1. ನಾನು ಶುರು ಮಾಡಿರುವ ಯಾವ ಚಿತ್ರವೂ ನಿಂತಿಲ್ಲ. ನಿಲ್ಲೋದು ಇಲ್ಲ. ರುದ್ರಪ್ರಯಾಗ ಚಿತ್ರದ ಬಗ್ಗೆ ಇಂಥದ್ದೊಂದು ಅನುಮಾನ ಇದ್ದರೂ ಅದು ಸತ್ಯ ಅಲ್ಲ. ಈ ಚಿತ್ರಕ್ಕೆ ಶಾಟ್ ಡಿವಿಜನ್ ಕೂಡ ಆಗಿತ್ತು. ಕಳೆದ ವರ್ಷ ಮಾರ್ಚ್ 23ಕ್ಕೇ ಶೂಟಿಂಗ್ ಹೋಗಬೇಕಿತ್ತು. ಆದರೆ, ವ್ಯಾಕ್ಸಿನ್ ಬರಲಿ ಅಂತ ಕಾದ್ವಿ. ಮತ್ತೆ ಲಾಕ್‌ಡೌನ್, ಕೊರೋನಾ ಸಂಕಷ್ಟ. ಹೀಗಾಗಿ ತಡ ಆಯಿತೇ ಹೊರತು, ಆ ಸಿನಿಮಾ ನಿಂತಿಲ್ಲ.

2. ಸಮಯ ಸಿಕ್ಕಿದ್ದರಿಂದ ಈ ಚಿತ್ರದ ಕತೆ ಸುತ್ತ ಮತ್ತಷ್ಟು ಕೆಲಸ ಮಾಡಿದೆ. ಮೊದಲಗಿಂತ ದೊಡ್ಡ ಸ್ಕೇಲ್ ಸಿನಿಮಾ ಆಗಲಿದೆ. ಅನಂತ್‌ನಾಗ್ ಅವರೇ ಪ್ರಧಾನ ಪಾತ್ರಧಾರಿ. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಕತೆ ಮಾತ್ರ ಮತ್ತಷ್ಟು ಅದ್ದೂರಿಯಾಗಿ, ದೊಡ್ಡ ಬಜೆಟ್‌ನಲ್ಲಿ ಮೂಡಿ ಬರುವಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ.

3. ಮತ್ತೊಮ್ಮೆ ಲಾಕ್‌ಡೌನ್ ಎದುರಾಗಿ ಮನೆಯಲ್ಲಿ ಕೂರುವ ಪರಿಸ್ಥಿತಿ ಎದುರಾಗಿದ್ದರಿಂದ ಈಗ ನಾನೇ ಬೇರೆ ಒಂದು ಕತೆ ಬರೆಯುತ್ತಿದ್ದೇನೆ. ಇದರಲ್ಲಿ ನಾನೇ ನಟನೆ ಮಾಡುವುದಾ ಅಥವಾ ಕೇವಲ ನಿರ್ದೇಶನ ಮಾತ್ರ ಮಾಡಬೇಕಾ ಎಂಬುದು ಇನ್ನೂ ನಿರ್ಧರ ಆಗಿಲ್ಲ. ಆದರೆ, ಒಂದು ಒಳ್ಳೆಯ ಸಾಲು ಹೊಳೆದಿದ್ದು, ಅದರ ಸುತ್ತ ಕೆಲಸ ಮಾಡುತ್ತಿದ್ದೇವೆ. ಕತೆ ಪೂರ್ತಿ ಆದ ಮೇಲೆ ಹೀರೋ ಯಾರು ಆಗಬೇಕು ಎಂಬುದು ತೀರ್ಮಾನಿಸಬೇಕಿದೆ.

4. ಲಾಕ್‌ಡೌನ್ ಓಪನ್ ಆಗುತ್ತಿರುವಂತೆಯೇ ‘ಬೆಲ್‌ಬಾಟಮ್ 2’’ ಸಿನಿಮಾ ಶೂಟಿಂಗ್‌ಗೆ ಹೊರಡಲಿದೆ. ಆ ನಂತರ ನನ್ನ ನಿರ್ದೇಶನದ ಸಿನಿಮಾ, ಇದರ ಜತೆಗೆ ರುದ್ರಪ್ರಯಾಗ ಚಿತ್ರ ಕೂಡ ಸೆಟ್ಟೇರಲಿದೆ.

ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಬಹು ನಿರೀಕ್ಷಿತ ‘ಹೀರೋ’ ಚಿತ್ರ! 

5. ಸುದೀಪ್ ಅವರ ಜತೆ ಸಿನಿಮಾ ಮಾಡುವ ಕನಸು ಇನ್ನೂ ಜೀವಂತವಾಗಿದೆ. ಅದು ತುಂಬಾ ದೊಡ್ಡ ಕನಸು ಮತ್ತು ಯೋಜನೆ. ಯಾವಾಗ ಕೈಗೂಡುತ್ತದೋ ಗೊತ್ತಿಲ್ಲ. ಕೊರೋನಾ ಸಂಕಷ್ಟ ದೂರ ಆಗಬೇಕು, ಎಂದಿನಂತೆ ಚಿತ್ರರಂಗಕ್ಕೆ ಚೇತರಿಸಿಕೊಳ್ಳಬೇಕು. ಆಗ ಇಂಥ ದೊಡ್ಡ ಕನಸುಗಳಿಗೆ ಚಾಲನೆ ಸಿಗುತ್ತದೆ. ಸುದೀಪ್ ಅವರ ಜತೆಗೆ ಸಿನಿಮಾ ಮಾಡುವುದಂತೂ ಸತ್ಯ. ಯಾವಾಗ ಅನ್ನೋದು ಈಗಲೇ ಹೇಳಲಾರೆ.

6. ಕೊರೋನಾ ಮೊದಲ ಅಲೆ ಬಂದಾಗ ಬೆಂಗಳೂರು ಬಿಟ್ಟು ಸಂಪೂರ್ಣವಾಗಿ ಊರು ಸೇರಿದ್ದೆ. ಲಾಕ್‌ಡೌನ್ ತೆರವಾದ ಮೇಲೆಯೇ ಬೆಂಗಳೂರಿಗೆ ಬಂದಿದ್ದು. ಆದರೆ, ಈ ಬಾರಿ ಒಂದು ತಿಂಗಳು ಮಾತ್ರ ಊರಲ್ಲಿದ್ದೆ. ಈಗ ಬೆಂಗಳೂರಿನಲ್ಲೇ ಇದ್ದೇನೆ.

7. ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುತ್ತದೆ. ಆ ನಂಬಿಕೆ ಮತ್ತು ಭರವಸೆಯಲ್ಲೇ ಮತ್ತಷ್ಟು ಕನಸಿನ ಕತೆಗಳನ್ನು ಕಟ್ಟುತ್ತಿದ್ದೇವೆ. ನಾವು ಕಟ್ಟುವ ಕತೆಗಳನ್ನು ಜನರಿಗೆ ಹೇಳಬೇಕು ಎನ್ನುವ ಉತ್ಸಾಹವಂತೂ ಕಡಿಮೆ ಆಗಿಲ್ಲ. ಹೀಗಾಗಿ ಈ ಸಂಕಷ್ಟದಲ್ಲೂ ಕೂತು ಹೊಸ ಚಿತ್ರಕಥೆ, ಕತೆ ಬರೆಯುತ್ತಿದ್ದೇನೆ.