3,000 ಸಿನಿ ಕಾರ್ಮಿಕರಿಗೆ ಉಪ್ಪಿ, ಸುದೀಪ್, ಲೀಲಾವತಿ ಊಟ
ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮನರಂಜನಾ ಕ್ಷೇತ್ರದ ಕಲಾವಿದರು, ಕಾರ್ಮಿಕರ ಸಹಾಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ನಟಿ ಲೀಲಾವತಿ ಅವರು ಮುಂದಾಗಿದ್ದಾರೆ. ಸುಮಾರು 3000 ಮಂದಿ ಕಾರ್ಮಿಕರಿಗೆ ಆಯಾ ಒಕ್ಕೂಟಗಳ ಮೂಲಕ ದಿನಸಿ ಸಾಮಗ್ರಿ ನೀಡುವುದಾಗಿ ಉಪೇಂದ್ರ ಅವರು ಹೇಳಿದ್ದಾರೆ.
‘ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ ಒಕ್ಕೂಟದ ಎಲ್ಲ ಸಂಘಗಳ ಸುಮಾರು 3000 ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸುದೀಪ್, ಲೀಲಾವತಿಯಿಂದ ಸಹಾಯ: ‘ಕಿಚ್ಚನ ಕೈತುತ್ತು’. ಇದು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ನ ಹೊಸ ಯೋಜನೆ. ಕೊರೋನಾ ವಾರಿಯರ್ಸ್ ಹಾಗೂ ಹಸಿದವರಿಗೆ ಒಂದು ಹೊತ್ತಿನ ಊಟ ನೀಡುವ ಯೋಜನೆ ಇದಾಗಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಅವಶ್ಯಕತೆ ಇರುವವರಿಗೆ ಟ್ರಸ್ಟ್ ವತಿಯಿಂದ ಊಟ ನೀಡಲಾಗುತ್ತದೆ. ಈಗಾಗಲೇ ಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ, ಆಕ್ಸಿಜನ್ ಸಿಲಿಂಡರ್ ವಿತರಣೆ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದೆ.
ಹುಟ್ಟೂರು ಮಂಡ್ಯದ ನೆರವಿಗೆ ಮುಂದಾದ ಕೆಜಿಎಫ್ ನಿರ್ಮಾಪಕ
ಹಿರಿಯ ನಟಿ ಲೀಲಾವತಿ ಕಷ್ಟದಲ್ಲಿರುವ ಕಿರಿಯ ಕಲಾವಿದರ ಸಹಾಯಕ್ಕೆ ಮುಂದಾಗಿದ್ದಾರೆ. ಸುಮಾರು 200 ಮಂದಿ ನಟ ನಟಿಯರಿಗೆ ಕಿಟ್ ವಿತರಿಸಿದ್ದಾರೆ. ನಟ ವಿನೋದ್ ರಾಜ್ ಅವರೂ ತಾಯಿಯ ಜೊತೆಗೆ ಸಮಾಜ ಸೇವೆ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.