ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಬಹು ನಿರೀಕ್ಷಿತ ‘ಹೀರೋ’ ಚಿತ್ರ!
ಸಿನಿರಸಿಕರ ಮನದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ರಿಷಬ್ ಶೆಟ್ಟಿ ಅಭಿನಯದ ‘ಹೀರೋ’ ಸಿನಿಮಾ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಆ ನಿರೀಕ್ಷೆ ಚಿತ್ರದ ಟ್ರೇಲರ್ ಬಂದ ಮೇಲೆ ದುಪ್ಪಟ್ಟು ಆಗಿತ್ತು. ಇದೀಗ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ನಿರೀಕ್ಷೆಯಂತೆ ಪ್ರೇಕ್ಷಕ ಮಹಾಪ್ರಭುಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
‘ಹೀರೋ’ ಸಿನಿಮಾ ಹೊಸತನ, ಹೊಸ ಪ್ರಯತ್ನ ತುಂಬಿರೋ ಚಿತ್ರ. ನಿರ್ದೇಶಕರ ಮೊದಲ ಪ್ರಯತ್ನ ಹಾಗೂ ಪ್ರತಿಭೆಗೆ ಭೇಷ್ ಎನ್ನಲೇಬೇಕು. ಲಾಕ್ಡೌನ್ ಸಮಯದಲ್ಲಿ ಪೂರ್ಣ ಪ್ರಮಾಣದ ಚಿತ್ರೀಕರಣ ಮಾಡಿ ಸೈ ಎನಿಸಿಕೊಂಡಿದ್ದ ಚಿತ್ರತಂಡ ಹಲವು ಮಿತಿಗಳ ನಡುವೆ ಮೇಕಿಂಗ್ ಆಕರ್ಷಕವಾಗಿ ಕಟ್ಟಿಕೊಟ್ಟಿದೆ. ಒಂದೇ ದಿನದಲ್ಲಿ ನಡೆಯುವ ಕಥೆ ಒಳಗೊಂಡ ‘ಹೀರೋ’ ಸಿನಿಮಾ ಕಾಮಿಡಿ ಎಂಟಟೈನ್ಮೆಂಟ್ ಜೊತೆ ಸಸ್ಪೆನ್ಸ್, ಥ್ರಿಲ್ಲರ್, ಮಾಸ್ ಕಂಟೆಂಟ್ ಒಳಗೊಂಡಿದೆ. ಚಿತ್ರ ಬಿಡುಗಡೆಯಾದ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಪ್ರೇಕ್ಷಕರು ಸಿನಿಮಾ ಮೆಚ್ಚಿ ಎಂಜಾಯ್ ಮಾಡುತ್ತಿದ್ದಾರೆ.
ಪ್ರೇಯಸಿಯಿಂದ ದೂರಾದ ಕಥಾನಾಯಕ ನೊಂದು ಪ್ರೇಯಸಿಯನ್ನು ಸಾಯಿಸಲು ನಿರ್ಧರಿಸುತ್ತಾನೆ. ಅಷ್ಟರಲ್ಲಿ ರೌಡಿಯೊಬ್ಬನ ಜೊತೆ ಆಕೆಯ ಮದುವೆಯಾಗಿರುತ್ತದೆ. ಪ್ರೇಯಸಿಯನ್ನು ಸಾಯಿಸಲು ಆಕೆಯ ಮನೆಗೆ ಹೋದ ನಾಯಕನಿಗೆ ಆಶ್ಚರ್ಯ ಕಾದಿರುತ್ತೆ. ಆ ಅಚ್ಚರಿಯ ಸಂಗತಿಯೇನು.? ಪ್ರೇಯಸಿಯನ್ನು ನಾಯಕ ಸಾಯಿಸುತ್ತಾನಾ.?ಈ ಕುತೂಹಲವೇ ‘ಹೀರೋ’ ಸಿನಿಮಾ.
"
ಸಿನಿಮಾ ಎಳೆ, ಚಿತ್ರಕಥೆ, ಪೇಚಿಗೆ ಸಿಲುಕುವ ನಾಯಕ ನಗಿಸುವ ಪರಿ, ಸಸ್ಪೆನ್ಸ್ ಎಲಿಮೆಂಟ್ಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ, ರಂಜಿಸುವಲ್ಲಿ ಯಶಸ್ವಿಯಾಗಿದೆ. ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ ಅಭಿನಯ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು ನೋಡುಗರ ಮನಸ್ಸನ್ನು ಗೆದ್ದಿದ್ದಾರೆ.
ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಖಡಕ್ ವಿಲನ್!
ತಾಂತ್ರಿಕವಾಗಿಯೂ ‘ಹೀರೋ’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ ಪ್ರೇಕ್ಷಕ ಪ್ರಭುಗಳು. ಸಿನಿಮಾ ತಾಂತ್ರಿಕ ಶ್ರೀಮಂತಿಕೆ ಚಿತ್ರದ ತೂಕವನ್ನು ಹೆಚ್ಚಿಸಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದ ಅಬ್ಬರಕ್ಕೆ ಚಿತ್ರಮಂದಿರಗಳಲ್ಲಿ ಚಪ್ಪಾಳೆ ಬೀಳದೆ ಇರದು. ಅರವಿಂದ್ ಎಸ್ ಕಶ್ಯಪ್ ಕ್ಯಾಮೆರ ಕೆಲಸ ಕೂಡ ತೆರೆ ಮೇಲೆ ಚಂದವಾಗಿ ಮೂಡಿಬಂದಿದೆ. ಒಟ್ನಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಯಾವ ರೀತಿಯ ನಿರೀಕ್ಷೆಯನ್ನು ಚಿತ್ರತಂಡ ಮೂಡಿಸಿತ್ತೋ ಆ ನಿರೀಕ್ಷೆ ತೆರೆ ಮೇಲೆ ಸುಳ್ಳಾಗದೆ ಉತ್ತಮ ಮನರಂಜನೆಯನ್ನು ನೀಡುವಲ್ಲಿ ‘ಹೀರೋ’ ಚಿತ್ರತಂಡ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗೋದಿಲ್ಲ.