ಕಳೆದ ಮೂರು ವಾರಗಳಿಂದ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ. ಕಾರಣ ಅವರ ಅನಾರೋಗ್ಯ. ಆದರೆ ಈಗ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಬಳಿಕ ಮೊದಲ ಬಾರಿಗೆ ಮಾತನಾಡಿದ್ದಾರೆ. ಆರೋಗ್ಯ, ಸಿನಿಮಾ, ಕೊರೋನಾ, ಅಡುಗೆ, ಕ್ರಿಕೆಟ್, ಜೀವನ, ಕಷ್ಟ- ನೋವುಗಳನ್ನು ಹಂಚಿಕೊಂಡಿದ್ದಾರೆ. ಓವರ್ ಟು ಸುದೀಪ್....
1. ಈಗ ನಾನು ಚೆನ್ನಾಗಿದ್ದೇನೆ. ಒಂದು ದೊಡ್ಡ ನೋವು, ಸಂಕಷ್ಟದಿಂದ ಮತ್ತೆ ಮರಳಿ ಬಂದಂತೆ ಅನಿಸುತ್ತಿದೆ. ಪ್ರತಿಯೊಬ್ಬರ ಪ್ರೀತಿ, ಪ್ರಾರ್ಥನೆ, ಹಾರೈಕೆಗಳು ನನ್ನ ಮತ್ತಷ್ಟು ಕಾಪಾಡುವಂತೆ ಮಾಡಿದೆ.
2. ಮೂರು ವಾರಗಳ ಕೆಳಗೆ ಬಿಗ್‌ಬಾಸ್ ಶೋನ ವಾರದ ಎಪಿಸೋಡ್ ನಿರೂಪಣೆ ಮಾಡುವಾಗ ಕಾಲುಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಾಣಿಸಿಕೊಂಡಿತು. ಎಪಿಸೋಡ್ ಶೂಟಿಂಗ್ ಮುಗಿಯುವ ಹೊತ್ತಿಗೆ ಆ ನೋವು ಪಾದಗಳ ತನಕ ಕಾಣಿಸಿಕೊಂಡು ತೀವ್ರವಾಗಿ ಸುಸ್ತು ಆಗುವಂತೆ ಮಾಡಿತು. ಮನೆಗೆ ಬಂದ ಮೇಲೆ ಆ ನೋವು ಹೆಚ್ಚಾಯಿತು. ವಿಶ್ರಾಂತಿ ಬೇಕು ಅಂತ ಬಹಳ ಅನಿಸುತ್ತಿತ್ತು. ಎರಡನೇ ದಿನದ ಹೊತ್ತಿಗೆ ಚಿಕಿತ್ಸೆ ಪಡೆಯದೇ ಗುಣವಾಗೋದು ಕಷ್ಟ ಅಂತ ಚಿಕಿತ್ಸೆಗೆ ಒಳಗಾದೆ.
ಎಷ್ಟೇ ದುಡಿದರೂ ರಾತ್ರಿ ತಿನ್ನೋದು ಎರಡು ರೊಟ್ಟಿ; ಜೀವನದ ಬಗ್ಗೆ ಸುದೀಪ್ ಕಿವಿ ಮಾತು!
3. ನನ್ನ ಆರೋಗ್ಯ ಸಮಸ್ಯೆ ಕಾರಣ ಏನೆಂಬುದು ಹಲವರಿಗೆ ಗೊಂದಲ ಇತ್ತು. ಈ ಸಮಯದಲ್ಲಿ ಕೊರೋನಾ ಬಿಟ್ಟು ಬೇರೆ ಯಾವುದು ನಮ್ಮನ್ನು ಬಾಧಿಸುತ್ತದೆ ಹೇಳಿ. ಕೊರೋನಾಗೆ ನಾನು ಯಾರು ಅನ್ನೋದು ಮುಖ್ಯ ಆಗಲ್ಲ. ಸೂಪರ್ ಮ್ಯಾನ್, ಬ್ಯಾಟ್‌ಮ್ಯಾನ್ ಯಾರೇ ಆಗಲಿ ಈ ನೋವು, ಸಂಕಷ್ಟದ ಮುಂದೆ ನಾವು ಯಾರೂ ಸೂಪರ್ ಅಲ್ಲ. ಮನುಷ್ಯರು ಅಷ್ಟೆ.
"
4. ಕೊರೋನಾದಿಂದ ನಾನು ಹೇಗೆ ಹೊರಗೆ ಬಂದೆ, ಆ ಬಗ್ಗೆ ಬೇರೆಯವರಿಗೂ ಟಿಪ್‌ಸ್ ಕೊಡಿ ಅಂದರೆ ಅದು ಸಾಧ್ಯವಿಲ್ಲ. ಯಾಕೆಂದರೆ ಒಬ್ಬೊಬ್ಬರ ದೇಹ ಒಂದೊಂದು ರೀತಿಯಲ್ಲಿ ಇರುತ್ತದೆ. ಅಡ್ವೈಸ್ ಮಾಡೋದು ಕಷ್ಟ. ನಾನು ಇಂಥ ಸಂಕಷ್ಟಗಳನ್ನು ಎದುರಿಸುವುದು ಹೇಗೆಂದು ಕಲಿಯುತ್ತಿದ್ದೇನೆ. ಸಿಂಪಲ್ಲಾಗಿ ಹೇಳಬೇಕು ಅಂದರೆ ಈಗ ಸಮಯದಲ್ಲಿ ಸುಮ್ಮನೆ ಮನೆಯಲ್ಲಿ ಇದ್ದು ಬಿಡಿ. ಇದೊಂದು ಮಾತ್ರ ಹೇಳಬಲ್ಲೆ.
5. ಮನೆಯಲ್ಲಿ ಬಂಧಿಯಾಗಿ ಹಾಸಿಗೆ ಹಿಡಿದಾಗ ನಾನು ಏನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಗೊತ್ತಾಯಿತು. ಟ್ವೀಟ್, ಪತ್ರಗಳು, ದೇವಸ್ಥಾನಗಳ ಪ್ರಸಾದ, ಪೇಯಿಂಟಿಂಗ್... ಹೀಗೆ ಹೇಗೆಲ್ಲ ನನಗೆ ಶುಭ ಕೋರಬಹುದೋ ಅಷ್ಟೂ ರೀತಿಯಲ್ಲಿ ಹಾರೈಸಿದ್ದಾರೆ. ಅಭಿಮಾನಿಗಳು, ನೆಂಟರು, ಸ್ನೇಹಿತರು, ಜನರ ಈ ಪ್ರಾರ್ಥನೆ ನೋಡಿ ಗೊತ್ತಿಲ್ಲದೆ ನಾನು ಕಣ್ಣಲ್ಲಿ ನೀರು ಹಾಕಿದೆ.
6. ನನಗೂ ಅಭಿಮಾನಿಗಳು ಇದ್ದಾರೆ ಅನ್ನೋದು ಗೊತ್ತು. ಆದರೆ, ಇಂಥ ಹೊತ್ತಿನಲ್ಲೂ ನನ್ನ ಕ್ಷೇಮಕ್ಕಾಗಿ ಶುಭ ಕೋರುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ಆಸ್ತಿ ಇನ್ನೇನಿದೆ ಹೇಳಿ? ಈ ಆನಾರೋಗ್ಯದ ಸಮಸ್ಯೆ ನನ್ನ ದೇಹಕ್ಕೆ ಸುಸ್ತು ಕೊಟ್ಟಿತು, ಅಭಿಮಾನಿಗಳ ಪ್ರೀತಿ ನೋಡಿ ಖುಷಿಯೂ ಕೊಟ್ಟಿತು.
ಕೊರೋನಾ ಎದುರಿಸಲು ಸುದೀಪ್ ಕೊಟ್ಟ ಸಿಂಪಲ್ ಟಿಪ್ಸ್!
7. ನಾನು ಮತ್ತೆ ಎದ್ದು ಬರಲು ಆಗುತ್ತಾ, ನನ್ನ ಪ್ರೀತಿಸುವವರನ್ನು ನೋಡುತ್ತೇನೆಯೇ, ಸ್ನೇಹಿತರ ಜತೆ ಮತ್ತೆ ಮಾತನಾಡುತ್ತೇನಾ, ನನ್ನ ಮನೆ, ಸಿನಿಮಾ, ಬಂಧು- ಬಳಗ ಎಲ್ಲವೂ ಮತ್ತು ಎಲ್ಲರ ಜತೆ ಮತ್ತೆ ಮಾತಾಡಲು ಆಗುತ್ತದೆಯೇ... ಇದು ನಾನು ಹಾಸಿಗೆ ಹಿಡಿದಾಗ ಬಂದ ಯೋಚನೆ. ಒಂದು ಕ್ಷಣ ಈ ಎಲ್ಲವೂ ನನ್ನ ಪಾಲಿಗೆ ಇಲ್ಲ ಅನಿಸಿದ್ದು ಹೌದು. ಭಯ ಆಯಿತು.
8. ಮನುಷ್ಯನಿಗೆ ಭಯ ಇರಬೇಕು. ಆ ಭಯ ಇದ್ದಾಗಲೇ ನಾವು ಏನೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವೋ ಅಷ್ಟೂ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಆಶ್ಚರ್ಯ ಅಂದರೆ ಜಾಗರೂಕರಾಗಿದ್ದವರಿಗೂ ಕೊರೋನಾ ಬಂದಿದೆ.
9. ಕಳೆದ ಮೂರು ವಾರಗಳಿಂದ ನನ್ನ ಮನೆಯಲ್ಲಿ ನಾನು ಒಬ್ಬನೇ ಇದ್ದೇನೆ. ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಹೈದರಾಬಾದ್‌ನಲ್ಲಿದ್ದಾರೆ. ಕಿಚನ್ ಸ್ಟುಡಿಯೋ ಹೆಸರಿನ ಅಡುಗೆ ಮನೆಯಲ್ಲಿ ನನಗೆ ಏನು ಬೇಕೋ ಅದನ್ನು ಮಾಡಿಕೊಂಡು, ತಿಂದುಕೊಂಡು ಇದ್ದೆ. ಅಡುಗೆ ಮನೆಯಲ್ಲೇ ಹೆಚ್ಚು ಕಾಲ ಕಳೆದೆ.
"
10. ಈಗ ಇರುವ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಸಾಮಾನ್ಯ ಜನಕ್ಕಿಂತ ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ಹ್ಯಾಂಡಲ್ ಮಾಡುತ್ತಿಲ್ಲ. ಸರಿಯಾದ ಪ್ಲಾನ್ ಇಲ್ಲ. ಏನೆಲ್ಲ ವ್ಯವಸ್ಥೆಗಳನ್ನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ನಮ್ಮ ವರ್ಷದ ವರಮಾನ ಎಷ್ಟು ಅಂತ ಲೆಕ್ಕ ಹಾಕಿ ಮನೆ ಮನೆಗೂ ಹೋಗಿ ತೆರಿಗೆ ವಸೂಲಿ ಮಾಡುವವರು, ತೆರಿಗೆ ಕಟ್ಟುವ ಅದೇ ಜನ ಸಂಕಷ್ಟಕ್ಕೆ ಸಿಲುಕಿದಾಗ ಏನು ಮಾಡಬೇಕಿತ್ತೋ ಅದನ್ನು ಮಾಡುತ್ತಿಲ್ಲ.
11. ವ್ಯಾಕ್ಸಿನೇಷನ್‌ಗೆ ನೋಂದಣಿ ಮಾಡಿಸಿಕೊಳ್ಳಲು ಸಾಮಾನ್ಯ ಜನರಿಗೆ ಆಗುತ್ತಿಲ್ಲ. ನೋಂದಣಿ ಮಾಡುವ ಆ್ಯಪ್ 10 ನಿಮಿಷಕ್ಕೆ ಆಫ್ ಆಗುತ್ತಿದೆ. ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇನೆ ಅಂತಲ್ಲ. ಆದರೆ, ಜನರಿಗೆ ತೊಂದರೆ ಅಂತೂ ಇದೆ. ಗೊತ್ತಿರುವ ವೈದ್ಯರು, ಶಿಫಾರಸ್ಸು, ಹಣ ಇದ್ದವರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ ಎಂದರೆ ಉಳಿದವರ ಕತೆ ಏನು?
12. ಇಂಥ ಹೊತ್ತಿನಲ್ಲಿ ನಾವೇನು ಮಾಡಬೇಕು. ಸಿನಿಮಾ, ಕ್ರಿಕೆಟ್ ಎಲ್ಲ ಬದಿಗಿಟ್ಟು ಸಾಧ್ಯವಾದಷ್ಟು ಕಷ್ಟದಲ್ಲಿರುವವರಿಗೆ ನೆರವು ನೀಡಬೇಕು. ನನ್ನ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್‌ಟ್ ಮೂಲಕ ಒಂದಿಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ. ಅಗತ್ಯ ಇರುವವರಿಗೆ ಆಕ್ಸಿಜನ್ ಕೊಡಿಸುತ್ತಿದ್ದೇವೆ. ಈಗಾಗಲೇ 300 ಆಕ್ಸಿಜನ್ ಸಿಲೆಂಡರ್‌ಗಳನ್ನು ಕೊಟ್ಟಿದ್ದೇವೆ. ಮುಂದೆಯೂ ಈ ಕೆಲಸ ಮಾಡುತ್ತೇವೆ. ನನ್ನ ಗುರಿ ಈ ಟ್ರಸ್‌ಟ್ ಮೂಲಕ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದು.
13. ಸಿನಿಮಾ ಅಂತ ಬಂದಾಗ ಬಿಡುಗಡೆಯ ಸಾಲಿನಲ್ಲಿ ಮೊದಲು ಇರುವುದು ‘ಕೋಟಿಗೊಬ್ಬ 3’. ಈ ಚಿತ್ರದ ನಂತರ ‘ವಿಕ್ರಾಂತ್ ರೋಣಾ’. ‘ಜೀವನದಲ್ಲಿ ಒಂದು ಪಾಠ ಕಲಿತಿದ್ದೇನೆ ಚಿನ್ನಾ... ಓವರ್ ಆಗಿ ಮಾತಾಡೋದು ತಪ್ಪು, ಓವರ್ ಆಗಿ ಮಾತಾಡೋದನ್ನು ಕೇಳಿಸಿಕೊಳ್ಳುವುದು ಅದಕ್ಕಿಂತ ದೊಡ್ಡ ತಪ್ಪು’ - ಇದು ‘ಕೋಟಿಗೊಬ್ಬ 3’ ಚಿತ್ರದಲ್ಲಿ ನನ್ನ ನೆಚ್ಚಿನ ಡೈಲಾಗ್.
14. ಶಂಕರ್ ನಿರ್ದೇಶನದ, ರಾಮ್‌ಚರಣ್ ತೇಜ ನಟನೆಯ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದು ಇನ್ನೂ ಚರ್ಚೆಯ ಹಂತದಲ್ಲಿದೆ. ಷರತ್ತುಗಳು ಓಕೆ ಆದರೆ, ಪಾತ್ರ ಮಾಡುತ್ತೇನೆ.
15. ಕೆಲವು ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆ ನಾನು ಸುದ್ದಿ ಆಗುತ್ತಿರುತ್ತೇವೆ. ಆ ಪೈಕಿ ಇತ್ತೀಚೆಗೆ ಪರಭಾಷೆಯಲ್ಲಿ ಸೆಟ್ಟೇರುತ್ತಿರುವ ಎಲ್ಲ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನನ್ನ ಹೆಸರು ಕೇಳಿ ಬರುತ್ತಿರುವುದು. ‘ಆದಿಪುರುಷ’, ಮಲಯಾಳಂ ಸಿನಿಮಾ ರೀಮೇಕ್... ಇತ್ಯಾದಿ. ‘ಆದಿಪುರುಷ’ ಸಿನಿಮಾ ನಮ್ಮ ಮ್ಯಾನೇಜರ್‌ವರೆಗೂ ಬಂದಿರಬಹುದು. ನನ್ನವರೆಗೆ ಇನ್ನೂ ಬಂದಿಲ್ಲ.
16. ದಬಾಂಗ್ ಸಿನಿಮಾದಲ್ಲಿ ನಾನು ವಿಲನ್ ಆಗಿ ನಟಿಸಿದ್ದು ಸ್ನೇಹಕ್ಕಾಗಿ. ಸೊಹೈಲ್ ಖಾನ್ ನನ್ನ ಒಳ್ಳೆಯ ಗೆಳೆಯ. ಒಂದೇ ಕುಟುಂಬದ ಸದಸ್ಯರಂತೆ ನಾವು. ಹೀಗಾಗಿ ದಬಾಂಗ್ ಚಿತ್ರಕ್ಕೆ ನಾನು ಒಂದೇ ಒಂದು ರುಪಾಯಿ ಸಂಭಾವನೆ ತೆಗೆದುಕೊಳ್ಳದೆ ನಟಿಸಿದ್ದೇನೆ.
17. ಬಿಗ್‌ಬಾಸ್ ನಂತರ ಪ್ರತಿಷ್ಠಿತ ಮಾಸ್ಟರ್ ಶೆಫ್ ಕಾರ್ಯಕ್ರಮ ನಿರೂಪಣೆ ಮಾಡುವ ಪ್ಲಾನ್ ಇತ್ತು. ನಾನೇ ನಿರೂಪಣೆ ಮಾಡುತ್ತಿರುವ ಬಿಗ್‌ಬಾಸ್ ಶೋಗೆ ನಾನೇ ಮತ್ತೊಂದು ಶೋ ಅನ್ನು ಕಾಂಪಿಟೇಷನ್ ತರಬಾರದು ಅಂತ ಆ ಕಾರ್ಯಕ್ರಮ ಸ್ವಲ್ಪ ಮುಂದೆ ಹೋಗಿದೆ.
