ನಾನು ಪ್ರಾಮಾಣಿಕ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ: ಧನಂಜಯ್
ಜಗ್ಗೇಶ್-ಅದಿತಿ ಪ್ರಭುದೇವ ಮತ್ತು ಧನಂಜಯ್-ಸುಮನ್ ರಂಗನಾಥ್ ಜೋಡಿ ನಟನೆಯ ತೋತಾಪುರಿ 2 ಸಿನಿಮಾ ರಿಲೀಸ್.....

ವಿಜಯಪ್ರಸಾದ್ ನಿರ್ದೇಶನದ, ಕೆ.ಎ. ಸುರೇಶ್ ನಿರ್ಮಾಣದ, ಜಗ್ಗೇಶ್ ಮತ್ತು ಧನಂಜಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ತೋತಾಪುರಿ 2’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ‘ತೋತಾಪುರಿ 1’ ಬಿಡುಗಡೆಯಾದ ಒಂದು ವರ್ಷದ ಬಳಿಕ ಭಾಗ 2 ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ಹುಟ್ಟಿಸಿದೆ.
ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದ್ದು, ಜಗ್ಗೇಶ್-ಅದಿತಿ ಪ್ರಭುದೇವ ಮತ್ತು ಧನಂಜಯ್-ಸುಮನ್ ರಂಗನಾಥ್ ಜೋಡಿಯ ನಟನೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಧನಂಜಯ್ ಸಿನಿಮಾ ಕುರಿತು, ‘ನಾನು ಮೊದಲ ಬಾರಿಗೆ ಕತೆ ಕೇಳಿದಾಗಲೇ ಸಿನಿಮಾ ಒಪ್ಪಿಕೊಂಡಿದ್ದೆ. ಯಾಕೆಂದರೆ ಕತೆಯಲ್ಲಿ ತಮಾಷೆ ಇತ್ತು, ವಿಷಾದ ಇತ್ತು, ಭಾವುಕತೆ ಇತ್ತು, ಪ್ರೇಕ್ಷಕರಿಗೆ ತಾಕುವಂತೆ ಮಾಡಲು ಬೇಕಾದ ಎಲ್ಲವೂ ಇದ್ದವು. ಅಲ್ಲದೇ, ನಾನು ಇಲ್ಲಿ ಒಬ್ಬ ಪ್ರಾಮಾಣಿಕ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜಾತಿ, ಧರ್ಮ ಮೀರಿ ಒಬ್ಬ ಹುಡುಗಿಯನ್ನು ಪ್ರೀತಿಸುವ ಪ್ರೇಮಾರಾಧಕನ ಪಾತ್ರ ನನ್ನದು’ ಎನ್ನುತ್ತಾರೆ.
ಪ್ರೀತ್ಸೆ ಅಂತ ಕ್ರಿಶ್ಚಿಯನ್ ಹುಡ್ಗಿ ಹಿಂದೆ ಬಿದ್ದ ಧನಂಜಯ್; ಸಾಥ್ ಕೊಟ್ಟ ಶಿವಣ್ಣ!
ಮಾತು ಮುಂದುವರಿಸುತ್ತಾ, ‘ಇದು ಮಾಸ್, ಕ್ಲಾಸ್‌ಗಳ ಹಂಗಿಲ್ಲದ ಸಿನಿಮಾ. ಮನುಷ್ಯತ್ವವನ್ನು ಸಂಭ್ರಮಿಸುವ ಸಿನಿಮಾ. ಪ್ರೀತಿಯೇ ಎಲ್ಲಾ ಎಂದು ಸಾರುವ ಸಿನಿಮಾ. ಯಾವುದೇ ನಿರೀಕ್ಷೆಯ ಭಾರವಿಲ್ಲದೆ ನೋಡಿದರೆ ಇಷ್ಟವಾಗುವ ಸಿನಿಮಾ. ವಿಜಯಪ್ರಸಾದ್ ಸೊಗಸಾಗಿ ಬರೆದಿದ್ದಾರೆ. ಕೆ.ಎ. ಸುರೇಶ್ ಅಪಾರ ಶ್ರಮದಿಂದ ಸಿನಿಮಾ ತೆರೆಗೆ ತರುತ್ತಿದ್ದಾರೆ. ಸಹ ಕಲಾವಿದರು ಮನಸ್ಸಲ್ಲಿ ಉಳಿಯುವಂತೆ ನಟಿಸಿದ್ದಾರೆ. ಹಾಗಾಗಿ ಈ ಸಿನಿಮಾ ವಿಶೇಷವಾಗಿದೆ’ ಎನ್ನುತ್ತಾರೆ.
ನಿರ್ಮಾಪಕ ಕೆ.ಎ. ಸುರೇಶ್, ‘ಯಾವುದೇ ಭಾರವಿಲ್ಲದ ಸುಂದರವಾದ ಸಿನಿಮಾ ನೀಡಿದ್ದೇವೆ, ನೋಡಿ ಆನಂದಿಸಿ’ ಎನ್ನುತ್ತಾರೆ. ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.