Asianet Suvarna News Asianet Suvarna News

16 ತಿಂಗಳ ನಂತರ ನಟನೆಗೆ ಮರಳಿದ ಅನಂತ್ ನಾಗ್; 'ದೃಶ್ಯ 2' ಚಿತ್ರೀಕರಣದಲ್ಲಿ ಭಾಗಿ!

16 ತಿಂಗಳ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನಂತ್ ನಾಗ್ ಚಿತ್ರರಂಗಕ್ಕೆ ಹೊಸ ದಾರಿಯೊಂದನ್ನು ಸೃಷ್ಟಿ ಮಾಡುವ ಕುರಿತ ಮಾತನ್ನಾಡಿದ್ದಾರೆ. ಹೊಸದೊಂದು ದೀಪ ಚಿತ್ರರಂಗಕ್ಕೆ ದಾರಿ ತೋರಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Kannada actor Anant Nag returns to acting after 16 months for drushya 2 vcs
Author
Bangalore, First Published Jul 14, 2021, 12:26 PM IST

ದೃಶ್ಯ 2 ಸಿನಿಮಾದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ಪಾತ್ರದ ಆಗಮನದಿಂದ ಸಿನಿಮಾದ ಹರಿವು ಬದಲಾಗುತ್ತದೆ. ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ, ಪಿ.ವಾಸು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 12ರಿಂದ ಶುರುವಾಗಿದೆ. 16 ತಿಂಗಳ ನಂತರ ಮನೆಯಿಂದ ಹೊರಬಂದು ಚಿತ್ರೀಕರಣದಲ್ಲಿ ಭಾಗವಹಿಸಿರುವ ಅನಂತ್ ನಾಗ್ ಮಾತುಗಳು ಇಲ್ಲಿವೆ.

- ನಾನು ಚಿತ್ರೀಕರಣದಲ್ಲಿ ಭಾಗಿಯಾಗಿರುವಾಗ ಅತಿ ಆನಂದದಲ್ಲಿ ಇರುತ್ತೇನೆ. ಸುಮಾರು 16 ತಿಂಗಳ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇಷ್ಟು ಸಮಯದಲ್ಲಿ ನಾನು ಹೆಚ್ಚೆಂದರೆ ಐದು ಸಲ ಮನೆಯಿಂದ ಹೊರಗೆ ಬಂದಿರಬಹುದು. ಈಗ ಎರಡೂ ಡೋಸ್ ಲಸಿಕೆ ಆಗಿದೆ. ಈ ಹಂತದಲ್ಲಿ ಆಕಸ್ಮಿಕವಾಗಿ ಮತ್ತು ಸಡನ್ ಆಗಿ ದೃಶ್ಯ 2 ಸಿನಿಮಾದಲ್ಲಿ ನಟಿಸುವ ಆಫರ್ ಬಂತು. ಪಾತ್ರ ಇಷ್ಟವಾಯಿತು. ರವಿಚಂದ್ರನ್ ನೀವೇ ನಟಿಸಿದರೆ ಪಾತ್ರಕ್ಕೆ ಶೋಭೆ ಎಂದರು. ಪಿ.ವಾಸು ಕೂಡ ನನ್ನನ್ನು ಆ ಪಾತ್ರದಲ್ಲಿ ಕಂಡರು. ಮೇಲಿಂದ ಬಂದ ಆದೇಶ ಎಂದು ಭಾವಿಸಿಕೊಂಡು ನನ್ನ ಪ್ರೀತಿಯ ಕೆಲಸಕ್ಕೆ ಮರಳಿದ್ದೇನೆ.

'ಅದ್ಭುತ ನಟ ಅನಂತ್‌ ನಾಗ್‌ಗೆ ಪದ್ಮ ಪುರಸ್ಕಾರ ದೊರೆಯಲಿ, ಅಭಿಯಾನಕ್ಕೆ ಬೆಂಬಲವಿರಲಿ'

- ದೃಶ್ಯ 2 ಚಿತ್ರದಲ್ಲಿ ನನ್ನದು ಸಿನಿಮಾ ಬರಹಗಾರನ ಪಾತ್ರ. ಅರ್ಧ ಸಿನಿಮಾ ಮುಗಿದ ಮೇಲೆ ಈ ಪಾತ್ರ ಬಂದು ಕತೆಯ ಹರಿವು ಬದಲಿಸುತ್ತದೆ. ಮುಚ್ಚಿದ ಕೇಸು ತೆರೆದುಕೊಳ್ಳುತ್ತದೆ. ಈ ತಿಂಗಳಾಂತ್ಯಕ್ಕೆ ದೃಶ್ಯ 2 ಚಿತ್ರದ ನನ್ನ ಪಾತ್ರದ ಚಿತ್ರೀಕರಣ ಮುಗಿಯುತ್ತದೆ. ಅನಂತರ ಗಾಳಿಪಟ 2, ಮೇಡ್ ಇನ್ ಬೆಂಗಳೂರು ಇತ್ಯಾದಿ ಸಿನಿಮಾಗಳ ಶೂಟಿಂಗ್ ನಡೆಯಬೇಕು.

Kannada actor Anant Nag returns to acting after 16 months for drushya 2 vcs

- ಇನ್ನು ಹಲವು ತಿಂಗಳುಗಳ ಕಾಲ ಥಿಯೇಟರ್ ತೆರೆಯುವುದು ಕಷ್ಟವಿದೆ. ಆ ಕಾರಣದಿಂದ ದೊಡ್ಡ ಸಿನಿಮಾಗಳನ್ನು ಮಾಡುವುದು ಕಷ್ಟವೇ. ನನಗೆ ಅನ್ನಿಸುವ ಪ್ರಕಾರ ಭವಿಷ್ಯ ಇರುವುದೇ ಓಟಿಟಿಯಲ್ಲಿ. ಚಿತ್ರರಂಗದ ಮಂದಿ ಕುಳಿತು ಮಾತನಾಡಿ ಕೊರೋನಾ ಸವಾಲನ್ನು ಎದುರಿಸಬೇಕು. ಓಟಿಟಿಗಳಲ್ಲಿ ಜಾಸ್ತಿ ಕನ್ನಡ ಸಿನಿಮಾಗಳು ಬರಬೇಕು. ಆಗ ಉದ್ಯಮಕ್ಕೆ ಹೊಸತೊಂದು ದಿಗಂತ ಗೋಚರಿಸುತ್ತದೆ. ಹೊಸ ಜನರೇಷನ್ ಹುಡುಗ-ಹುಡುಗಿಯರು ತುಂಬಾ ತಂತ್ರಜ್ಞಾನ ತಿಳಿದುಕೊಂಡಿದ್ದಾರೆ. ಹೊಸಬರು ಸೇರಿಕೊಂಡು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿದರೆ ಓಟಿಟಿಯಲ್ಲಿ ಗೆಲ್ಲಬಹುದು. ಅಲ್ಲದೇ ರಂಗಭೂಮಿಯಿಂದ ಬರುವವರು ಮತ್ತಿತರ ಆಸಕ್ತ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಗುತ್ತದೆ. ಚಿತ್ರರಂಗ ಬೆಳೆಯುತ್ತದೆ. ಇದರ ಕುರಿತು ವಿಸ್ತಾರವಾದ ಚರ್ಚೆ ಆಗಬೇಕು ಮತ್ತು ಚಿತ್ರರಂಗಕ್ಕೆ ಒಳ್ಳೆಯದಾಗಬೇಕು.

- ಬಹಳಷ್ಟು ಮಂದಿ ಓಟಿಟಿಗೆ ಕಾರ್ಯಕ್ರಮ ಮಾಡುತ್ತಿದ್ದೇವೆ, ನಟಿಸಬೇಕು ಎಂದು ಕೇಳಿಕೊಂಡರು. ಹಿಂದಿಯಿಂದಲೂ ಆಫರ್ ಬಂತು. ನಾನು ಕನ್ನಡದ ಓಟಿಟಿ ಸಿನಿಮಾದಲ್ಲಿ ನಟಿಸಿ ಅನಂತರ ಹಿಂದಿಗೆ ಬರುತ್ತೇನೆ ಎಂದು ಹೇಳಿದ್ದೇನೆ. ಕಡಿಮೆ ಬಜೆಟ್‌ನ ಒಳ್ಳೆಯ ಸಿನಿಮಾದಲ್ಲಿ ನಟಿಸುವುದಕ್ಕೆ ನಾನು ಸಂಭಾವನೆ ಕಡಿಮೆ ತೆಗೆದುಕೊಳ್ಳುವುದಕ್ಕೂ ರೆಡಿ ಇದ್ದೇನೆ. ಹೊಸತೊಂದು ದಾರಿ ಸೃಷ್ಟಿಯಾದರೆ ಅದೇ ನನಗೆ ಸಂತೋಷ.

- ನಟರನ್ನು, ಸಂಗೀತಕಾರರನ್ನು ಹೊರತು ಪಡಿಸಿ ಎಷ್ಟೋ ಸಾವಿರ ಮಂದಿ ಚಿತ್ರರಂಗ ನಂಬಿಕೊಂಡು ಬದುಕುತ್ತಿದ್ದಾರೆ. ಚಿತ್ರರಂಗ ಚೆನ್ನಾಗಿದ್ದರೇನೇ ಅವರೆಲ್ಲರ ಬದುಕಲ್ಲೂ ಬೆಳಕು ಕಾಣುತ್ತದೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

Follow Us:
Download App:
  • android
  • ios