂಲಕ ನನ್ನ ಸಣ್ಣ ಮಟ್ಟದ ನೆರವು ಆರಂಭವಾಗಿದೆ. ಮುಂದೆ ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡುವ ಆಸೆ. ದಯವಿಟ್ಟು ನೀವು ಕೂಡ ನಿಮ್ಮ ಮನೆಯ ಸುತ್ತಮುತ್ತ ಇರುವ ಕೂಲಿ ಕಾರ್ಮಿಕರಿಗೆ ನೆರವಾಗಿ’ ಎಂದು ನಟಿ ಶುಭಾ ಪೂಂಜಾ ಮನವಿ ಮಾಡಿಕೊಂಡಿದ್ದಾರೆ.

ಹಸಿದವರಿಗೆ ಊಟ ಹಾಕಿದ ಚಿಕ್ಕಣ್ಣಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿರುವ ನಿರಾಶ್ರಿತರಿಗೆ ಹಾಗೂ ಕೆ ಆರ್ ಆಸ್ಪತ್ರೆ, ಬಸ್ ನಿಲ್ದಾಣದ ಸುತ್ತಮುತ್ತ ಇರುವ ಬಡವರಿಗೆ ಊಟ ನೀಡುವ ಮೂಲಕ ನಟ ಚಿಕ್ಕಣ್ಣ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಛತ್ರದಲ್ಲಿರುವ ನಿರಾಶ್ರಿತರಿಗೆ ಸ್ವತಃ ಅಡುಗೆ ಮಾಡಿ ಬಡಿಸಿದ್ದಾರೆ. ಹೀಗೆ ಮೈಸೂರಿನಲ್ಲಿ ಪ್ರತಿ ನಿತ್ಯ 200 ಮಂದಿಗೆ ಊಟ ಹಾಕುವ ಮೂಲಕ ಹಸಿದವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ ನಟ ಚಿಕ್ಕಣ್ಣ. ‘ನಿರ್ಗತಿಕರು, ಕೂಲಿ ಮಾಡುವವರು ಇಂಥ ಸಮಯದಲ್ಲಿ ಒಂದು ಹೊತ್ತಿನ ಊಟ ಮಾಡಲು ಎಷ್ಟು ಪರದಾಡುತ್ತಾರೆ ಎಂಬುದು ನನಗೆ ಗೊತ್ತು. ಯಾಕೆಂದರೆ ನಾನು ಕೂಡ ಇಂಥ ಹಸಿದವರಿಂದ ಬಂದವನು. ನನಗೆ ಹಸಿವಿನ ಕ್ರೂರತೆ ಗೊತ್ತಿದೆ. ಆ ಕಾರಣಕ್ಕೆ ನನ್ನಿಂದ ಸಾಧ್ಯವಾದಷ್ಟು ಪ್ರತಿ ನಿತ್ಯ ಇಂತಿಷ್ಟು ಜನಕ್ಕೆ ಅಂತ ಊಟ ಹಾಕುತ್ತಿದ್ದೇನೆ. ನನ್ನ ಈ ಕಾರ್ಯದ ಜತೆಗೆ ಕಲಾವಿದ ಮೈಸೂರಿನ ಬಾಲು, ಎಸಿಪಿ ಶಿವಶಂಕರ್ ಇದ್ದಾರೆ’ ಎನ್ನುತ್ತಾರೆ ಚಿಕ್ಕಣ್ಣ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona