ಚಿತ್ರೋದ್ಯಮ ಯಾವತ್ತಿಗೂ ನನ್ನ ದೃಷ್ಟಿಯಲ್ಲಿ ಪ್ರೊಟೆಕ್ಟಿವ್ ಆಗಿಯೇ ಇದೆ. ಯಾವುದೇ ಕ್ಷಣ ನನಗೆ ಈ ಕ್ಷೇತ್ರ ಸುರಕ್ಷಿತವಲ್ಲ ಅಂತ ಅನಿಸಿದ್ದೇ ಇಲ್ಲ. ನಾನು ಹದಿನಾರು ವರ್ಷಕ್ಕೇ ನಟಿಯಾಗಿ ಚಿತ್ರೋದ್ಯಮಕ್ಕೆ ಬಂದವಳು. ಅವತ್ತಿನಿಂದ ಇವತ್ತಿನ ತನಕ ಚಿತ್ರೋದ್ಯಮ ನನ್ನನ್ನು ಚಿಕ್ಕವಳ ಹಾಗೆಯೇ ನೋಡುತ್ತಾ ಬಂದಿದೆ. ನಾನು ಎಲ್ಲಿಗೆ ಹೋದರು, ಅಮ್ಮ ಜತೆಗಿರುತ್ತಾರೆ. ಶೂಟಿಂಗ್ ಇದ್ರೆ ಇಬ್ಬರು ಹೋಗುತ್ತೇವೆ. ನಮ್ಮಿಬ್ಬರನ್ನು ಇಂಡಸ್ಟ್ರಿ ಅತ್ಯಂತ ಗೌರವದಿಂದ ನೋಡುತ್ತದೆ.

ಮೀಟೂ ಎನ್ನುವುದನ್ನು ನಾನು ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಾದರೆ ಕಾದು ಉತ್ತರ ನೀಡೋಣ ಅಂತ ಎಂದಿಗೂ ತಾತ್ಸಾರ ಮಾಡಿಲ್ಲ. ಯಾರದೋ ವರ್ತನೆಯಲ್ಲಿ ಬೇಸರ ಎನಿಸಿದರೆ ಸ್ಥಳದಲ್ಲೇ ಉತ್ತರ ನೀಡಿದ್ದೂ ಇದೆ. ಪ್ರತಿ ಕ್ಷೇತ್ರಗಳಲ್ಲೂ ಇದೆಲ್ಲ ಮಾಮೂಲು. ಹೆಣ್ಣಾಗಿ ಹುಟ್ಟಿದ್ಮೇಲೆ ಇಂತಹ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಅವುಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ, ಯಾವು ದೃಷ್ಟಿಯಲ್ಲಿ ನೋಡುತ್ತೇವೆ
ಎನ್ನುವುದರ ಮೇಲೆ ಅದು ನಿಂತಿರುತ್ತದೆ. ಹಾಗಂತ ಪುರುಷರೆಲ್ಲರೂ ಕೆಟ್ಟವರು ಅಂತಲ್ಲ. ಹುಡುಗಿಯರೆಲ್ಲ ಒಳ್ಳೆಯವರೂ ಅಂತಲ್ಲ. ನನಗೂ ಅನೇಕ ಜನ ಹುಡುಗರು ಫ್ರೆಂಡ್ಸ್ ಇದ್ದಾರೆ. ಅವರೆಲ್ಲ ಕಾಲೇಜು ಸ್ನೇಹಿತರು. ಹಲವರು ಚಿತ್ರೋದ್ಯಮದಕ್ಕೂ ಬಂದಿದ್ದಾರೆ. ಇನ್ನು ಕೆಲವರು ಬೇರೆ, ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಅವರೆಲ್ಲ ಎಂದಿಗೂ ನನಗೆ ಬೇಸರವಾಗುವಂತೆ ನಡೆದುಕೊಂಡಿಲ್ಲ. ತಮ್ಮ ಸಹೋದರಿಯರನ್ನು ನೋಡಿಕೊಳ್ಳುವ ಹಾಗೆಯೇ ಕಾಣುತ್ತಾರೆ. ಇದೇ ವಾತಾವರಣವನ್ನು ನಾನು ಚಿತ್ರೋದ್ಯಮದಲ್ಲಿ ನೋಡುತ್ತಾ ಬಂದಿದ್ದೇನೆ. 12 ವರ್ಷ ಆಯ್ತು. ಬೇರೆ ಭಾಷೆಯ ಚಿತ್ರೋದ್ಯಮಕ್ಕೆ ಹೋಲಿಸಿದರೆ, ಕನ್ನಡ ಚಿತ್ರರಂಗ ನನ್ನ ದೃಷ್ಟಿಯಲ್ಲಿ ತುಂಬಾ ಸುರಕ್ಷಿತ.