ಫೈಟಿಂಗ್‌ ದೃಶ್ಯದಲ್ಲಿ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಕನಿಷ್ಠ 15 ದಿನಗಳ ಬೆಡ್‌ ರೆಸ್ಟ್‌ ಸೂಚಿಸಿದ್ದಾರೆ. ಶ್ರೀಮುರಳಿ ಹುಷಾರಾಗುವವರೆಗೆ ಚಿತ್ರೀಕರಣ ಮುಂದಕ್ಕೆ ಹೋಗಿದೆ.

ಆಗ ಮುಗ್ಧ, ಈಗ ಪ್ರಬುದ್ಧ; ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಹುಟ್ಟುಹಬ್ಬದ ವಿಶೇಷ!

ಮದಗಜ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಫೈಟಿಂಗ್‌ ಮತ್ತು ಹಾಡುಗಳ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಆ್ಯಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣ ನಡೆಯಬೇಕಿದ್ದ ಕಾರಣ ಚಿತ್ರತಂಡ ಅದ್ದೂರಿ ಸೆಟ್‌ಗಳನ್ನು ಹಾಕಿತ್ತು. 40 ಸೆಕೆಂಡ್‌ ಸ್ಟೆ್ರಚ್‌ನ ಆ್ಯಕ್ಷನ್‌ ಸೀಕ್ವೆನ್ಸ್‌ ಅನ್ನು ಫೈಟ್‌ ಮಾಸ್ಟರ್‌ ಅರ್ಜುನ್‌ ರೂಪಿಸಿದ್ದರು. ಹತ್ತು ಜನ ಒಮ್ಮೆಲೇ ಅಟ್ಯಾಕ್‌ ಮಾಡುತ್ತಾರೆ. ಶ್ರೀಮುರಳಿ ನಾಲ್ಕು ಮಂದಿಯನ್ನು ಹೊಡೆದು ಐದನೇಯವನತ್ತ ನುಗ್ಗಿದಾಗ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ‘ತನ್ನ ಕಾಲಿಗೆ ಏಟಾಗಿದ್ದರೂ ಈಗ ಆಸ್ಪತ್ರೆಗೆ ಹೋಗುವುದು ಬೇಡ. ಶೂಟಿಂಗ್‌ ಮುಗಿಸಿ ಹೋಗೋಣ. ನಿರ್ಮಾಪಕರಿಗೆ ಲಾಸ್‌ ಆಗುತ್ತದೆ ಎಂದು ಶ್ರೀಮುರಳಿ ಹೇಳಿದರು’ ಎಂದು ನಿರ್ದೇಶಕ ಮಹೇಶ್‌ ಹೇಳುತ್ತಾರೆ. ಆ ಮೂಲಕ ಶ್ರೀಮುರಳಿ ಬದ್ಧತೆಯನ್ನು ಮೆಚ್ಚಿಕೊಂಡರು.

ಸದ್ಯ ವೈದ್ಯರು ಶ್ರೀಮುರಳಿ ಕಾಲು ಗುಣವಾಗಲು ಕನಿಷ್ಠ 15 ದಿನವಾದರೂ ಬೇಕು ಎಂದು ತಿಳಿಸಿರುವುದರಿಂದ ಶ್ರೀಮುರಳಿ ಹುಷಾರಾಗಿ ಸೆಟ್‌ಗೆ ಬರುವವರೆಗೂ ಚಿತ್ರೀಕರಣ ಮುಂದಕ್ಕೆ ಹಾಕಲು ಚಿತ್ರತಂಡ ನಿರ್ಧರಿಸಿದೆ. ಮದಗಜ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸುತ್ತಿದ್ದಾರೆ.